CM Siddaramaiah: ಶಾಸಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಿಎಂ, ಎಲ್ಲ ಕ್ಷೇತ್ರಕ್ಕೂ ಅನುದಾನದ ಭರವಸೆ
ಸಿಎಂ ಸಿದ್ದರಾಮಯ್ಯ ಅವರು ಹೊಸ ವರುಷದ ಹೊತ್ತಲ್ಲೇ ಶಾಸಕರಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ದೂರು ಕೇಳಿಬಂದಿತ್ತು. ಹಲವು ಶಾಸಕರು ಬಹಿರಂಗವಾಗಿಯೇ ತಮ್ಮ ಕ್ಷೇತ್ರಗಳಿಗೆ ಅನುದಾನವೇ ಬಂದಿಲ್ಲ ಅಳಲು ತೋಡಿಕೊಂಡಿದ್ದರು. ಈ ಸಂಬಂಧ ಎಲ್ಲ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನಿನ್ನೆ ಬೆಳಗಾವಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಅನುದಾನ ಬಿಡುಗಡೆಯ ಬಗ್ಗೆ ಬೇಡಿಕೆ ಇಟ್ಟರು. ಇದಕ್ಕೆ ಉತ್ತರಿಸಿದ ಸಿಎಂ, ಸದ್ಯಕ್ಕೆ ಎಲ್ಲರೂ ಸುಮ್ಮನಿರಿ. ಮುಂದಿನ ವರ್ಷ ಎಲ್ಲ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಗ್ಯಾರಂಟಿ ಕೊಟ್ಟಿದ್ದಾರೆ. ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಶಾಸಕರು ಸರ್ಕಾರ ನಮ್ಮದೇ ಇದ್ದರೂ ಕ್ಷೇತ್ರಗಳಿಗೆ ಅನುದಾನ ಬರುತ್ತಿಲ್ಲ ಎಂದು ಬೇಸರ ತೋಡಿಕೊಂಡರು. ಇನ್ನು ಅನುದಾನ ನೀಡುವ ಸಂಬಂಧ ಸದನದಲ್ಲೇ ಈ ಬಗ್ಗೆ ಘೋಷಣೆ ಮಾಡಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.

ಅನುದಾನದ ಕೊರತೆ ನೀಗಿಸುವ ನಿಟ್ಟಿನಲ್ಲಿ 6000 ಕೋಟಿ ರೂಪಾಯಿ ಬಿಡುಗಡೆ ಮಾಡುವ ಸಂಬಂಧ ಘೋಷಣೆ ಮಾಡುತ್ತೇವೆ. ಇನ್ನು ಲೋಕೋಪಯೋಗಿ ಇಲಾಖೆಯಿಂದ 4000 ಕೋಟಿ ರೂಪಾಯಿ, ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ 2000 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಅಲ್ಲದೆ ಪ್ರತಿ ಕ್ಷೇತ್ರಕ್ಕೆ ಕನಿಷ್ಠವೆಂದರೂ 26 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಸಿಗಲಿದೆ. ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬಾರದು ಎಂದು ಶಾಸಕರಿಗೆ ಸಿದ್ದರಾಮಯ್ಯ ಕೇಳಿಕೊಂಡಿದ್ದಾರೆ. 2,000 ಕೋಟಿ ರೂಪಾಯಿ ಮೊತ್ತದಲ್ಲಿ ಎಲ್ಲ ಶಾಸಕರ ಕ್ಷೇತ್ರಗಳಿಗೂ ಅನುದಾನ ಹಂಚಿಕೆ ಮಾಡುತ್ತೇವೆ. ನಮ್ಮ ಪಕ್ಷದ ಶಾಸಕರು ಎದೆಯೆತ್ತಿಕೊಂಡು ಮಾತನಾಡಬೇಕು. ಈ ಮೂಲಕ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಬೇಕು ಎಂದು ಸೂಚನೆ ನೀಡಿದ್ದಾರೆ.

ನಮ್ಮ ಸರ್ಕಾರವು ರಾಜ್ಯದಲ್ಲಿ ಅಭಿವೃದ್ಧಿಯ ಪರ್ವಕ್ಕೆ ಸಾಕ್ಷಿಯಾಗಿದೆ. ಕೇವಲ ವಿಧಾನಸಭೆ ಹಾಗೂ ಪರಿಷತ್‌ನಲ್ಲಿ ಮಾತ್ರವಲ್ಲ, ಸದನದ ಹೊರಗೂ ನಮ್ಮ ಅಭಿವೃದ್ಧಿಯ ಬಗ್ಗೆ ಅಂಕಿ ಅಂಶಗಳನ್ನು ಮನೆ ಮನೆಗೂ ತಲುಪಿಸಬೇಕು ಎಂದು ಶಾಸಕರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ನಮ್ಮ ಪಕ್ಷದ ಸಚಿವರು, ಶಾಸಕರು ತಮ್ಮ ತಮ್ಮ ಉಸ್ತುವಾರಿ ನೀಡಿರುವ ಜಿಲ್ಲೆಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಜನಸಂಪರ್ಕ ಸಭೆಗಳನ್ನು ಹೆಚ್ಚಾಗಿ ನಡೆಸಬೇಕು. ಈ ಮೂಲಕ ಜನರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ನಮ್ಮ ಸರ್ಕಾರದಲ್ಲಿ ಹಣಕ್ಕೆ ಯಾವುದೇ ತೊಂದರೆ ಇಲ್ಲ, ನಮ್ಮ ಬಳಿ ಹಣ ಇದೆ. ಎಲ್ಲರೂ ಜನರ ಕೆಲಸಗಳನ್ನು ತಪ್ಪದೇ ಮಾಡಿ ಎಂದೂ ಸಿಎಂ ಅಭಯ ನೀಡಿದ್ದಾರೆ.
ವಿಪಕ್ಷಗಳು ನಮ್ಮ ಮೇಲೆ ಏನೆಲ್ಲ ಸುಳ್ಳು ಆರೋಪ, ಅಪಪ್ರಚಾರ ಮಾಡಿದ್ರೂ ಜನ ನಮ್ಮನ್ನು ಬೈ ಎಲೆಕ್ಷನ್‌ನಲ್ಲಿ ಕೈಹಿಡಿದಿದ್ದಾರೆ. ಇನ್ನು ಹಾಸನದಲ್ಲಿ ನಾವು ಮಾಡಿದ ಸ್ವಾಭಿಮಾನಿ ಸಮಾವೇಶ ಕೂಡ ವಿಪಕ್ಷಗಳ ತಲೆಕೆಡಿಸಿದೆ. ರಾಜ್ಯದ ಜನ ಸದಾ ನಮ್ಮೊಂದಿಗೆ ಇರುತ್ತಾರೆ, ಮುಂಬರುವ ಚುನಾವಣೆಯಲ್ಲೂ ಜನ ನಮ್ಮೊಂದಿಗೆ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರ ವಕ್ಫ್ ಆರೋಪ ಇದೀಗ ಅವರಿಗೇ ತಿರುಗುಬಾಣವಾಗಿ ನಿಂತಿದೆ. ಈ ಹಿಂದೆ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರ ಅವಧಿಯಲ್ಲೇ ವಕ್ಫ್ ಒತ್ತುವರಿ ನೋಟಿಸ್ ಜಾರಿ ಮಾಡಲಾಗಿದೆ. ವಕ್ಫ್ ಆಸ್ತಿ ಒತ್ತುವರಿ ತೆರವು ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಹೇಳಿಕೊಂಡಿದೆ. ಹೀಗಿರುವಾಗ ಬಿಜೆಪಿ ಅವರು ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದೂ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications