ಪ್ರಧಾನಿ ಮೋದಿ ಜೊತೆ ಯಡಿಯೂರಪ್ಪ ಚರ್ಚಿಸಲಿರುವ ವಿಷಯಗಳು
ಬೆಂಗಳೂರು, ಮೇ 11: ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆಗೆ ಇಂದು ಸಭೆ ನಡೆಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸಭೆ ಆರಂಭವಾಗಲಿದೆ. ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ವಿಡಿಯೋ ಸಂವಾದದಲ್ಲಿ ಭಾಗಿಯಾಗುತ್ತಿದ್ದು, ಕೆಲವೊಂದು ಮಹತ್ವದ ನಿರ್ಧಾರಗಳನ್ನು ಪ್ರಸ್ತಾಪ ಮಾಡಲಿದ್ದಾರೆ.
ಕೊವಿಡ್ 19 ಕುರಿತು ಮೋದಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಲಾಕ್‌ಡೌನ್ ಅನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳುವ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗುತ್ತದೆ.
ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸುವುದು ಮತ್ತು ಕೊರೊನಾ ಕೆಂಪು ವಲಯಗಳನ್ನು ಕಿತ್ತಳೆ ವಲಯಗಳನ್ನಾಗಿ ಮತ್ತು ಕಿತ್ತಳೆ ವಲಯಗಳನ್ನು ಹಸಿರು ವಲಯಗಳನ್ನಾಗಿ ಪರಿವರ್ತಿಸುವ ವಿಚಾರಕ್ಕೆ ಸಂವಾದದಲ್ಲಿ ಆದ್ಯತೆ ನೀಡಲಾಗುತ್ತದೆ.
ಈ ಹಿಂದೆ ಏಪ್ರಿಲ್ 27ರಂದು ಪ್ರಧಾನಿ ಅವರು ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದರು. ಆಗ ದೇಶದಲ್ಲಿ ಒಟ್ಟಾರೆ 28 ಸಾವಿರ ಕೊವಿಡ್ ದೃಢಪಟ್ಟ ಪ್ರಕರಣಗಳಿದ್ದವು. ಆದರೆ ಈಗ ಆ ಸಂಖ್ಯೆ 63 ಸಾವಿರ ದಾಟಿದೆ. ಆದ್ದರಿಂದ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ಹಿಂತೆಗೆಯುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

ಕರ್ನಾಟಕಕ್ಕೆ ಆರ್ಥಿಕ ನೆರವು ಬೇಕು
ಕರ್ನಾಟಕಕ್ಕೆ ಅಗತ್ಯವಾಗಿ ಆರ್ಥಿಕ ನೆರವು ಬೇಕೇ ಬೇಕು, ರಾಜ್ಯದಲ್ಲಿ ಎಲ್ಲಾ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ, ರಾಜ್ಯದಿಂದ 1,610 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೇವೆ. ಇದು ಕೇವಲ ನಾಲ್ಕೈದು ವರ್ಗಗಳಿಗೆ ಮಾತ್ರ ಕೊಡಲು ಸಾಧ್ಯವಾಗಿದೆ ಎನ್ನುವ ವಿಷಯವನ್ನು ಪ್ರಸ್ತಾಪಿಸಲಿದ್ದಾರೆ.

ವಲಸೆ ಕಾರ್ಮಿಕರದ್ದೇ ದೊಡ್ಡ ಸವಾಲು
ವಲಸೆ ಕಾರ್ಮಿಕರನ್ನು ರಾಜ್ಯದಿಂದ ಕಳುಹಿಸಲು, ಜೊತೆಗೆ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಕರೆಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಸ್ವಲ್ಪ ಮಟ್ಟಿಗೆ ಆರ್ಥಿಕ ಚಟುವಟಿಕೆಗಳು ಆರಂಭ
ಆರ್ಥಿಕ ಚಟುವಟಿಕೆಗಳನ್ನು ಸ್ವಲ್ಪ ಮಟ್ಟಿಗೆ ಆರಂಭಿಸಿದ್ದೇವೆ, ಆದರೆ ಸಧ್ಯಕ್ಕೆ ಯಾವುದೇ ಆರ್ಥಿಕ ಒಳಹರಿವು ಬರುತ್ತಿಲ್ಲ ಎನ್ನುವ ವಿಷಯ ಪ್ರಸ್ತಾಪಿಸಲಿದ್ದಾರೆ.

ವಿರೋಧ ಪಕ್ಷಗಳ ಸಾಲು ಸಾಲು ಪಟ್ಟಿ
ವಿರೋಧ ಪಕ್ಷಗಳು ಜನ ಸಾಮಾನ್ಯರಿಗೆ ಏನೆಲ್ಲಾ ಕೊಡಬೇಕು ಎಂದು ಸಾಲು ಸಾಲು ಪಟ್ಟಿಗಳನ್ನು ಸಿದ್ಧಪಡಿಸಿಕೊಂಡು ಭೇಟಿ ಮಾಡಿದ್ದಾರೆ. ನಮಗೆ ಈಗ ಇರುವ ಹಣಕಾಸಿನ ಸ್ಥಿತಿಯಲ್ಲಿ ತುಂಬಾ ಕಷ್ಟವಾಗುತ್ತಿದೆ. ನೀವು ಆರ್ಥಿಕ ನೆರವು ಅಗತ್ಯವಾಗಿ ನೀಡಬೇಕು ಎಂದು ಪ್ರಧಾನಿ ಮೋದಿ ಬಳಿ ಯಡಿಯೂರಪ್ಪ ಮನವಿ ಮಾಡಲಿದ್ದಾರೆ.












Click it and Unblock the Notifications