ಸರ್ಕಾರದ ಕಾರ್ಯಕ್ರಮ ಶ್ಲಾಘಿಸಿ ಪತ್ರ ಬರೆದಿದ್ದ ಬಾಲಕಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 9: ಕುಂದಗೋಳ ತಾಲೂಕಿನ ಮಳಲಿ ಗ್ರಾಮದ ಶ್ರೀ ಜಗದ್ಗುರು ಫಕ್ಕೀರೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಆಶಾ ಪಾಟೀಲ ಅವರು ಶನಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಸ್ತಲಾಘವ ಮಾಡಿದರು.
ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ನೀಡುವ ಕಾರ್ಯಕ್ರಮವನ್ನು ಒಂಬತ್ತು ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದಕ್ಕಾಗಿ ಈ ಕ್ರಮವನ್ನು ಶ್ಲಾಘಿಸಿ ಆಶಾ ಅವರು ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ( ಮೊಟ್ಟೆ ) ನೀಡುವುದೂ ಸೇರಿದಂತೆ ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿ ಪತ್ರ ಬರೆದಿದ್ದ ಧಾರವಾಡ ಜಿಲ್ಲೆ ಕುಂದಗೋಳದ ಆಶಾ ನೆಹರು ಪಾಟೀಲ್ ಎಂಬ ವಿದ್ಯಾರ್ಥಿನಿಯನ್ನು ಇಂದು ಭೇಟಿಮಾಡಿದೆ. ಕೃಷಿ ಮೇಳ ಉದ್ಘಾಟನೆಗೆ ಧಾರವಾಡಕ್ಕೆ ತೆರಳಿದ್ದ ವೇಳೆಯಲ್ಲಿ ವಿದ್ಯಾರ್ಥಿನಿಯನ್ನು ಭೇಟಿಯಾಗಿ ಮಾತನಾಡಿದ್ದು ನನಗೆ ಖುಷಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳು, ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಗಳ ಮೂಲಕ ನಾಡಿನ ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಸ್ವಾವಲಂಬಿ ಬದುಕಿನ ಕನಸಿಗೆ ಬೆಂಬಲವಾಗಿ ನಿಂತಿದೆ. ನಮ್ಮ ಈ ಯೋಜನೆಗಳ ಫಲಾನುಭವಿಯಾದ ಪುಟ್ಟ ಹುಡುಗಿಯೊಬ್ಬಳು ನನ್ನೊಂದಿಗೆ ಪತ್ರದ ಮೂಲಕ ತನ್ನ ಸಂತಸ ಹಂಚಿಕೊಂಡು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಳು. ಪತ್ರ ಓದಿದಾಗಿಂದ ಆ ಮಗುವನ್ನು ಒಮ್ಮೆ ಭೇಟಿಯಾಗಬೇಕೆಂದು ಬಯಸಿದ್ದೆ, ಅದು ಇಂದು ಸಾಧ್ಯವಾಯಿತು.
ಇಂತಹ ಮುಗ್ಧ ಮಕ್ಕಳ ಭವಿಷ್ಯದ ಕನಸುಗಳು ನಮ್ಮ ಸರ್ಕಾರದ ಕೈಗಳಲ್ಲಿ ಸುರಕ್ಷಿತವಾಗಿದೆ. ಈ ಮಕ್ಕಳ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯವೆಂದು ಭಾವಿಸಿ, ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications