Siddaramaiah: ಎರಡು ವಾರದ ಬಳಿಕ ಇಂದು ವಿಧಾನಸೌಧಕ್ಕೆ ಸಿದ್ದರಾಮಯ್ಯ ಭೇಟಿ
ಬೆಂಗಳೂರು, ಫೆಬ್ರವರಿ 17: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್ ಮಂಡನೆ ತಯಾರಿಯಲ್ಲಿದ್ದಾರೆ. ಈ ನಡುವೆ ಕಾಲು ನೋವಿನ ಕಾರಣ ಅವರು ಸಂಚಾರವನ್ನು ನಡೆಸದೆ ವೈದ್ಯರ ಸಲಹೆಯಂತೆ ವಿಶ್ರಾಂತಿಯಲ್ಲಿದ್ದರು. ಎರಡು ವಾರದ ಬಳಿಕ ಅವರು ಸೋಮವಾರ ವಿಧಾನಸೌಧಕ್ಕೆ ಭೇಟಿ ನೀಡಲಿದ್ದು, ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆಯುವ ಬಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರೈತ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ರೈತ ಮುಖಂಡರ ಜೊತೆ ಬಜೆಟ್ ಬೇಡಿಕೆಗಳ ಕುರಿತು ಚರ್ಚೆಗಳನ್ನು ನಡೆಸಲಿದ್ದಾರೆ.

ಎರಡು ವಾರಗಳಿಂದ ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಗೃಹ ಕಛೇರಿಯಲ್ಲಿ ಹಲವು ಸಭೆಗಳನ್ನು ನಡೆಸಿದ್ದಾರೆ. ವಿವಿಧ ನಿಯೋಗವನ್ನು ಭೇಟಿ ಮಾಡಿದ್ದಾರೆ. ವೈದ್ಯರ ಸಲಹೆಯಂತೆ ಸಂಚಾರವನ್ನು ನಡೆಸದೇ ಸಂಪೂರ್ಣ ವಿಶ್ರಾಂತಿ ತೆಗೆದುಕೊಂಡಿದ್ದಾರೆ.
ಒಂದು ಕಾರ್ಯಕ್ರಮದಲ್ಲಿ ಭಾಗಿ: ಜನವರಿ 30ರ ಸಚಿವ ಸಂಪುಟ ಸಭೆ, ಫೆಬ್ರವರಿ 1ರಂದು ಕೊಡಗು, ಮೈಸೂರು ಪ್ರವಾಸದ ಬಳಿಕ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್ ಆಗಿದ್ದರು. ಫೆಬ್ರವರಿ 2ರ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ಕಾಲು ನೋವಿನ ಕಾರಣ ದಾಖಲಾಗಿದ್ದರು. ಬಳಿಕ ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.
ಫೆಬ್ರವರಿ 11ರಂದು ಮಾತ್ರ ಅರಮನೆ ಮೈದಾನದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ 2025' ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ವೇದಿಕೆ ಹಂಚಿಕೊಂಡಿದ್ದರು. ಅಂದು ಸಹ ವೇದಿಕೆಗೆ ಅವರು ವೀಲ್ ಚೇರ್‌ನಲ್ಲಿ ಆಗಮಿಸಿದ್ದರು. ಆದರೆ ಯಲಹಂಕ ವಾಯುನೆಲೆಯಲ್ಲಿ ನಡೆದ 'ಏರೋ ಇಂಡಿಯಾ-2025' ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಎರಡು ವಾರದ ವಿಶ್ರಾಂತಿ ಬಳಿಕ ಸಿದ್ದರಾಮಯ್ಯ ಇಂದು ಕಾರ್ಯಕ್ಷೇತ್ರ ವಿಧಾನಸೌಧಕ್ಕೆ ಭೇಟಿ ನೀಡುತ್ತಿದ್ದಾರೆ. ವಿವಿಧ ಇಲಾಖೆಗಳ ಬಜೆಟ್ ಪೂರ್ವ ಸಭೆಯನ್ನು ಗೃಹ ಕಛೇರಿಯಲ್ಲಿಯೇ ಸಿದ್ದರಾಮಯ್ಯ ಪೂರ್ಣಗೊಳಿಸಿದ್ದಾರೆ. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳೊಬ್ಬರು ಬಜೆಟ್ ಪೂರ್ವಭಾವಿ ಸಭೆಯನ್ನು ಗೃಹ ಕಛೇರಿಯಲ್ಲಿ ನಡೆಸಿದ್ದಾರೆ. ಸಾಮಾನ್ಯವಾಗಿ ಬಜೆಟ್ ಪೂರ್ವಭಾವಿ ಸಭೆಗಳನ್ನು ಮುಖ್ಯಮಂತ್ರಿಗಳು ಕೆಪಿಸಿಎಲ್‌ನ 'ಶಕ್ತಿ' ಭವನದಲ್ಲಿ ನಡೆಸುತ್ತಾರೆ.
ಸಿದ್ದರಾಮಯ್ಯ ಎಡಗಾಲಿನ ಮೊಣಕಾಲಿಗೆ ಚಿಕ್ಕ ಗಾಯವಾಗಿದೆ. ಆದ್ದರಿಂದ ವೈದ್ಯರು ಮೆಟ್ಟಿಲು ಹತ್ತಿ ಇಳಿಯುವುದು, ವೇದಿಕೆ ಹತ್ತುವುದು, ಹೆಚ್ಚು ಹೊತ್ತು ನಿಲ್ಲುವುದು ಮಾಡದೇ ವಿಶ್ರಾಂತಿಗೆ ಸಲಹೆ ನೀಡಿದ್ದರು. ಆದ್ದರಿಂದ ಎರಡು ವಾರದಿಂದ ಸಿದ್ದರಾಮಯ್ಯ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ವಿಧಾನಸೌಧದ ಕಛೇರಿಗೆ ಸಹ ಆಗಮಿಸಿಲ್ಲ.
ಗೃಹ ಕಛೇರಿಯಲ್ಲಿ ಸಿದ್ದರಾಮಯ್ಯ ಫೆಬ್ರವರಿ 6 ರಿಂದ ವಿವಿಧ ಇಲಾಖೆಗಳ ಸಭೆಗಳನ್ನು ನಡೆಸಿದ್ದಾರೆ. ಶನಿವಾರ ಮತ್ತು ಭಾನುವಾರ ಸಹ ಸುಮಾರು 10 ತಾಸು ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳ ಜೊತೆ ಬಜೆಟ್ ಪೂರ್ವಭಾವಿ ಸಭೆಗಳನ್ನು ಮಾಡಿ ಬಜೆಟ್ ತಯಾರಿ ಅಂತಿಗೊಳಿಸಿದ್ದಾರೆ.












Click it and Unblock the Notifications