ಹಿಮಾಚಲ ಪ್ರದೇಶಕ್ಕೆ ಕರ್ನಾಟಕದಿಂದ ಕೋಟ್ಯಂತರ ಆರ್ಥಿಕ ನೆರವು: ಸಿಎಂ ಆದೇಶ
ಬೆಂಗಳೂರು, ಆಗಸ್ಟ್ 21: ನಿರಂತರ ಮಳೆಯಿಂದಾಗಿ ಸೃಷ್ಟಿಯಾದ ಪ್ರವಾಹ, ನೆರೆ, ಭೂಕುಸಿತಗಳಿಂದ ತತ್ತರಿಸಿರುವ ಹಿಮಾಚಲ ಪ್ರದೇಶ ರಾಜ್ಯದ ನೆರವಿಗೆ ಕರ್ನಾಟಕ ಧಾವಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ರಾಜ್ಯಕ್ಕೆ ಆರ್ಥಿಕ ನೆರವು ಘೋಷಿಸಿ ಆದೇಶ ಹೊರಡಿಸಿದ್ದಾರೆ.
ನೈಸರ್ಗಿಕ ವಿಕೋಪದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ರಾಜ್ಯ ಸರ್ಕಾರ 15 ಕೋಟಿ ರೂಪಾಯಿಗಳ ಆರ್ಥಿಕ ನೆರವು ಒದಗಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹಣ ಆದೇಶ ಹೊರಡಿಸುತ್ತಿದ್ದಂತೆ ರಾಜ್ಯ ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಿದೆ.
ನೈಸರ್ಗಿಕ ವಿಕೋಪದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಹಿಮಾಚಲ ಪ್ರದೇಶಕ್ಕೆ 15 ಕೋಟಿ ರೂ. ಗಳ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿ @siddaramaiah ಅವರು ಆದೇಶಿಸಿದ್ದಾರೆ. ಇಂದು ಅವರ ಆದೇಶದನ್ವಯ ಹಣ ಬಿಡುಗಡೆ ಮಾಡಲಾಗಿದೆ. pic.twitter.com/7NT7MzQYwK
— CM of Karnataka (@CMofKarnataka) August 21, 2023
ಈ ಕುರಿತ ಮಾಹಿತಿಯನ್ನು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ನೆರೆಯ ರಾಜ್ಯ ಹಿಮಾಚಲ ಪ್ರದೇಶದ ಸಂಕಷ್ಟದ ಸಮಯದಲ್ಲಿ ನಮ್ಮ ಸಹೋದರ ಸಹೋದರಿಯರೊಂದಿಗೆ ನಿಲ್ಲುವುದು ಮುಖ್ಯ. ಕರ್ನಾಟಕ ಮತ್ತು ಇಲ್ಲಿನ ಜನರು ಹಿಮಾಚಲ ಪ್ರದೇಶದ ಜನರೊಂದಿಗೆ ನಿಲ್ಲಲಿದ್ದಾರೆ. ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಇತರ ರಾಜ್ಯಗಳಿಂದಲೂ ಆರ್ಥಿಕ ನೆರವು
ಕರ್ನಾಟಕದ ಮಾತ್ರವಲ್ಲದೇ ಛತ್ತೀಸ್ ಗಢ ಸರ್ಕಾರ ಕೂಡಾ ಹಿಮಾಚಲ ಪ್ರದೇಶ ರಾಜ್ಯದ ನೆರವಿಗೆ ಧಾವಿಸಿದೆ. ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಭಘೇಲ್ ಅವರು ವಿಪತ್ತು ಸಂತ್ರಸ್ತರ ಪರಿಹಾರ ಮತ್ತು ಪುನವರ್ಸತಿಗೆಂದು 11 ಕೋಟಿ ರೂಪಾಯಿ ಸಹಾಯ ನೀಡುತ್ತಿದೆ. ಇತ್ತ ರಾಜಸ್ಥಾನ ರಾಜ್ಯವು 15 ಕೋಟಿ ರೂಪಾಯಿ ಆರ್ಥಿಕ ಸಹಾಯ ಮಾಡಿದೆ. ಇದೀಗ ನಮ್ಮ ರಾಜ್ಯವ ಹಣ ಸಹಾಯ ಮಾಡಿದೆ.
ಕಳೆದ ಕೆಲವು ವಾರಗಳಿಂದ ಹಿಮಾಚಲ ಪ್ರದೇಶದಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ಭೂಕುಸಿತ ಸಂಭವಿಸಿದೆ. ಗುಡ್ಡಗಾಡು ಪ್ರದೇಶ ಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸೇತುವೆಗಳು ಕುಸಿದಿವೆ, ರಸ್ತೆಗಳು ಸಂಪರ್ಕ ಕಳೆದುಕೊಂಡಿದೆ. ಈವರೆಗೆ ಸುಮಾರು 50ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಈ ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವೆಸ್ತವಾಗಿದೆ.












Click it and Unblock the Notifications