ನಿರುದ್ಯೋಗ ಸಮಸ್ಯೆಗೆ ಮುಕ್ತಿ ಕಾಣಿಸಲು ಮುಂದಾದ ಸಿದ್ದರಾಮಯ್ಯ ಸರ್ಕಾರ!
ಲೋಕಸಭೆ ಚುನಾವಣೆ ಸಮಯದಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕರು ಭರ್ಜರಿ ಟಾಕ್ ಫೈಟ್ ನಡೆಸುತ್ತಿದ್ದಾರೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೇ ಟಾರ್ಗೆಟ್ ಮಾಡುತ್ತಾ, ಬಿಜೆಪಿ ನಾಯಕರು ಇದೀಗ ವಾಗ್ದಾಳಿ ನಡೆಸುತ್ತಿದ್ದಾರೆ ಎಂಬುದು ಕರ್ನಾಟಕ ಕಾಂಗ್ರೆಸ್ ನಾಯಕರ ಆರೋಪ. ಹೀಗಿದ್ದಾಗ ಸಿಎಂ ಸಿದ್ದರಾಮಯ್ಯ ಕೂಡ ಹೊಸ ವಾಗ್ಬಾಣ ಪ್ರಯೋಗ ಮಾಡಿದ್ದಾರೆ.
ಪ್ರಧಾನಿ ಮೋದಿ VS ಸಿಎಂ ಸಿದ್ದು!
ಅಂದಹಾಗೆ, ನಿರುದ್ಯೋಗವು ಈಗ ದೇಶದ ಪ್ರಮುಖ ಸಮಸ್ಯೆ ಆಗಿದೆ. ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ದೊಡ್ಡದಾಗಿ ಬೆಳೆದಿದೆ. 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಅಂತ ಭರವಸೆಯನ್ನ ನೀಡಿ ಯುವ ಸಮೂಹ ಮತ ಗಳಿಸಿದರು.

ಹೀಗಿದ್ದರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿಯವರು, ಇರುವ ಯದ್ಯೋಗ ಕಸಿದುಕೊಂಡಿದ್ದಾರೆ. ಹೀಗೆ ಪ್ರತಿ ವರ್ಷವು ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆಯುತ್ತಾ ಶೇ. 8.40 ಕ್ಕೆ ಏರಿಕೆ ಆಗಿದೆ ಅಂತಾ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಅಷ್ಟಕ್ಕೂ ಕರ್ನಾಟಕದ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ಯುವ ಸಮೃದ್ಧಿ ಸಮ್ಮೇಳನ ಮತ್ತು ಬೃಹತ್ ಉದ್ಯೋಗ ಮೇಳ'ವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದರು. ನಿರುದ್ಯೋಗಿ ಯುವಕರಿಗಾಗಿ 'ಯುವ ನಿಧಿ' ಕೊಡುವ ಜತೆಗೆ, ಉದ್ಯೋಗ ಸೃಷ್ಟಿಸುವ & ಉದ್ಯೋಗ ಮಾಡಲು ಅಗತ್ಯವಾದ ತರಬೇತಿಗಳನ್ನೂ ನೀಡಲಾಗುತ್ತೆ, ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಉದ್ಯೋಗ ಸೃಷ್ಟಿ ಮಾಡುವ ಭರವಸೆ
ನಾವು ಯುವ ನಿಧಿಯನ್ನೂ ಕೊಡುತ್ತೇವೆ & ಉದ್ಯೋಗ ಸೃಷ್ಟಿ ಕೂಡ ಮಾಡುತ್ತೇವೆ. ಇನ್ನೂ ಉದ್ಯೋಗಕ್ಕೆ ಬೇಕಾದ ಕೌಶಲ್ಯ ತರಬೇತಿ ನೀಡುತ್ತೇವೆ. ಇದು ವಿದ್ಯಾರ್ಥಿ ಮತ್ತು ಯುವಜನರಿಗೆ ನಮ್ಮ ಸರ್ಕಾರದ ಅಭಯವಾಗಿದೆ. ಹೊಸ ಹೊಸ ಉದ್ಯೋಗ ಸೃಷ್ಟಿ & ತರಬೇತಿಗಾಗಿ ಈಗಿರುವ GTDC ಗಳ ಜತೆಗೆ ಹೊಸದಾಗಿ ಇನ್ನಷ್ಟು GTDC ಗಳನ್ನು ಸ್ಥಾಪನೆ ಮಾಡಲಾಗುವುದು, ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ವೇಳೆ ಭರವಸೆ ನೀಡಿದ್ದಾರೆ.

5 ಗ್ಯಾರಂಟಿ ಯೋಜನೆಗಳ ಹಂಗಾಮ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯುವಲ್ಲಿ 5 ಗ್ಯಾರಂಟಿ ಯೋಜನೆಗಳ ಆಶ್ವಾಸನೆ ದೊಡ್ಡ ಪಾತ್ರವನ್ನೇ ವಹಿಸಿತ್ತು. ಇದೇ ಕಾರಣಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಯುದ್ಧವೂ ನಡೆಯುತ್ತಿದೆ. ಅದ್ರಲ್ಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನೇ ಬಿಜೆಪಿಯು ಅಸ್ತ್ರ ಮಾಡ್ಕೊಂಡು ನಿತ್ಯ ವಾಗ್ದಾಳಿ ನಡೆಸುತ್ತಿದೆ.
ಈ ಸಮಯದಲ್ಲೇ ಲೋಕಸಭೆ ಚುನಾವಣೆಯೂ ಬಂದಿದೆ, ಹೀಗಿದ್ದಾಗ ಸಿಎಂ ಸಿದ್ದರಾಮಯ್ಯ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಹೀಗೆ ಪ್ರಧಾನಿ ಮೋದಿ ಅವರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಹೇಗೆ ಉತ್ತರ ನೀಡುತ್ತಾರೆ ಅಂತಾ ಕಾದು ನೋಡಬೇಕಿದೆ.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೌಶಲ್ಯಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು, ನೂರಾರು ಉದ್ಯಮಿಗಳು, ಸೇರಿದಂತೆ ಸಹಸ್ರಾರು ಉದ್ಯೋಗಾಕಾಂಕ್ಷಿಗಳು ಭಾಗಿಯಾಗಿದ್ದರು.












Click it and Unblock the Notifications