ಲೋಕಾಯುಕ್ತ FIR ಕುರಿತು ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ: ಸಿಎಂ ಸ್ಥಾನದ ರಾಜೀನಾಮೆ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರು, ಸೆಪ್ಟೆಂಬರ್ 28: ಮುಡಾ ಹಗರಣದ ಕುರಿತು ಸಿಎಂ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ವಿಪಕ್ಷಗಳು ಒತ್ತಡ ಹಾಕುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುಡುಗಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,17 ಎ ಪ್ರಕಾರ ಎಫ್ ಐ ಆರ್ ದಾಖಲು ಮಾಡಿ, ತನಿಖೆ ಮಾಡುತ್ತಾರೆ . ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಚುನಾವಣಾ ಬಾಂಡ್ ಸಂಬಂಧಿಸಿದಂತೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆಯೂ ಎಫ್ ಐ ಆರ್ ದಾಖಲಿಸಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅವರು ರಾಜಿನಾಮೆ ಕೊಡುತ್ತಾರೆಯೇ ? ಎಂದು ಪ್ರಶ್ನಿಸಿದರು.

ಬಿಜೆಪಿಯವರು, ಸಿಎಂ ರಾಜಿನಾಮೆ ಕೊಡುತ್ತಾರೆ ಎನ್ನುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಮೊದಲು ಕುಮಾರಸ್ವಾಮಿಯವರು ರಾಜಿನಾಮೆ ನೀಡಲಿ. ಚುನಾವಣಾ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ಮೋದಿಯವರೂ ರಾಜಿನಾಮೆ ನೀಡಬೇಕಾಗುತ್ತದೆ ಎಂದು ಸಿದ್ದರಾಮುಯ್ಯ ಅವರು ಹೇಳಿದರು.
ದಸರಾ ಮಹೋತ್ಸವದಲ್ಲಿ ಉತ್ತಮ ರಸ್ತೆ, ವಿದ್ಯುತ್ ಅಲಂಕಾರ ಸೇರಿದಂತೆ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಇತ್ತೀಚೆಗೆ ನಾಗಮಂಗಲದ ಘಟನೆ, ಪೊಲೀಸರ ಕರ್ತವ್ಯ ಲೋಪದಿಂದ ನಡೆದಿದ್ದು, ಅನಾಹುತ ನಡೆಯುವ ಸಂಭವವಿರುತ್ತಿರಲಿಲ್ಲ. ಆ ರೀತಿಯ ಲೋಪಗಳು ದಸರಾ ಸಂದರ್ಭದಲ್ಲಿ ನಡೆಯಬಾರದೆಂದು ಸೂಚಿಸಲಾಗಿದೆ ಎಂದರು.
ಸಾಹಿತಿ ಹಂ.ಪ. ನಾಗರಾಜಯ್ಯ ನವರಿಂದ ಈ ಬಾರಿಯ ದಸರಾ ಉತ್ಸವವನ್ನು ಉದ್ಘಾಟಿಸಲಿದ್ದು, ದಸರಾ ಉತ್ಸವವನ್ನು ಜನರ ಉತ್ಸವದಂತೆ ಆಚರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಕ್ಟೋಬರ್, 3 ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಈ ಬಾರಿ ಹಂ.ಪ. ನಾಗರಾಜಯ್ಯ ನವರು ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ. ಅಂದು ದಸರಾ ಉದ್ಘಾಟನೆ, ವಸ್ತುಪ್ರದರ್ಶನ, ದಸರಾ ಕ್ರೀಡಾ ಉತ್ಸವ ಉದ್ಘಾಟನೆ , ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮ, ಸಿನಿಮೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ದಸರಾ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸರ್ವ ಸಿದ್ದತೆಗಳನ್ನು ಮಾಡುತ್ತಿದ್ದಾರೆ ಎಂದರು.
ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡಬೇಕಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ತಮಿಳುನಾಡಿಗೆ ಈಗಾಗಲೇ 202 ಟಿ.ಎಂ.ಸಿ ನೀರು ಬಿಡಲಾಗಿದೆ. ಕರ್ನಾಟಕ ನಿಯಮಾನುಸಾರ ಬಿಡುವ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ತಮಿಳುನಾಡಿಗೆ ಹರಿಸಿದೆ ಎಂದರು.












Click it and Unblock the Notifications