Siddaramaiah: ಸಿದ್ದರಾಮಯ್ಯ ಹೆಲಿಕಾಪ್ಟರ್ ಹಾರಾಟ ಬಲು ದುಬಾರಿ! ಸರ್ಕಾರದಿಂದ ಖರ್ಚಾಗಿದ್ದೆಷ್ಟು ಗೊತ್ತಾ?
ಬೆಳಗಾವಿ, ಡಿಸೆಂಬರ್ 11: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರವಾಸದ ವೆಚ್ಚ ತೀವ್ರ ಅಚ್ಚರಿ ಮೂಡಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಈವರೆಗೆ ಅಂದರೆ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣ ವೆಚ್ಚದ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದೆ.
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚಾಗಿ ಯಾವ ಸ್ಥಳಕ್ಕೆ ಪ್ರವಾಸ ಕೈಗೊಂಡರು ಹೆಚ್ಚಾಗಿ ಹೆಲಿಕಾಪ್ಟರ್ನಲ್ಲೇ ಹೋಗ್ತಾರೆ. ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡೂವರೆ ವರ್ಷದ ಪ್ರವಾಸದ ವೆಚ್ಚ ತೀವ್ರ ಅಚ್ಚರಿಗೆ ಕಾರಣವಾಗಿದೆ. ಸದ್ಯ ಬೆಂಗಳೂರು ಗುಂಡಿಗಳ ನಗರವಾಗಿದೆ ಎಂದು ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆಗಳೆಲ್ಲಾ ಗುಂಡಿಗಳಿಂದ ತುಂಬಿ ತುಳುಕುತ್ತಿರುವಾಗ ಹೆಲಿಕಾಪ್ಟರ್ನಲ್ಲಿ ಓಡಾಡಲು ಸಿದ್ದರಾಮಯ್ಯ ಇಷ್ಟೊಂದು ಹಣ ಖರ್ಚು ಮಾಡಿದ್ರಾ ಎನ್ನುವ ಪ್ರಶ್ನೆ ಮೂಡಿದೆ.

ಇಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್ ಚುಕ್ಕೆ ರಹಿತ ಪ್ರಶ್ನೆಗೆ ಸರ್ಕಾರದಿಂದ ಉತ್ತರ ಬಂದಿದ್ದು, ಸಿದ್ದರಾಮಯ್ಯ ವಿಮಾನಯಾನಕ್ಕೆ 47 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದನದಲ್ಲಿ ಮಾಹಿತಿ ನೀಡಿದೆ. ಸಿದ್ದರಾಮಯ್ಯನವರು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಹೋಗಲು ಹೆಲಿಕಾಪ್ಟರ್, ವಿಮಾನ ಬಳಕೆ ಮಾಡುತ್ತಾರೆ. ಹಾಗೇ ದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ವಿವಿದೆಡೆ ಓಡಾಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ 47 ಕೋಟಿ (47,38,24,347) ರೂಪಾಯಿ ಖರ್ಚಾಗಿದೆ.
2023 ರಿಂದ 2025ರ ನವೆಂಬರ್ ವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣಕ್ಕೆ ಸರ್ಕಾರಿ ಬೊಕ್ಕಸದಿಂದ 47 ಕೋಟಿ ರೂಪಾಯಿ (47,38,24,347) ವೆಚ್ಚವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಪ್ರಯಾಣಕ್ಕೆ 2023-24ರಲ್ಲಿ 12.65 ಕೋಟಿ ರೂ. ಮತ್ತು 2024-25ರ ಜನವರಿ 15 ರವರೆಗೆ 19.35 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಇನ್ನೂ ಬೆಂಗಳೂರಿನಿಂದ ಕೇವಲ 1.5 ಗಂಟೆ ಪ್ರಯಾಣದಂತಹ ಮೈಸೂರಿನ ಹತ್ತಿರದ ಸ್ಥಳಗಳಿಗೂ ಸಿಎಂ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣಗಳಿರುವ ಹುಬ್ಬಳ್ಳಿ, ಕಲಬುರಗಿ, ಮೈಸೂರು, ಬೆಳಗಾವಿಯಂತಹ ಜಿಲ್ಲಾ ಪ್ರವಾಸದ ವೇಲೆ ಹೆಚ್ಚಾಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ.
ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ: ಡಿ.ಕೆ. ಶಿವಕುಮಾರ್
ರಾಜ್ಯ ಸರಕಾರದ ಅತಿ ಗಣ್ಯ ವ್ಯಕ್ತಿಗಳು ತುರ್ತು ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಸಲು ಅತ್ಯುತ್ತಮ ಗುಣಮಟ್ಟದ ಹೆಲಿಕ್ಯಾಪ್ಟರ್, ವಿಶೇಷ ವಿಮಾನದ ಸೇವೆಯನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ತೀರ್ಮಾನಿಸಲಾಗಿದೆ. ಹೆಲಿಕಾಪ್ಟರ್, ವಿಶೇಷ ವಿಮಾನ ಖರೀದಿ ಮಾಡಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಹೆಲಿಕಾಪ್ಟರ್ ಸೇವೆ ಒದಗಿಸುವಂತೆ ನಾವು ಹೆಚ್ಎಎಲ್ ಗೆ ಕೇಳಿದ್ದೆವು. ಅವರು ಇನ್ನೂ ತಡವಾಗುತ್ತದೆ ಎಂದು ಹೇಳಿದರು.
ಹೆಚ್ ಎ ಎಲ್ ನಲ್ಲೇ ಹೆಲಿಕಾಪ್ಟರ್ ತಯಾರು ಮಾಡಲಾಗುತ್ತಿದೆ. ಏರ್ ಶೋ ವೇಳೆ ನಾನು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ನೋಡಿದ್ದೆವು. ಅಲ್ಲಿನ ಹೆಲಿಕಾಪ್ಟರ್ ಚೆನ್ನಾಗಿತ್ತು. ಅವರೇ ನಿರ್ವಹಣೆ ಮಾಡುತ್ತಾರೆ. ಹೀಗಾಗಿ ಅವರ ಸೇವೆಗೆ ಮನವಿ ಮಾಡಿದ್ದೆವು. ಸೇವೆ ಒದಗಿಸುವುದು ತಡವಾಗುವ ಕಾರಣ ಅವರೇ ಒಂದು ಸಂಸ್ಥೆಯನ್ನು ಶಿಫಾರಸ್ಸು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಟೆಂಡರ್ ಕರೆಯಲಾಗಿದ್ದು, ಕೆಲವರು ಭಾಗಿಯಾಗಿದ್ದಾರೆ. ಹೀಗಾಗಿ ಸಂಪುಟ ಉಪಸಮಿತಿ ಸದಸ್ಯರಾದ ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್ ಹಾಗೂ ಅಧಿಕಾರಿಗಳು ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಮುಂದಿನ ಸೋಮವಾರ ಅಥವಾ ಮಂಗಳವಾರ ಮತ್ತೊಂದು ಸಭೆ ಮಾಡುತ್ತೇವೆ. ಇದಕ್ಕೆ ತಾಂತ್ರಿಕವಾಗಿ ಪರಿಣಿತಿ ಹೊಂದಿರುವವರು ಬೇಕು. ಬೇರೆ ಸರ್ಕಾರಗಳಿಗೆ ಉತ್ತಮ ಸೇವೆ ನೀಡಿರುವಂತಹವರನ್ನು ನಾವು ಪರಿಗಣಿಸುತ್ತೇವೆ. ನಮಗೆ ಸುರಕ್ಷತೆ ಹಾಗೂ ಸರ್ಕಾರದ ಹಣ ಎರಡೂ ಮುಖ್ಯ ಎಂದು ತಿಳಿಸಿದರು.












Click it and Unblock the Notifications