Mandya: 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಪ್ಡೇಟ್ ಮಾಹಿತಿ
ಬೆಂಗಳೂರು, ಸೆಪ್ಟಂಬರ್ 08: ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿರುವ 'ಕನ್ನಡ ಸಾಹಿತ್ಯ ಪರಿಷತ್ತು' ಮುಂದಿನ 87ನೇ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ನಡೆಸಲು ತೀರ್ಮಾನಿಸಿದೆ. ಈ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಪರಿಷತ್ತು ತಿಳಿಸಿದೆ.
ಹೌದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನೂತನವಾಗಿ ನಿರ್ಮಿಸಲಾದ 'ಕನ್ನಡ ಭವನ' ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದರು. ಮಂಡ್ಯದ 87ನೇ ಸಮ್ಮೇಳನವನ್ನು ಅರ್ಥಗರ್ಭಿತವಾಗಿ ನಡೆಸುವ ಇಂಗಿತವನ್ನು ಅವರೇ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅಗತ್ಯ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದರು.

ಮುಂದಿನ ಸಮ್ಮೇಳನ ಕುರಿತು ಆದಷ್ಟು ಬೇಗ ಮಂಡ್ಯ ಉಸ್ತುವಾರಿ ಸಚಿವರು ಸೇರಿದಂತೆ ಇತರ ಗಣ್ಯರನ್ನೊಳಗೊಂಡ ವಿಶೇಷ ಸಭೆಯನ್ನು ನಡೆಸುವ ಭರವಸೆಯನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ.
ಮುಂದಿನ ಸಮ್ಮೇಳನವನ್ನು ಶಿಸ್ತುಬದ್ಧವಾಗಿ ಹಾಗೂ ಕ್ರಮ ಬದ್ಧವಾಗಿ ಆಯೋಜಿಸುವ ಇರಾದೆ ಸರ್ಕಾರಕ್ಕೆ ಇದೆ. ಸಮ್ಮೇಳನದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳುವ ಮೂಲಕ ಕನ್ನಡದ ಅಕ್ಷರ ಜಾತ್ರೆಯನ್ನು ಸಾಕಾರಗೊಳಿಸುವುದಾಗಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.
ಆದಷ್ಟು ಶೀಘ್ರ ದಿನಾಂಕ ನಿಗದಿ
ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಬೇಕಾದ ಸಮ್ಮೇಳನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆದಷ್ಟು ಬೇಗ ಸಮ್ಮೇಳನದ ದಿನಾಂಕ ನಿಗದಿಪಡಿಸುವ ಮೂಲಕ ಕನ್ನಡದ ಅಕ್ಷರ ತೇರನ್ನು ಸಮಸ್ತ ಕನ್ನಡಿಗರ ಜತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸರ್ಕಾರ ಜವಾಬ್ದಾರಿಯಿಂದ ಹಾಗೂ ಹೆಮ್ಮೆಯಿಂದ ಎಳೆಯಲಿದೆ.
ಈ ವರ್ಷ ಸರ್ಕಾರ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಗರ್ಭಿತವಾಗಿ ಹಾವೇರಿಯಲ್ಲಿ ನಡೆದ ಸಮ್ಮೇಳನದ ಎಲ್ಲಾ ದಾಖಲೆಗಳನ್ನು ಮಿರಿಸುವಂತೆ ಆಯೋಜಿಸುವ ಭರವಸೆ ಸಿಕ್ಕಿದೆ ಎಂದು ಮಹೇಶ್ ಜೋಶಿ ತಿಳಿಸಿದ್ದಾರೆ.
ಕಳೆದ ಬಾರಿ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲಾಯಿತು. ಈ ವೇಳೆಯೇ ಸಕ್ಕರೆನಾಡು ಮಂಡ್ಯದಲ್ಲಿ ಮುಂದಿನ ಸಮ್ಮೇಳನ ನಡೆಸುವ ಬಗ್ಗೆ ಮಾಹಿತಿ ನೀಡಲಾಯಿತು. ಈ ಕುರಿತು ದಿನಾಂಕ ಮತ್ತು ಸಮ್ಮೇಳನದ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಕಳೆದ ಬಾರಿಯ ಸಮ್ಮೇಳನಾಧ್ಯಕ್ಷರಾಗಿ ಕವಿ. ಡಾ.ದೊಡ್ಡರಂಗೇಗೌಡರು ಆಯ್ಕೆ ಆಗಿದ್ದರು.












Click it and Unblock the Notifications