7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್
ರಾಜ್ಯ ಸರ್ಕಾರಿ ನೌಕರರ ಸುದೀರ್ಘ ಕಾಯುವಿಕೆ ನಂತರ ಶುಭ ಸುದ್ದಿ ಸಿಕ್ಕಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಸ್ವೀಕರಿಸಲು ರಾಜ್ಯ ಸರ್ಕಾರ ಕೊನೆಗೂ ಸಮ್ಮತಿ ನೀಡಿದೆ.
ಶನಿವಾರ ಬೆಳಗ್ಗೆ 10 ಗಂಟೆಗೆ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸ 'ಕಾವೇರಿ' ಯಲ್ಲಿ 7ನೇ ವೇತನ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಂದ ವರದಿಯನ್ನು ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಅವರ ಅಧಿಕೃತ ಶನಿವಾರದ ಕಾರ್ಯ ಕಲಾಪಗಳ ಪಟ್ಟಿಯಲ್ಲಿ 7ನೇ ವೇತನ ಆಯೋಗದ ವರದಿ ಸ್ವೀಕರಿಸುವ ಬಗ್ಗೆ ಮಾಹಿತಿ ಸಿಕ್ಕಿದೆ.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿದೆ. 7ನೇ ವೇತನ ಆಯೋಗದ ಅವಧಿ ಶುಕ್ರವಾರ ಮುಕ್ತಾಯಗೊಳ್ಳುತ್ತಿದ್ದು, ವರದಿ ಸಲ್ಲಿಸಲು ಆಯೋಗ ಸಜ್ಜಾಗಿದೆ.
ಶೀಘ್ರದಲ್ಲೇ ಸಿಹಿ ಸುದ್ದಿ
ಲೋಕಸಭಾ ಚುನಾವಣೆ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡುವ ಸಾಧ್ಯತೆ ಕೂಡ ಇದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ 7ನೇ ವೇತನ ಆಯೋಗ ವರದಿ ಜಾರಿ ಬಗ್ಗೆ ಭರವಸೆ ನೀಡಿತ್ತು. ಈಗ ಭರವಸೆ ಈಡೇರಿಸುವ ಒತ್ತಡ ಕೂಡ ಸಿಎಂ ಸಿದ್ದರಾಮಯ್ಯ ಅವರ ಮೇಲಿದೆ. ಶನಿವಾರವೇ ಲೋಕಸಭಾ ಚುನಾವಣೆಗೆ ದಿನಾಂಖ ಘೋಷಣೆಯಾಗಲಿದ್ದು ಅದಕ್ಕೂ ಮುನ್ನವೇ ಸಿಎಂ ಸಿದ್ದರಾಮಯ್ಯ ವರದಿ ಸ್ವೀಕರಿಸಲಿದ್ದಾರೆ.
ಎರಡು ಬಾರಿ ವಿಸ್ತರಣೆ
ಸುಧಾಕರ್ ರಾವ್ ನೇತೃತ್ವದಲ್ಲಿ 2022 ರ ನವೆಂಬರ್ 19 ರಂದು ರಾಜ್ಯ ಸರ್ಕಾರ ಆಯೋಗವನ್ನು ರಚಿಸಿ ಆರು ತಿಂಗಳಲ್ಲಿ ವರದಿ ನೀಡುವಂತೆ ಆದೇಶ ನೀಡಿತ್ತು. 2023 ರ ಮೇ 15 ರಂದು ಮತ್ತೆ ಆರು ತಿಂಗಳ ಅವಧಿಗೆ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. 2023 ರ ನವೆಂಬರ್ 6 ರಂದು ಆಯೋಗದ ಅವಧಿಯನ್ನು ಮಾರ್ಚ್ 15, 2024ರ ವರೆಗೆ ವಿಸ್ತರಣೆ ಮಾಡಲಾಗಿತ್ತು.
ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ 13 ಸಾವಿರ ಕೋಟಿ ರೂಪಾಯಿಗಳನ್ನು ವೇತನ ಆಯೋಗದ ವರದಿ ಜಾರಿಗೆ ಮೀಸಲಿಟ್ಟಿದ್ದಾರೆ. ರಾಜ್ಯದಲ್ಲಿ 5.11 ಲಕ್ಷ ಸರ್ಕಾರಿ ನೌಕರರು ಇದ್ದು, ಪಿಂಚಣಿದಾರರ ಸಂಖ್ಯೆ 5.62 ಲಕ್ಷವಿದೆ. 7ನೇ ವೇತನ ಆಯೋಗದ ವರದಿ ಜಾರಿ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 15 ರಿಂದ 20 ಸಾವಿರ ಕೋಟಿ ರೂಪಾಯಿ ಹೊರೆ ಬೀಳುತ್ತದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications