ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನಾ ಸಂಸದರೊಂದಿಗೆ ಎಚ್‌ಡಿಕೆ ಸಭೆ
ಬೆಂಗಳೂರು, ಜುಲೈ 13: ಕೇಂದ್ರದಲ್ಲಿ ಇದೇ ಜುಲೈ 18ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದು, ಅದಕ್ಕೆ ಮುನ್ನಾ ರಾಜ್ಯದ ಎಲ್ಲ ಸಂಸದರೊಂದಿಗೆ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ.
ಕಾವೇರಿ, ಮಹದಾಯಿ ವಿಷಯ ಸೇರಿದಂತೆ ಹಲವು ರಾಜ್ಯ ಹಿತದ ವಿಷಯಗಳು ಕೇಂದ್ರದ ಟೇಬಲ್ ಮೇಲಿದ್ದು ಅವುಗಳ ಬಗ್ಗೆ ಸಂಸತ್ತಿನಲ್ಲಿ ರಾಜ್ಯದ ಸಂಸದರ ಹೋರಾಟ ಹೇಗಿರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ವಿಶೇಷವಾಗಿ ಕಾವೇರಿ ವಿಷಯದ ಬಗ್ಗೆ ಸಂಸದರು ಒಗ್ಗಟ್ಟಾಗಿ ಸಂಸತ್ತಿನಲ್ಲಿ ಹೋರಾಟ ಮಾಡಬೇಕೆಂದು ಕಿವಿ ಮಾತು ಕುಮಾರಸ್ವಾಮಿ ಅವರು ಸಂಸದರಿಗೆ ಹೇಳಲಿದ್ದಾರೆ. ಜೊತೆಗೆ ರಾಜ್ಯದ ಬೇಡಿಕೆಗಳು ಮತ್ತು ಅದಕ್ಕಾಗಿ ಮಾಡಬೇಕಿರುವ ಒತ್ತಾಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಲಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನೀರು ನಿಯಂತ್ರಣ ಪ್ರಾಧಿಕಾರ ಎರಡರಲ್ಲೂ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಈಗಾಗಲೇ ಸರ್ಕಾರವು ಅಭಿಪ್ರಾಯಪಟ್ಟಿದ್ದು, ಸರ್ವ ಪಕ್ಷವು ಈ ಬಗ್ಗೆ ಒಗ್ಗಟ್ಟಾಗಿ ಹೊರಾಡಬೇಕೆಂದು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಲೋಕಸಭೆ ಚುನಾವಣೆಗೆ ಮುನ್ನಾ ನಡೆಯಲಿರುವ ಕೊನೆಯ ಲೋಕಸಭೆ ಅಧಿವೇಶನ ಇದಾಗಿದ್ದು, ಈ ಅಧಿವೇಶನ ಅತ್ಯಂತ ಮಹತ್ವದ್ದಾಗಿದೆ. ಕಾವೇರಿ ವಿಷಯ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಈ ಬಾರಿ ಕಾವೇರಿದ ಚರ್ಚೆಗಳು ನಡೆಯಲಿವೆ.
ಜುಲೈ 18ಕ್ಕೆ ಪ್ರಾರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನ 18 ದಿನಗಳ ಕಾಲ ಅಂದರೆ ಆಗಸ್ಟ್ 10ರ ವರೆಗೆ ನಡೆಯಲಿದೆ.












Click it and Unblock the Notifications