Real Independence Day: ಮೊಬೈಲ್ ಬಳಸದಂತೆ ಸಿಎಂ ಸಿದ್ದರಾಮಯ್ಯ ಮನವಿ, ಶಪಥಗಳ ಪಟ್ಟಿ ಇಲ್ಲಿದೆ
ಬೆಂಗಳೂರು, ಆಗಸ್ಟ್ 16: ಕರ್ನಾಟಕವು ಮಂಗಳವಾರವಷ್ಟೇ 77ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಸಂಭ್ರಮಿಸಿದೆ. ಈ ಸ್ವಾತಂತ್ರ್ಯೋತ್ಸವವನ್ನು ನಿಜವಾಗಿ ಆಚರಿಸಬೇಕಾದರೆ ನೀವು ಮೊಬೈಲ್ ಬಳಕೆ ಬಿಡಿ, ಅದಕ್ಕಾಗಿ ಶಪಥ ಮಾಡಿ ಎಂದು ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ. ಈ ಕುರಿತು ಸಿಎಂ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮುಖ್ಯಮಂತ್ರಿಗಳು 'ರೇಡಿಯೋ ಸಿಟಿ ಕನ್ನಡ' ಜೊತೆಗೆ ಮಾತನಾಡಿದ್ದಾರೆ. ನಾವು ಸಾಮಾನ್ಯವಾಗಿ ಹೊಸ ವರ್ಷದಲ್ಲಿ ಹೊಸ ನಿರ್ಧಾರ (Resolution) ಕೈಗೊಳ್ಳುತ್ತೇವೆ. ಅಂದರೆ ಮುಂದಿನ ಒಂದು ವರ್ಷದವರೆಗೆ ಕೆಲವು ಚಟುವಟಿಕೆಗಳಿಗೆ ಸ್ವಯಂಪ್ರೇರಿತವಾಗಿ ನಿರ್ಬಂಧ ವಿಧಿಸಿಕೊಳ್ಳುತ್ತೇವೆ. ಇನ್ನೂ ಕೆಲವು ಚಟುವಟಿಕೆಗಳನ್ನು ಹೊಸದಾಗಿ ಆರಂಭಿಸಲು ತೀರ್ಮಾನಿಸುತ್ತೇವೆ.

ಅದೇ ರೀತಿ ನಿಜವಾದ ಸ್ವಾತಂತ್ರ್ಯ ದಿನಾಚರಣೆಗಾಗಿ (Real Independec day 2023) ಮೊಬೈಲ್ ಬಳಕೆ ಬಿಡುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ. ಇಲ್ಲಿ ಮುಖ್ಯ ವಿಚಾರವೇನೆಂದರೆ ರಾಜ್ಯದ ಮುಖ್ಯಮಂತ್ರಿಗಳು ಸ್ವತಃ ಮೊಬೈಲ್ ಅನ್ನು ಬಳಸುವುದಿಲ್ಲ. ಈ ಕುರಿತು ಅವರೇ ಕೆಲವು ಸಂದರ್ಭಗಳಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರ ಬಳಿ ಸ್ಮಾರ್ಟ್ ಪೋನ್ ಇಲ್ಲ. ಅವರ ಸಿಬ್ಬಂದಿಯೇ ಸಾಮಾಜಿಕ ಜಾಲತಾಣ, ಪ್ರಕಟಣೆ, ಪೋಸ್ಟ್, ಕರೆಗಳನ್ನು ನಿರ್ವಹಿಸುತ್ತಾರೆ ಎನ್ನಲಾಗಿದೆ.
ಹಾಗಾದರೆ ತಂತ್ರಜ್ಞಾನ, ಅಂತರ್ಜಾಲ, ಸಾಮಾಜಿಕ ಜಾಲತಾಣ ಯುಗದಲ್ಲಿ ಮೊಬೈಲ್/ ಸ್ಮಾರ್ಟ್ ಫೋನ್ ಸೇರಿದಂತೆ ಗ್ಯಾಡ್ಜೆಟ್ಸ್ ಬಳಕೆ ಕಡಿಮೆ ಮಾಡುವುದು ಸಾಧ್ಯವೇ?. ಒಂದು ವರದಿ ಪ್ರಕಾರ ಮಕ್ಕಳು ಸೇರಿದಂತೆ ಸಂಬಂಧಗಳನ್ನು ಕಡೆಗಣಿಸುವಷ್ಟರ ಮಟ್ಟಿಗೆ ಇಂದು ನಾವು ಮೊಬೈಲ್ ಬಳಕೆ ಮಾಡುತ್ತಿದ್ದೇವೆ ಎನ್ನಲಾಗಿದೆ. ಹಾಗಾದರೆ ಇದರಿಂದ ಹೊರ ಬರಬಹುದೇ? ಮುಖ್ಯಮಂತ್ರಿಗಳು ನೀಡಿರುವ ಸಲಹೆಗಳು ಏನು?. ಮೊಬೈಲ್ ಬಿಟ್ಟ ಅವಧಿಯಲ್ಲಿ ಏನು ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿ ತಿಳಿಯಿರಿ.

ಸಿಎಂ ಸಿದ್ದರಾಮಯ್ಯ ಸೂಚಿಸಿದ 'ಶಪಥ'ಗಳು ಇವು
* ನೀವ ಮಲಗುವ ಒಂದು ಗಂಟೆ ಮೊದಲು ಮತ್ತು ಬೆಳಗ್ಗೆ ಎದ್ದ ಮೇಲೆ ಒಂದು ಗಂಟೆ ಮೊಬೈಲ್ (Gadgets) ಬಳಸುವುದಿಲ್ಲ ಎಂದು ಶಪಥ ಮಾಡಿ.
* ನೀವು ಮೊಬೈಲ್ ಅನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ನಿರ್ಧರಿಸಿ.
* ಇಂದಿನಿಂದ ಹೊಸಬರನ್ನು ಮಾತನಾಡಿಸುತ್ತೇನೆ. ಹೊಸ ಬಾಂಧವ್ಯ ಬೆಳೆಸುತ್ತೇನೆ ಎಂದು ತೀರ್ಮಾನಿಸಿದೆ.
* ನನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಒಳ್ಳೆಯ ಸಮಯ ಕಳೆಯುತ್ತೇನೆ.
* ಊಟ-ತಿಂಡಿ ಮಾಡುವಾಗ ಮೊಬೈಲ್ ಅನ್ನು ಬಳಸುವುದಿಲ್ಲ.
* ನಾನು ಓದುವ ಸಮಯದಲ್ಲಿ ಫೋನ್ ಬಳಸದೇ ಪುಸ್ತಕವನ್ನೇ ಬಳಸುತ್ತೇನೆ ಎಂದು ನೀವು ನಿರ್ಧರಿಸಿ.
* ಪ್ರತಿ ವಾರಾಂತ್ಯದಲ್ಲಿ ಸ್ವಾರ್ಟ್ ಫೋನ್ಸ್ ಬಳಸದೇ ಬೇರೆ ಏನಾದರೂ ಒಂದು ಚಟುವಟಿಕೆ ಮಾಡುತ್ತೇನೆ.
* ವಾರದಲ್ಲಿ ಒಂದು ದಿನ ಮೊಬೈಲ್ ಬಳಕೆಯಿಂದ ದೂರು ಉಳಿಯುತ್ತೇನೆ ಎಂದು ಶಪಥ ಮಾಡಿ.
* ನೀವು ಮೊಬೈಲ್ ನಲ್ಲಿ ಸ್ಕ್ರೀನ್ ನಲ್ಲಿ ಸಮಯ ನಿಗದಿಪಡಿಸಿ ಅದನ್ನು ಮೀರದಂತೆ ಕೆಲಸ ಮಾಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿಕೊಳ್ಳಿ.
* ನೀವು ಸ್ಮಾರ್ಟ್‌ಫೋನ್ ಬಳಸದೇ ನಿಮಗಾಗಿ ಸಮಯ ನೀಡುತ್ತೇವೆ ಎಂದು ಶಪಥ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.
ಹೀಗೆ ನಿರ್ಧರಿಸುವ ಮೂಲಕ ನಿಜವಾಗಿಯೂ ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತೆ ತಿಳಿಸಿರುವ ಅವರು ರಾಜ್ಯ ಜನರಿಗೆ ಶುಭಾಶಯದ ತಿಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಂತಹ ಶಪಥಗಳ ಮೂಲಕ ನಾವು ಒಂದಷ್ಟು ಸಮಯವನ್ನು ನಮಗಾಗಿ, ನಮ್ಮವರಿಗಾಗಿ ಕಳೆಯುವ ಅಗತ್ಯತೆ ಇದೆ.












Click it and Unblock the Notifications