ಡಾ ಮಂಜುನಾಥ್ ಗೆಲುವಿಗೆ ಹರಕೆ ಹೊತ್ತ ಸುಧಾಮೂರ್ತಿ; ಕೊನೆಗೂ ಫಲಿಸಿತಾ ಹರಕೆ
ಬೆಂಗಳೂರು, ಜೂನ್ 04: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಇತ್ತ ಆಡಳಿತರೂಢ ಕಾಂಗ್ರೆಸ್ ಸಹ 20 ಕ್ಷೇತ್ರಗಳನ್ನ ಗೆಲ್ಲುವ ಗುರಿ ಹಾಕಿಕೊಂಡಿದ್ದು, ಎರಡು ಪಕ್ಷಗಳ ಲೆಕ್ಕಾಚಾರ ತಲೆ ಕೆಳಗಾಗಿದೆ.
ಹೌದು,ಲೋಕಸಭಾ ಚುನಾವಣಾ ಫಲಿತಾಂಶ ಇಂದು(ಜೂನ್ 4) ಪ್ರಕಟವಾಗಿದ್ದು, ರಾಜ್ಯದಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಕಂಡಿದ್ರೆ, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನೂ ಡಿ ಕೆ ಬ್ರದರ್ಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದು, ಹಾಲಿ ಸಂಸದರಾಗಿದ್ದ ಡಿ ಕೆ ಸುರೇಶ್ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ.

ಡಿ ಕೆ ಬ್ರದರ್ಸ್ ಭದ್ರಕೋಟೆಯನ್ನ ವಶಪಡಿಸಿಕೊಳ್ಳುವ ಮೂಲಕ ಸೋಲಿನ ರುಚಿ ತೋರಿಸಿಲು ಕಮಲ -ದಳ ನಾಯಕರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಕಣಕ್ಕಿಳಿಸಿದ್ದು, ಇತ್ತ ಚುನಾವಣೆಯ ಬಳಿಕ ಡಾ. ಮಂಜುನಾಥ್ ಗೆಲುವಿಗೆ ಡಾ. ಸುಧಾಮೂರ್ತಿ ಹರಕೆ ಹೊತ್ತುಕೊಂಡಿದ್ದರು.
ಇನ್ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿ ಅವರು ಹರಕೆ ಹೊತ್ತ ಬಗ್ಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಡಾ. ಮಂಜುನಾಥ್ ಅವರೇ ಬಹಿರಂಪಡಿಸಿದರು. ಡಾ. ಸಿಎನ್ ಮಂಜುನಾಥ್ ಅವರು ಗೆದ್ದರೆ ಮಂತ್ರಾಲಯದಿಂದ ಸುಮಾರು ಆರು ಕಿಲೋ ಮೀಟರ್ ಇರುವ ಒಂದು ಸ್ಥಳದಿಂದ ಕಾಲ್ನಡಿಗೆ ಮೂಲಕ ಹೋಗಿ ರಾಯರ ಪಾದ ಪೂಜೆ ಮಾಡುತ್ತೇನೆ ಎಂದು ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿ ಅವರು ಹರಕೆ ಹೊತ್ತಿದ್ದರು. ಇಂದು ಫಲಿತಾಂಶ ಪ್ರಕಟವಾಗಿದ್ದು, ಕೊನೆಗೂ ಹರಕೆ ಫಲಿಸಿತಾ ಎಂಬ ಚರ್ಚೆ ಹುಟ್ಟಿಕೊಂಡಿದೆ.
ಚುನಾವಣೆ ಮುಗಿದ ಬಳಿಕ ಡಾ ಮಂಜುನಾಥ್ ಅವರು ಇನ್ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಸಂದರ್ಭದಲ್ಲಿ ಈ ಬಗ್ಗೆ ಸುಧಾಮೂರ್ತಿಯವರು ತಿಳಿಸಿದ್ದರು. ಗೆದ್ದರೆ ಮಂತ್ರಾಲಯದಿಂದ ಸುಮಾರು ಆರು ಕಿಲೋ ಮೀಟರ್ ಇರುವ ಒಂದು ಸ್ಥಳದಿಂದ ಕಾಲ್ನಡಿಗೆ ಮೂಲಕ ಹೋಗಿ ರಾಯರ ಪಾದ ಪೂಜೆ ಮಾಡುತ್ತೇನೆ ಎಂದು ಸುಧಾಮೂರ್ತಿ ಅವರು ಹರಕೆ ಹೊತ್ತಿದ್ದಾರೆ ಎಂದು ಮಂಜುನಾಥ್ ಅವರು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡಿದ್ದಾರೆ.
ನೂರೊಂದು ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಬೆಂಬಲಿಗರು
ರಾಜ್ಯದಲ್ಲಿ ಬಿಜೆಪಿಯು 17, ಕಾಂಗ್ರೆಸ್ 09 ಹಾಗೂ ಜೆಡಿಎಸ್ 02 ಕ್ಷೇತ್ರಗಳನ್ನು ವಶ ಪಡಿಸಿಕೊಂಡಿದೆ. ಅದರಂತೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಘಟಾನುಘಟಿ ನಾಯಕ ಡಿಕೆ ಸುರೇಶ್ ಅವರನ್ನು 2,69, 590 ಅಂತರದಲ್ಲಿ ಸೋಲಿಸಿ ಡಾ.ಮಂಜುನಾಥ್ ಅವರು ಗೆಲುವು ಸಾಧಿಸಿದ್ದಾರೆ. ಮಂಜುನಾಥ್ ಅವರ ಗೆಲುವಿನ ಹಿನ್ನೆಲೆ ಬೆಂಗಳೂರಿನ ಬನ್ನೇರುಘಟ್ಟ ಸರ್ಕಲ್ನಲ್ಲಿ ಚಂಪಕಧಾಮ ದೇವಾಲಯದ ಬಳಿ ಮಂಜುನಾಥ್ ಬೆಂಬಲಿಗರು ನೂರೊಂದು ತೆಂಗಿನಕಾಯಿ ಒಡೆದು ಹರಕೆ ತೀರಿಸಿ, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.












Click it and Unblock the Notifications