ಮಹಾತ್ಮ ಗಾಂಧಿಯನ್ನು ಗುಂಡಿಟ್ಟು ಕೊಲ್ಲುವಂತಹದ್ದು ಏನಾಗಿತ್ತು?
ರಾಮನಗರ: ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಇದೇ ವೇಳೆ ಮಹಾತ್ಮಗಾಂಧಿ ಅವರ ವಿಚಾರವನ್ನ ಪ್ರಸ್ತಾಪಿಸಿ, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವತ್ತೂ ಭಾಗವಹಿಸದ ಬಿಜೆಪಿ ಪರಿವಾರ ಸ್ವಾತಂತ್ರ್ಯ ಸೇನಾನಿ ಮಹಾತ್ಮಗಾಂಧಿ ಅವರನ್ನು ಹತ್ಯೆಗೈದವರ ವಂಶಸ್ಥರು ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಗಂಭೀರ ಆರೋಪ ಮಾಡಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ 1 ವರ್ಷ ತುಂಬಿದ ಹಿನ್ನೆಲೆ ರಾಮನಗರದಲ್ಲಿ ಹಮ್ಮಿಕೊಂಡಿದ್ದ 5 ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಹಾಗೇ ಸಹಸ್ತಾರು ಕಾಂಗ್ರೆಸ್ ಕಾರ್ಯಕರ್ತರ ಜತೆ ಸಿಎಂ ಹೆಜ್ಜೆ ಹಾಕಿದ ನಂತರ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಈ ವೇಳೆ, ಧರ್ಮವಂತರಾಗಿ ಬದುಕುತ್ತಿದ್ದ ಪುಣ್ಯಾತ್ಮ ಮಹಾತ್ಮಗಾಂಧಿಯನ್ನು ಗುಂಡಿಟ್ಟು ಕೊಲ್ಲುವಂಥಾದ್ದು ಏನಾಗಿತ್ತು ? ಗಾಂಧಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದೇ ತಪ್ಪಾಯ್ತಾ? ಗಾಂಧಿ ಬ್ರಿಟಿಷರನ್ನ ವಿರೋಧಿಸಿದರು ಎನ್ನುವ ಕಾರಣಕ್ಕೆ ಗಾಂಧಿಯನ್ನು ಕೊಂದಿದ್ದಾ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಪ್ರಧಾನಿ ಮೋದಿ ವಿರುದ್ಧ ಆರೋಪ
ಇದೇ ಸಂದರ್ಭದಲ್ಲಿ ಪಿಎಂ ನರೇಂದ್ರ ಮೋದಿ ವಿರುದ್ಧವೂ ಸಿಎಂ ವಾಗ್ದಾಳಿ ನಡೆಸಿದರು. ಮೋದಿ ಅವರು ಪ್ರಧಾನಿ ಆದ ಬಳಿಕ ಭಾರತೀಯರ ಭಾವನೆ ಕೆರಳಿಸಿ, ಭಾರತೀಯ ಸಮಾಜ ವಿಭಜಿಸಿ, ಭಾರತೀಯರ ಹೃದಯಗಳನ್ನು ಒಡೆಯುವ ಮೂಲಕ ಎಷ್ಟಾಗುತ್ತೋ ಅಷ್ಟು ಮತ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ಭಾರತೀಯರನ್ನು ವಿಭಜಿಸಿ, ಹಿಂಸಿಸಿ ಮತ ಗಳಿಸುವ ದುರ್ಗತಿ ಬಿಜೆಪಿ ಗೆ ಬಂದಿದೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪವನ್ನೂ ಮಾಡಿದ್ದಾರೆ.
ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು, ಮಹಿಳೆಯರು, ದುಡಿಯುವ ವರ್ಗಗಳು, ಶ್ರಮಿಕರು ಆತಂಕ ಅಭದ್ರತೆಯಲ್ಲಿ ಬದುಕುವಂಥ ಹೀನಾಯ ಸ್ಥಿತಿಗೆ ದೇಶವನ್ನು ದೂಡಿದ್ದರು. ಭಾರತವನ್ನು ಕಟ್ಟಿದ ಸಮುದಾಯಗಳನ್ನು ಛಿದ್ರಗೊಳಿಸುವುದನ್ನು ವಿರೋಧಿಸಿ, ಬೆವರಿನ ಸಂಸ್ಕೃತಿಯ ಎಲ್ಲರನ್ನೂ ಒಟ್ಟುಗೂಡಿಸುವ ಸಲುವಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಿತು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಶೇಷ ಅನುದಾನ ಸಿಗುವುದು ಗ್ಯಾರಂಟಿ!
ರಾಮನಗರ ಜಿಲ್ಲೆಯ ಇವತ್ತಿನ ದುಸ್ಥಿತಿಗೆ ಯಾರು ಕಾರಣ? ಇಷ್ಟು ವರ್ಷ ರಾಮನಗರ ಜಿಲ್ಲೆಯು ಯಾರ ಹಿಡಿತದಲ್ಲಿತ್ತು ? ಎಂದು ಜನರನ್ನ ಸಿಎಂ ಪ್ರಶ್ನಿಸಿದರು. ಈಗ ಅಧಿಕಾರಕ್ಕೆ ಬಂದಿದ್ದೇವೆ. ರಾಮನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವಕ್ಕೆ ಜಿಲ್ಲೆ ಜನ ಸಾಕ್ಷಿಯಾಗುತ್ತಾರೆ. ಸಂಸದ ಡಿ.ಕೆ. ಸುರೇಶ್ ಅವರು ಬಹಳ ಕೆಲಸ ಮಾಡಿದ್ದಾರೆ. ಬಿಜೆಪಿ & ಜೆಡಿಎಸ್ ಒಟ್ಟಾದ್ರೂ ಡಿ.ಕೆ.ಸುರೇಶ್ ಅವರನ್ನು ಸೋಲಿಸಲು ಸಾಧ್ಯವಿಲ್ಲ. ರಾಮನಗರದ ಅಭಿವೃದ್ಧಿ ಪರ್ವವನ್ನು ವೇಗಗೊಳಿಸುವ ಜವಾಬ್ದಾರಿ ನಮ್ಮ ಸರ್ಕಾರದ ಜವಾಬ್ದಾರಿ. ನಾವು ಮಾಡಿ ತೋರಿಸ್ತೀವಿ. ಜನವರಿಯ ವೇಳೆಗೆ ರಾಮನಗರಕ್ಕೆ ವಿಶೇಷ ಅನುದಾನ ನೀಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ರಾಮನಗರದಲ್ಲೂ ಮೆಡಿಕಲ್ ಕಾಲೇಜು!
ಹಿಂದಿನ ಸರ್ಕಾರದ ಸಚಿವ ಅಶ್ವಥ್ ನಾರಾಯಣ್ ಜಿಲ್ಲೆಗೆ ಏಕೆ ಮೆಡಿಕಲ್ ಕಾಲೇಜು ಕೊಡಲಿಲ್ಲ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, ರಾಮನಗರ ಜಿಲ್ಲೆಗೆ ಬಂದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತಗೊಂಡು ಹೋಗಿದ್ದು ಸಚಿವ ಡಾ.ಸುಧಾಕರ್. ಇಬ್ಬರೂ ಬಿಜೆಪಿಯವರೇ. ಜಿಲ್ಲೆಗೆ ಅನ್ಯಾಯ ಆಗಿದ್ದು ಇದೇ ಬಿಜೆಪಿ ಅವರಿಂದಾಗಿ. ಇವರ ಜೊತೆ ಕೈ ಜೋಡಿಸಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ. ಇಬ್ಬರಿಗೂ ನೈತಿಕತೆ ಇಲ್ಲ ರಾಮನಗರದಲ್ಲಿ ಮತ್ತು ಕನಕಪುರದಲ್ಲಿ ಎರಡೂ ಕಡೆ ಮೆಡಿಕಲ್ ಕಾಲೇಜು ಬೇಕು ಎಂದರೆ ಎರಡೂ ಕಡೆ ಮಾಡಲು ನಾವು ಸಿದ್ದವೆಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಘೋಷಿಸಿದರು.
ಇನ್ನು ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಸಚಿವ ಮಂಕಾಳ ವೈದ್ಯ ಸೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಬಾಲಕೃಷ್ಣ, ಇಕ್ಬಾಲ್ ಹುಸೇನ್ ಮತ್ತು ಪಕ್ಷದ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳು ಹಾಜರಿದ್ದರು. ಒಟ್ನಲ್ಲಿ ರಾಮನಗರದ ಈ ಸಮಾವೇಶ ಬಿಜೆಪಿ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿಗೆ ಸಾಕ್ಷಿಯಾಗಿತ್ತು. ಆದರೆ ಈಗ ಬಿಜೆಪಿ ನಾಯಕರ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಕಮಲ ಪಾಳಯ ಯಾವ ರೀತಿ ಉತ್ತರ ನೀಡುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications