ಚುನಾವಣಾ ಲಾಭಕ್ಕಾಗಿ ಸಿದ್ದರಾಮಯ್ಯರಿಂದ ಜಾತಿ ಗಣತಿ ಪ್ರಸ್ತಾಪ: ಬೊಮ್ಮಾಯಿ ಕಿಡಿ
ಬೆಂಗಳೂರು, ನವೆಂಬರ್ 23: ಜಾತಿ ಗಣತಿ ವಿಚಾರ ದಿನೇ ದಿನೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯ ಲಾಭ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೂತನ ಕಚೇರಿ ಉದ್ಘಾಟನೆ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜಾತಿ ಜನಗಣತಿಯ ವಿಚಾರದಲ್ಲಿ ಸಿದ್ದರಾಮಯ್ಯ ನವರು ಮೊದಲಿನಿಂದಲೂ ಗೊಂದಲದ ಗೂಡು ಮಾಡಿದ್ದಾರೆ ಎಂದರು.

ಆರಂಭದಲ್ಲಿ ಜಾತಿಗಣತಿ ಅಂದರು, ಆಮೇಲೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ವರದಿ ಅಂದರು. ಸರ್ಕಾರಿ ಆದೇಶದಲ್ಲಿ ಸಾಮಾಜಿಕ ಶೈಕ್ಷಣಿಕ ವರದಿ ಎಂದು ಬರೆದಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ವರದಿ ಬಳಿಕ ನಮ್ಮ ತೀರ್ಮಾನ
ಹಿಂದುಳಿದ ವರ್ಗಗಳ ಆಯೋಗ ಮಾಡಿರುವುದು ಸರಿಯಾಗಿ ಸಮೀಕ್ಷೆ ಆಗಿಲ್ಲ, ಸದಸ್ಯರು, ಅಧ್ಯಕ್ಷರಿಗೆ ಸಾಮ್ಯತೆ ಇರಲಿಲ್ಲ. ರಾಜಕೀಯ ಹಸ್ತಕ್ಷೇಪ ಇತ್ತು. ಇಷ್ಟೆಲ್ಲ ನಡೆದಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಸುಮ್ಮನಿದ್ದರು. ಆಗ ವರದಿ ಪಡೆದಿಲ್ಲ. ಈಗ ಚುನಾವಣೆ ಬರುತ್ತಿದೆ ಎಂದು ರಾಜಕೀಯ ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಸ್ಪಷ್ಟ ವರದಿ ಬಂದ ಮೇಲೆ ನಮ್ಮ ತೀರ್ಮಾನ ತಿಳಿಸುತ್ತೇವೆ ಎಂದು ಹೇಳಿದರು.
ಜಾತಿ ಗಣತಿಗೆ ಒಕ್ಕಲಿಗರ ವಿರೋಧ: ಡಿಕೆಶಿ ಸಹಿ
ಡಾ.ಕಾಂತರಾಜು ಅವರು ನೇತೃತ್ವದಲ್ಲಿ ಆಯೋಗದಿಂದ ಸಿದ್ಧವಾದ ಜಾತಿ ಗಣತಿ ವರದಿ ವಿಚಾರ ಸದ್ಯ ಸಾಕಷ್ಟು ಸದ್ದು ಮಾಡುತ್ತಿದೆ. ಇದಕ್ಕೆ ಒಕ್ಕಲಿಗ ಸಮುದಾಯ ನಾಯಕರು ಈ ವರದಿ ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೆ ಸರ್ಕಾರ ಇದನ್ನು ಜಾರಿಗೆ ತರಬಾರದು ಎಂದು ಮನವಿ ಮಾಡಿದ್ದರು.

ಈ ಮನವಿ ಪತ್ರಕ್ಕೆ ಸರ್ಕಾರದ ಪ್ರತಿನಿಧಿಯಾಗಿರುವ ಒಕ್ಕಲಿಗ ಸಮುದಾಯದ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹ ಸಹಿ ಹಾಕಿದ್ದು ಗೊತ್ತಾಗುತ್ತಿದ್ದಂತೆ ಇದು ಬಿಜೆಪಿಯವರ ಕಟು ಟೀಕೆಗೆ ಗುರಿಯಾಗತೊಡಗಿತು. ಇನ್ನೂ ಜಾತಿ ಗಣತಿ ಮೂಲ ವರದಿ ಸಹ ನಾಪತ್ತೆ ಆಗಿದೆ ಎಂಬ ವಿಚಾರವೂ ಹೆಚ್ಚು ಗೊಂದಲ ಹುಟ್ಟು ಹಾಕಿದೆ.
ವರದಿ ಸಲ್ಲಿಕೆ ಮೊದಲೇ ಆಕ್ಷೇಪಣೆ ಏಕೆ?
ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಕುರಿತಾದ ಈ ಕಾಂತರಾಜು ಆಯೋಗದ ವರದಿ ಜಾರಿಗೂ ಮೊದಲೇ ವಿರೋಧವೇಕೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಜಾತಿ ಗಣತಿ ವರದಿ ನಮ್ಮ ಕೈಸೇರಿಲ್ಲ, ವರದಿ ಸಲ್ಲಿಕೆ ಬಳಿಕ ಆಕ್ಷೇಪಣೆ ಕುರಿತು ಮಾತನಾಡಿ. ಅಲ್ಲದೇ ಈ ವರದಿಗೆ ಒಕ್ಕಲಿಗರ ವಿರೋಧ ಕುರಿತು ಡಿಕೆ ಶಿವಕುಮಾರ್ ಅವರು ನನ್ ಬಳಿ ಚರ್ಚಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications