ಟ್ವಿಟ್ಟರ್ ಮೂಲಕ ಸರ್ಕಾರದ ಸಾಧನೆಗಳನ್ನು ಹಂಚಿಕೊಂಡ ಸಿಎಂ
ಬೆಂಗಳೂರು, ಫೆಬ್ರವರಿ 22: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಹಾಗೂ ಬಜೆಟ್ ಮೇಲಿನ ಚರ್ಚೆಯ ಪ್ರಮುಖ ವಿಷಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಸಿಎಂ ಆಫ್ ಕರ್ನಾಟಕ ಟ್ವಿಟರ್ ಖಾತೆಯಿಂದ ನವ ಕರ್ನಾಟಕ ನಿರ್ಮಾಣ (#navakarnatakanirmana) ಹ್ಯಾಷ್ ಟ್ಯಾಗ್ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರವು ರಾಜ್ಯಕ್ಕೆ ನೀಡಿದ ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕಾವೇರಿ ವಿವಾದದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಲೆಕ್ಕಕೊಡಿ ಎಂದು ಕೇಳಿದ ರಾಷ್ಟ್ರ ಮತ್ತು ರಾಜ್ಯ ಬಿಜೆಪಿ ನಾಯಕರಿಗೆ ರಾಜ್ಯದ ಸಾಧನೆಗಳನ್ನು ಟ್ವೀಟ್ ಮೂಲಕ ಹಂಚಿಕೊಂಡು ಟಾಂಗ್ ನೀಡಿದಂತಿದ್ದಾರೆ.
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ಹೇಳಿದ್ದಾರೆ. ನಮ್ಮ ಸರ್ಕಾರ ಕಳೆದ ಐದು ವರ್ಷದಲ್ಲಿ ನುಡಿದಂತೆ ನಡೆದಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಜನರಿಗೂ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂಬುದು ಮನವರಿಕೆ ಆಗಿದೆ. ಹೀಗಾಗಿ ಆಡಳಿತ ವಿರೋಧಿ ಅಲೆ ಇಲ್ಲ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಸ್ತುಸ್ಥಿತಿ ಆಧಾರದ ಮೇಲೆ ಕನಸುಗಳನ್ನು ಕಟ್ಟಬೇಕು. ಅದನ್ನು ನನಸಾಗಿಸಲು ಪ್ರಯತ್ನ ಮಾಡಬೇಕು. ಅದನ್ನು ನಾವು ಐದು ವರ್ಷದಲ್ಲಿ ಮಾಡಿದ್ದೇವೆ. ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡುವುದು ನಮ್ಮ ಕನಸಾಗಿತ್ತು. ಅನ್ನಭಾಗ್ಯ ಯೋಜನೆ ಮೂಲಕ ಅದನ್ನು ಸಾಕಾರ ಮಾಡುತ್ತಿದ್ದೇವೆ ಎಂದೂ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಹಸಿದವರಿಗೆ ಅನ್ನ
ಶಾಲಾ ಮಕ್ಕಳಿಗೆ ಹಾಲು, ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಪರಿಣಾಮ ರಾಜ್ಯ ಹಸಿವು ಮುಕ್ತ ಆಗಿದೆ. ಇದಕ್ಕಿಂತ ತೃಪ್ತಿ ಬೇರಿಲ್ಲ. ಹಸಿದು ಬಂದವರಿಗೆ ಅನ್ನ, ಹಾಲು, ಬೆಣ್ಣೆ ನೀಡಬೇಕು ಎಂದು ಸರ್ವಜ್ಞರೇ ಹೇಳಿಲ್ಲವೇ? ಇದು ನಮ್ಮ ಸರ್ಕಾರದ ಕೊಡುಗೆ ಎಂದು ಹೇಳುವುದಿಲ್ಲ. ಇದು ಒಂದು ದೊಡ್ಡ ಜನಸೇವೆ ಎಂದು ಕರ್ನಾಟಕ ಸಿಎಂ ಖಾತೆಯಿಂದ ಟ್ವೀಟ್ ಆಗಿದೆ.

15 ಲಕ್ಷ ಕುಟುಂಬಕ್ಕೆ ಪಡಿತರ ಚೀಟಿ
1.8 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಸಿಗುತ್ತಿದೆ. ಇನ್ನೂ 15 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿ ನೀಡಲಿದ್ದೇವೆ. ಬಡವರಿಗಾಗಿ ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. 30 ಲಕ್ಷ ಕುಟುಂಬಗಳಿಗೆ ಇದರಿಂದ ಅನುಕೂಲ ಆಗಲಿದೆ. ತಾಯಂದಿರು ಅಡುಗೆ ಮಾಡುವಾಗ ಹೊಗೆಗೆ ಕಣ್ಣೀರು ಹಾಕಬಾರದು ಎಂಬುದು ಈ ಯೋಜನೆಯ ಉದ್ದೇಶ ಎಂದು ಸಿಎಂ ಹೇಳಿದ್ದಾರೆ.

ಆತ್ಮಹತ್ಯೆ ಈಗ ಕಡಿಮೆ ಆಗಿದೆ
ಭೀಕರ ಬರಗಾಲದ ಪರಿಣಾಮ ಆತ್ಮಹತ್ಯೆ ಪ್ರಕರಣಗಳು ಕೊಂಚ ಹೆಚ್ಚಾದವು. ಆದರೆ ಈ ವರ್ಷ ಕಡಿಮೆಯಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತದೆ. ಹೀಗಾಗಿ ಸಾವಿಗೆ ಶರಣಾಗಬೇಡಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಈ ಹಿಂದೆಯೂ ಮನವಿ ಮಾಡಿದ್ದೇನೆ.

2000 ಪಿಂಚಣಿ
ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬದವರಿಗೆ ನೀಡುವ ಪರಿಹಾರ ಐದು ಲಕ್ಷಕ್ಕೆ ಹೆಚ್ಚಿಸಿ ಮಾಸಿಕ ಪಿಂಚಣಿಯಾಗಿ ರೂ.2,000 ನೀಡುತ್ತಿದ್ದೇವೆ. ಮಕ್ಕಳಿಗೆ ಶಿಕ್ಷಣ, ಕುಟುಂಬದವರಿಗೆ ಆರೋಗ್ಯ ಸೌಲಭ್ಯ ನೀಡುತ್ತಿದ್ದೇವೆ. ಕೃಷಿ ಭಾಗ್ಯ ಯೋಜನೆಯಡಿ ರೂ.1920 ಕೋಟಿ ವೆಚ್ಚದಲ್ಲಿ 1.92 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಟ್ವಿಟರ್ ಮೂಲಕ ಹೇಳಿದ್ದಾರೆ.

ಕಾವೇರಿ ತೀರ್ಪು ಸಮಾಧಾನ ತಂದಿದೆ
ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧದ ತೀರ್ಪಿನಲ್ಲಿ ಬೆಂಗಳೂರಿಗೂ ನೀರು ಸಿಕ್ಕಿದೆ. ಸರ್ಕಾರ ಆ ತೀರ್ಪು ಸ್ವಾಗತಿಸುತ್ತೇನೆ ಹಾಗೂ ವಾದ ಮಂಡಿಸಿದ ನಮ್ಮ ವಕೀಲರನ್ನು ಅಭಿನಂದಿಸುತ್ತೇನೆ. ಮಹಾದಾಯಿ ವಿಚಾರದಲ್ಲೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಕಾವೇರಿ ವಿಚಾರದಲ್ಲೂ ಕೆಲವರು ರಾಜಕೀಯ ಮಾಡಲು ನೋಡಿದರು. ರಾಜ್ಯದ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ ಎಂದು ತೀರ್ಪು ಬರುವ ಮುನ್ನಾ ದಿನ ಆರೋಪಿಸಿದರು. ಆದರೆ, ತೀರ್ಪಿನಿಂದ ಎಲ್ಲರೂ ಸಮಾಧಾನದ ಉಸಿರು ಬಿಟ್ಟಿದ್ದಾರೆ ಎಂದು ಸಿಎಂ ಹೇಳಿದ್ದಾರೆ

70 ಲಕ್ಷ ರೈತರಿಗೆ ಲಾಭ
70 ಲಕ್ಷ ರೈತರಿಗಾಗಿ ರೈತ ಬೆಳಕು ಯೋಜನೆ ಜಾರಿಗೆ ತರುತ್ತಿದ್ದೇವೆ. ಒಣಭೂಮಿ ಬೇಸಾಯ ಮಾಡುವವರಿಗೆ ಇದರಿಂದ ಅನುಕೂಲ ಆಗಲಿದೆ. ಇದರ ವಾರ್ಷಿಕ ವೆಚ್ಚ ಮೂರೂವರೆ ಸಾವಿರ ಕೋಟಿ. ತೆಲಂಗಾಣದ ಬಳಿಕ ಇಂತಹ ಯೋಜನೆ ಜಾರಿಗೆ ತಂದ ಎರಡನೇ ರಾಜ್ಯ ಕರ್ನಾಟಕ. ಈ ಯೋಜನೆಯಲ್ಲಿ ರೈತರಿಗೆ ಐದು ಸಾವಿರದಿಂದ ಹತ್ತು ಸಾವಿರದವರೆಗೆ ಪ್ರೋತ್ಸಾಹ ಧನ ಸಿಗಲಿದೆ.

ಕೆರೆ ತುಂಬಿಸುವ ಉದ್ದೇಶ
ನಮ್ಮ ಸರ್ಕಾರ ನೀರಾವರಿಗೂ ಹೆಚ್ಚು ಅನುದಾನ ಒದಗಿಸುವ ಜೊತೆಗೆ ಕೆರೆಗಳನ್ನು ತುಂಬಿಸುತ್ತಿದ್ದೇವೆ. 2,600 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲು ಸುಮಾರು ರೂ.8000 ಕೋಟಿ ವೆಚ್ಚ ಮಾಡಿದ್ದೇವೆ. ಕೆರೆಗಳನ್ನು ತುಂಬಿಸಿದ್ದರಿಂದ ಅಂತರ್ಜಲದ ಮಟ್ಟ ಹೆಚ್ಚಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದೆ. ಕೋಲಾರ ಮತ್ತಿತರ ಜಿಲ್ಲೆಗಳಿಗೆ ಸಂಸ್ಕರಿಸಿದ ನೀರು ಕೊಡಲಿದ್ದೇವೆ. ಇದು ಕುಡಿಯುವ ಉದ್ದೇಶಕ್ಕೆ ಅಲ್ಲ. ಕೆರೆಗಳನ್ನು ತುಂಬಿಸಲು ಮಾತ್ರ.ಇದು ರೂ.2450 ಕೋಟಿ ವೆಚ್ಚದ ಯೋಜನೆ. 13 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನ ಹೊಳೆ ಯೋಜನೆ ಜಾರಿಯಾಗುತ್ತಿದೆ. ಇದರಿಂದ ಬಯಲುಸೀಮೆ ಜಿಲ್ಲೆಗಳಲ್ಲಿ ಕೆರೆಗಳು ತುಂಬಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಲಿದೆ.

ಎಲ್ಲಾ ಯೋಜನೆ ಪೂರ್ಣಗೊಳಿಸುವ ಗುರಿ
ನೀರಾವರಿಗೆ ಐದು ವರ್ಷದಲ್ಲಿ ರೂ.58 ಸಾವಿರ ಕೋಟಿ ಅನುದಾನ ನಿಗದಿ ಮಾಡಿ ಜನವರಿ ವರೆಗೆ ರೂ.44, 542 ಕೋಟಿ ವೆಚ್ಚ ಮಾಡಿದ್ದೇವೆ. ಕೃಷ್ಣಾ ಮೇಲ್ದಂಡೆಗೆ ಎಂಟೂವರೆ ಸಾವಿರ ಕೋಟಿ ನಿಗದಿ ಮಾಡಿ ಏಳೂವರೆ ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ನೀರಾವರಿಯ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿಗೂ ಹೆಚ್ಚು ಅನುದಾನ ಬೇಕಾಗುತ್ತದೆ.












Click it and Unblock the Notifications