ಅರವಿಂದ್ ಬೆಲ್ಲದ್ ಕ್ಷಮಾಪಣೆ; ದೊಡ್ಡತನ ತೋರಿದ ಸಿಎಂ ಸಿದ್ದರಾಮಯ್ಯ
ವಿರೋಧ ಪಕ್ಷದ ಉಪನಾಯಕರಾದ ಅರವಿಂದ್ ಬೆಲ್ಲದ್ ಸಿಎಂ ಸಿದ್ದರಾಮಯ್ಯ ವಿರುದ್ಧ ತಾವು ನೀಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದುಮ ಸಿಎಂ ಬಳಿ ಕ್ಷಮೆ ಕೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷಮಾಪಣಾ ಪತ್ರ ಬರೆದಿದ್ದು, ನನ್ನ ಮಾತುಗಳು ನನಗೆ ಶೋಭೆ ತರುವುದಿಲ್ಲ, ಈ ಪತ್ರದ ಮೂಲಕ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದು, ದೊಡ್ಡತನ ತೋರಿಸಿದ್ದಾರೆ.
ಆಗಸ್ಟ್ 24ರಂದು ಬೆಂಗಳೂರಿನ ಪ್ಯಾಲೆಸ್ ಮೈದಾನದಲ್ಲಿ ಜಿಂದಾಲ್ ಕಂಪನಿಯ ಕುರಿತು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಜಿಂದಾಲ್ ಸಂಸ್ಥೆಗೆ ಕಡಿಮೆ ಬೆಲೆಯಲ್ಲಿ ಭೂಮಿ ಕೊಡುವುದಕ್ಕೆ ಸಿದ್ದರಾಮಯ್ಯನವರನ್ನು ಏನು ಅಪ್ಪನ ಮನೆ ಆಸ್ತಿನಾ ಎಂದು ಹೇಳಿದ್ದರು.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಅರವಿಂದ್ ಬೆಲ್ಲದ್ ಅವರ ಕ್ಷಮಾಪಣಾ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದು, ರಾಜಕೀಯದಲ್ಲಿ ಟೀಕೆ ಟಿಪ್ಪಣಿ ಸಹಜ. ಉದ್ವೇಗದಲ್ಲಿ ಕೆಲವೊಮ್ಮೆ ನಮ್ಮ ಅರಿವಿಗೆ ಬಾರದಂತೆಯೇ ಮತ್ತೊಬ್ಬರ ಘನತೆಗೆ ಚ್ಯುತಿ ತರುವಂತಹ ಹೇಳಿಕೆ ಕೊಡುತ್ತೇವೆ ಎಂದಿದ್ದಾರೆ.
ರಾಜಕೀಯದಲ್ಲಿ ಟೀಕೆ, ಟಿಪ್ಪಣಿಗಳು ಸಹಜ. ಕೆಲವೊಮ್ಮೆ ಉದ್ವೇಗದಲ್ಲಿ ಮತ್ತೊಬ್ಬರ ಘನತೆಗೆ ಚ್ಯುತಿ ತರುವಂತಹ ಹೇಳಿಕೆ ಅರಿವಿಗೆ ಬಾರದೆಯೇ ಬಂದು ಬಿಡುತ್ತದೆ.
— Siddaramaiah (@siddaramaiah) September 3, 2024
ಜಿಂದಾಲ್ ಕಂಪನಿಗೆ ಭೂಮಿ ನೀಡಿರುವ ನಮ್ಮ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಮಾತನಾಡುವಾಗ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ್ ಅವರು ವೈಯಕ್ತಿಕವಾಗಿ ನನ್ನನ್ನು ನಿಂದನೆ… pic.twitter.com/4tmH5OpGdz
ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ್ ಜಿಂದಾಲ್ ಕಂಪನಿಗೆ ಭೂಮಿ ನೀಡಿರುವ ನಮ್ಮ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಮಾತನಾಡುವ ಸಂದರ್ಭದಲ್ಲಿ, ವೈಯಕ್ತಿಕವಾಗಿ ನನ್ನನ್ನು ನಿಂದನೆ ಮಾಡಿದ್ದರು. ಈಗ ತಮ್ಮ ತಪ್ಪಿನ ಅರಿವಾಗಿ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ. ಅವರ ಈ ನಡೆಯನ್ನು ನಾನು ಅತ್ಯಂತ ಮುಕ್ತವಾಗಿ ಸ್ವಾಗತಿಸುತ್ತೇನೆ, ಜೊತೆಗೆ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ದ್ವೇಷವಾಗಲೀ, ಬೇಸರವಾಗಲೀ ಯಾವುದು ಇಲ್ಲ ಎಂದಿದ್ದಾರೆ.
ನಾನು ಕೂಡ ಒಂದೆರಡು ಬಾರಿ ಬಾಯ್ತಪ್ಪಿ ಏಕವಚನ ಬಳಕೆ ಮಾಡಿ ನಂತರ ವಿಷಾದ ವ್ಯಕ್ತಪಡಿಸಿದ್ದೇನೆ, ಮತ್ತೆ ಅಂತಹ ತಪ್ಪಾಗದಂತೆ ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇನೆ. 40 ವರ್ಷಗಳ ರಾಜಕೀಯ ಜೀವನದಲ್ಲಿ ಹಿರಿಯ, ಕಿರಿಯ ನಾಯಕರಿಂದ ಟೀಕೆ, ಟಿಪ್ಪಣಿ, ವೈಯಕ್ತಿಕ ನಿಂದನೆ, ಚಾರಿತ್ಯ್ರವಧೆ ಮಾಡುವಂತಹ ಪದಬಳಕೆಯನ್ನೂ ಕೇಳಿದ್ದೇನೆ. ಇದೀಗ ಅರವಿಂದ ಬೆಲ್ಲದ್ ತಾವು ಬಳಸಿದ ಪದದ ಬಗ್ಗೆ ತಾವೇ ಬೇಸರ ವ್ಯಕ್ತಪಡಿಸಿ, ಕ್ಷಮೆ ಕೇಳುವ ಮೂಲಕ ಹೊಸ ತಲೆಮಾರಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಅರವಿಂದ್ ಬೆಲ್ಲದ್ ಅವರ ತಂದೆ ಚಂದ್ರಕಾಂತ್ ಬೆಲ್ಲದ್ ನನ್ನ ದೀರ್ಘಕಾಲದ ಸ್ನೇಹಿತರು ಮತ್ತು ಸಜ್ಜನ ರಾಜಕಾರಣಿ ಕೂಡ ಆಗಿದ್ದರು. ಅರವಿಂದ್ ಬೆಲ್ಲದ್ ಕೂಡ ತಮ್ಮ ತಂದೆಯ ರೀತಿ ಸಜ್ಜನ ರಾಜಕಾರಣ ಮುಂದುವರೆಸಿಕೊಂಡು ಹೋಗಲಿ ಎಂದು ಹಾರೈಸಿದ್ದಾರೆ.
ರಾಜಕೀಯ ಎಂದರೆ ಬರೀ ಟೀಕೆ, ಆರೋಪ ಪ್ರತ್ಯಾರೋಪಗಳಿಂದ ತುಂಬಿರುವ ಕಾಲದಲ್ಲಿ ಅರವಿಂದ್ ಬೆಲ್ಲದ್ ಅವರ ನಡೆ ಮೌಲ್ಯಯುತ ರಾಜಕಾರಣದ ಜೀವಂತಿಕೆಯ ಸಂಕೇತವಾಗಿ ಕಾಣುತ್ತಿದೆ. ಪಶ್ಚಾತಾಪಕ್ಕಿಂತ ದೊಡ್ಡ ಪ್ರಾಯಶ್ಚಿತ ಬೇರೊಂದಿಲ್ಲ ಎನ್ನುವ ಮಾತು ಈ ಸಂದರ್ಭಕ್ಕೆ ಹೆಚ್ಚು ಅರ್ಥಪೂರ್ಣವಾಗಿದೆ ಎಂದಿದ್ದಾರೆ.












Click it and Unblock the Notifications