ಇಷ್ಟೊಂದು ಕೀಳು ಮನಸ್ಥಿತಿ ಯಾಕೆ? ಜೆ.ಪಿ ನಡ್ಡಾ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ
ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ದೌರ್ಜನ್ಯ ಪ್ರಕರಣದ ಬಗ್ಗೆ ಬಿಜೆಪಿ ಸಂಸದರು ಶುಕ್ರವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬೆಳಗಾವಿ ಪ್ರಕರಣ ಬಗ್ಗೆ ಸತ್ಯ ಶೋಧನಾ ಸಮಿತಿ ರಚಿಸುವುದಾಗಿ ಹೇಳಿದ್ದು, ರಾಜ್ಯ ಸರ್ಕಾರದ ಕೋಪಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಬೆಳಗಾವಿ ಮಹಿಳೆ ಪ್ರಕರಣ ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ. ಬಿಜೆಪಿ ರಾಜ್ಯಗಳಲ್ಲಿ ಇಂತಹ ಘಟನೆ ನಡೆದಾಗ ಸುಮ್ಮನಿರುವ ನಡ್ಡಾ ರಾಜ್ಯದಲ್ಲಿ ನಡೆದ ಘಟನೆ ಬಗ್ಗೆ ಮಾತ್ರ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ಸಾಲುಸಾಲು ದೌರ್ಜನ್ಯದ ಪ್ರಕರಣಗಳು ನಡೆಯುತ್ತಿದ್ದಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಕಣ್ಣು ಮುಚ್ಚಿ ಕೂತಿದ್ದರು. ಆದರೆ ಇತ್ತೀಚೆಗೆ ಬೆಳಗಾವಿಯಲ್ಲಿ ಮಹಿಳೆಯೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಮಾತ್ರ ಅವರ ಕಣ್ಣಿಗೆ ಕಂಡಿದ್ದು ಅದರಲ್ಲೂ ರಾಜಕೀಯ ಬೇಳೆ ಬೇಯಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಹಿಳೆ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಅತ್ಯಂತ ಖಂಡನೀಯ. ಮನುಷ್ಯರೆಲ್ಲರೂ ತಲೆತಗ್ಗಿಸುವಂತಹ ಆ ಘಟನೆಯನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಕೀಳು ಮನಸ್ಥಿತಿ ಇನ್ನೂ ಖಂಡನೀಯ ಎಂದು ಹೇಳಿದ್ದಾರೆ.
ಅಪರಾಧಿಗಳಿಗೆ ಕಠಿಣ ಶಿಕ್ಷೆ
ಬೆಳಗಾವಿಯ ಘಟನೆ ಗೊತ್ತಾದ ತಕ್ಷಣವೇ ಗೃಹ ಸಚಿವರಾದ ಡಾ. ಪರಮೇಶ್ವರ್ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಸಂತ್ರಸ್ತೆಯ ಮನೆಗೆ ಭೇಟಿಕೊಟ್ಟು ಸಾಂತ್ವನ ನೀಡಿದ್ದು ಮಾತ್ರವಲ್ಲ ಪರಿಹಾರವನ್ನೂ ನೀಡಿದ್ದಾರೆ.
ಪೊಲೀಸರು ಇಪ್ಪತ್ತನಾಲ್ಕು ಗಂಟೆಗೊಳಗೆ ದೌರ್ಜನ್ಯ ನಡೆಸಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಿದ್ದಾರೆ. ನಾನೇ ಖುದ್ದಾಗಿ ಈ ಪ್ರಕರಣದ ತನಿಖೆಯ ಮೇಲೆ ನಿಗಾ ಇಟ್ಟಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಅಮಾನುಷ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡ ಕ್ರಮದಿಂದ ರಾಜ್ಯದ ಬಿಜೆಪಿ ನಾಯಕರಿಗೂ ಸಮಾಧಾನವಾಗಿದೆ ಹೀಗಿರುವಾಗ ಘಟನೆ ನಡೆದು ನಾಲ್ಕು ದಿನಗಳನಂತರ ಇದ್ದಕ್ಕಿದ್ದ ಹಾಗೆ ಜೆಪಿ ನಡ್ಡಾ ಎಚ್ಚೆತ್ತುಕೊಂಡು ಈ ಪ್ರಕರಣವನ್ನು ಕೆದಕಲು ಹೊರಟಿರುವುದಕ್ಕೆ ರಾಜಕೀಯ ದುರುದ್ದೇಶ ಕಾರಣವೇ ಹೊರತು ಮಹಿಳೆಯರ ಮೇಲಿನ ಕಾಳಜಿಯಿಂದ ಖಂಡಿತ ಅಲ್ಲ.
ನಡ್ಡಾ ಅವರು ಮಹಿಳೆಯರ ಮೇಲೆ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ ಮಹಿಳೆಯರ ರಕ್ಷಣೆಯಲ್ಲಿ ವಿಫಲವಾಗಿದ್ದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗಿತ್ತು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ನ್ಯಾಷನಲ್ ಕ್ರೈಮ್ ಬ್ಯುರೋ ವರದಿ ಪ್ರಕಾರ, ಕಳೆದ ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕದಲ್ಲಿ 17,813 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರ ಹಿಂದಿನ ವರ್ಷ 2021ರಲ್ಲಿ 14,468 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು. ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಏನು ಮಾಡುತ್ತಿದ್ದರು? ವನವಾಸದಲ್ಲಿದ್ದರಾ? ಅವರದ್ದೇ ಸರ್ಕಾರದ ಮೂಗಿನಡಿಯಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿದ್ದದ್ದು ಗಮನಕ್ಕೆ ಬಂದಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮಣಿಪುರದಿಂದ ಗುಜರಾತ್‌ವರೆಗೆ, ಉತ್ತರಪ್ರದೇಶದಿಂದ ಮಧ್ಯಪ್ರದೇಶದ ವರೆಗೆ ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಅಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನ್ಯಾಷನಲ್ ಕ್ರೈಮ್ ಬ್ಯುರೋ ವರದಿಗಳೇ ಹೇಳುತ್ತಿವೆ. ಬಿಜೆಪಿ ಮಹಿಳಾ ವಿರೋಧಿ ಎನ್ನುವುದನ್ನು ಈ ಪ್ರಕರಣಗಳು ಸಾಬೀತು ಪಡಿಸಿವೆ.
ರಾಜ್ಯ ಬಿಜೆಪಿಯೊಳಗಿನ ಒಳಜಗಳ ತಾರಕಕ್ಕೇರಿದ್ದು ಪಕ್ಷದ ಮಾನಮರ್ಯಾದೆ ಬೀದಿಬೀದಿಗಳಲ್ಲಿ ಹರಾಜಾಗುತ್ತಿದೆ. ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ವಿರುದ್ಧ ಪಕ್ಷದ ಹಿರಿಯ ನಾಯಕರೇ ಗಂಭೀರ ಸ್ವರೂಪದ ಆರೋಪಗಳನ್ನು ಮಾಡುತ್ತಿದ್ದಾರೆ. ಜೆಪಿ ನಡ್ಡಾ ಅವರಿಗೆ ದಮ್ಮು ತಾಕತ್ತು ಇದ್ದರೆ ಈ ನಾಯಕರ ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿಯೊಂದನ್ನು ಕಳಿಸಲಿ ಎಂದು ಸವಾಲು ಹಾಕಿದ್ದಾರೆ.












Click it and Unblock the Notifications