ಚುನಾವಣೆ ಬಳಿಕ ಸಿದ್ದು ಮೂಲೆಗುಂಪು: ಕುಮಾರಸ್ವಾಮಿ

'ಜೆಡಿಎಸ್ ಯಾವುದೇ ಕಾರಣದಿಂದಲೂ ಮುಖ್ಯಮಂತ್ರಿ ಸ್ಥಾನವನ್ನು ನಿಮಗೆ ತಪ್ಪಿಸಿಲ್ಲ. ಸೋನಿಯಾ ಗಾಂಧಿ ನಿವಾಸದಲ್ಲಿ ಏನು ನಡೆಯಿತು ಎಂಬುದನ್ನು ಯಾರ ಬಾಯಿಂದಲಾದರೂ ಕೇಳಿ ತಿಳಿದುಕೊಳ್ಳಿ. ಸುಖಾಸುಮ್ಮನೆ ದೇವೇಗೌಡರ ಮೇಲೆ, ಜೆಡಿಎಸ್ ಮೇಲೆ ಆರೋಪ ಮಾಡಬೇಡಿ. ಬಹಿರಂಗ ಚರ್ಚೆಗೆ ಬನ್ನಿ. ಸತ್ಯ ಏನೆಂಬುದನ್ನು ತಿಳಿಸಿಕೊಡುತ್ತೇನೆ' ಎಂದು ಕುಮಾರಸ್ವಾಮಿ ನೇರ ಸವಾಲು ಹಾಕಿದ್ದಾರೆ.
'ಲೋಕಸಭಾ ಚುನಾವಣೆ ನಂತರ ನಿಮ್ಮ ಪಕ್ಷದ ಮುಖಂಡರೇ ನಿಮ್ಮನ್ನು ಮೂಲೆಗುಂಪು ಮಾಡುತ್ತಾರೆ. ಈಗಾಗಲೇ ಷಡ್ಯಂತರ ಆರಂಭವಾಗಿದೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಏನೂ ಮಾಡಬೇಕಾಗಿಲ್ಲ' ಎಂದೂ ಕುಮಾರಸ್ವಾಮಿ ಅವರು ಸಿಎಂ ಸಿದ್ದುರನ್ನು ಎಚ್ಚರಿಸಿದರು.
'ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ದಿನೇ ದಿನೆ ಕಡಿಮೆಯಾಗುತ್ತಿದೆ. ಮತ್ತೊಂದು ಕಡೆ ಬೇಸಿಗೆ ಬರುತ್ತಿದೆ. ಕಾವೇರಿ ನದಿ ನಮ್ಮ ರಾಜ್ಯದಲ್ಲೇ ಹುಟ್ಟಿದರೂ ಕಾವೇರಿ ನೀರಿಗಾಗಿ ಭಿಕ್ಷೆ ಬೇಡುವಂಥ ಪರಿಸ್ಥಿತಿ ಬರುತ್ತಿದೆ. ಬೆಂಗಳೂರು ನಗರದಲ್ಲೇ ಸರಿಯಾಗಿ ಕುಡಿಯುವುದಕ್ಕೆ ನೀರು ಸಿಗುತ್ತಿಲ್ಲ. ಇನ್ನು ಸುತ್ತಮುತ್ತಲ 9 ಜಿಲ್ಲೆಗಳ ಪಾಡೇನು? ಅವರಿಗೆಲ್ಲಾ ಎಲ್ಲಿಂದ ಖರೀದಿ ಮಾಡಿ ನೀರು ತಂದುಕೊಡುತ್ತೀರಾ? ಅಂಥ ಇಚ್ಛಾಶಕ್ತಿ ನಿಮಗಿದೆಯಾ? ಇನ್ನು ಎಷ್ಟು ಕಾಲ ಕೇಂದ್ರದಿಂದ ಇಂತಹ ಅನ್ಯಾಯವನ್ನು ಸಹಿಸಬೇಕು' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
'ತಮಿಳುನಾಡು ಯಾವುದೇ ಯೋಜನೆ ಮಾಡಲಿ ಅವರಿಗೆ ಯಾವುದೇ ಆತಂಕವಿಲ್ಲ. ಕೇಂದ್ರದ ಅನುಮತಿಯೂ ಬೇಡ. ಅದೇ ನಾವು ಯಾವುದಾದರೂ ಯೋಜನೆ ಮಾಡಬೇಕು ಎಂದರೆ ಕೇಂದ್ರದ ಅನುಮತಿ ಬೇಕು, ಪರಿಸರ ಇಲಾಖೆಯ ಒಪ್ಪಿಗೆ ಬೇಕು ಎಂದು ಇಲ್ಲ ಸಲ್ಲದ ನಿರ್ಬಂಧ ಹಾಕಲಾಗುತ್ತದೆ. ಆದರೆ ತಮಿಳುನಾಡಿಗೆ ಯಾವುದೇ ನೀತಿ-ನಿಯಮವಿಲ್ಲವೆ? ನಮಗೊಂದು ಕಾನೂನು, ಅವರಿಗೊಂದು ಕಾನೂನೇ? ಇಷ್ಟೆಲ್ಲಾ ಅನ್ಯಾಯ ನಡೆಯುತ್ತಿದ್ದರೂ ಕೇಂದ್ರ ಸರಕಾರವನ್ನು ಪ್ರಶ್ನಿಸುವ ಮತ್ತು ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಏಕೆ ಮಾಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.












Click it and Unblock the Notifications