Cauvery Dispute: ತಮಿಳುನಾಡಿಗೆ ಕರ್ನಾಟಕ ನೀರು ಬಿಡುತ್ತಾ? ಬಿಡಲ್ವಾ?
ಕಾವೇರಿ ನದಿ ನೀರು ವಿವಾದ ಕುರಿತು ಚರ್ಚೆ ಬಲು ಜೋರಾಗಿರುವ ಸಂದರ್ಭದಲ್ಲೇ ಈಗ ಸಿದ್ದರಾಮಯ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿರುವ ಹಿನ್ನೆಲೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 12.30ಕ್ಕೆ ತುರ್ತು ಸಭೆ ಕರೆಯಲಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಸಚಿವರು, ಎಲ್ಲಾ ಪಕ್ಷಗಳ ಮಾಜಿ ಸಿಎಂಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯ ಸಭಾ ಸದಸ್ಯರುಗಳು ತುರ್ತು ಸಭೆಯಲ್ಲಿ ಭಾವಹಿಸಲಿದ್ದಾರೆ. ಇದೇ ಸಭೆಯಲ್ಲಿ ಕರ್ನಾಟಕ ತನ್ನ ಮುಂದಿನ ನಡೆ ನಿರ್ಧರಿಸುವ ಸಾಧ್ಯತೆ ಇದೆ.

ಸಚಿವರ ಜೊತೆ ಮಹತ್ವದ ಮೀಟಿಂಗ್
ಹಾಗೇ ಇನ್ನೊಂದು ಕಡೆ ಈಗಾಗಲೇ ಸರ್ಕಾರದ ಪ್ರತಿನಿಧಿಗಳ ಜೊತೆ ಸಿಎಂ ಸಭೆ ನಡೆದಿದೆ. ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿದ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದು ಡಿಸಿಎಂ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯ ಸ್ವಾಮಿ, ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ನಾಗೇಂದ್ರ , ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಎಸಿಎಸ್ ರಜನೀಶ್ ಗೋಯಲ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿ ಸಂಬಂಧಪಟ್ಟ ಹಲವು ಅಧಿಕಾರಿಗಳು ಸಭೆಯಲ್ಲಿದ್ದರು.
ವಿರೋಧ ಪಕ್ಷಗಳಿಂದ ಸರ್ಕಾರಕ್ಕೆ ಬೆಂಬಲ?
ಇನ್ನು ಕಾವೇರಿ ನದಿ ನೀರು ಬಿಡುವ ವಿಚಾರದಲ್ಲಿ ವಿರೋಧ ಪಕ್ಷಗಳು ಯಾವ ನಿಲುವನ್ನ ಕೈಗೊಳ್ಳುತ್ತವೆ? ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈಗಾಗಲೇ ಈ ಕುರಿತು ಮಾತನಾಡಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕ ಸರ್ಕಾರ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುವುದಿಲ್ಲ ಎಂದು ಗಟ್ಟಿಯಾಗಿ ನಿಂತರೆ ನಾವು ಸರ್ಕಾರದ ಜೊತೆ ನಿಲ್ಲುತ್ತೇವೆ ಎಂದಿದ್ದಾರೆ.
ನೀರಿಗಾಗಿ ಮತ್ತೆ ಶುರುವಾಯ್ತು ವಾರ್!
ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಪ್ರತಿ ದಿನವೂ 5,000 ಕ್ಯೂಸೆಕ್ ರೀತಿ ತಮಿಳುನಾಡಿಗೆ ಮತ್ತೆ 15 ದಿನಗಳ ಕಾಲ ಕಾವೇರಿ ನೀರು ಹರಿಸುವಂತೆ, ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವ ಹಿನ್ನೆಲೆ ಮಾಜಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡುವಾಗ ಹೀಗೆ ಹೇಳಿದ್ದಾರೆ. ಹೀಗಾಗಿ ನಾಳಿನ ಸಭೆಯ ಬಳಿಕ ಕರ್ನಾಟಕದ ನಿರ್ಧಾರ ಅಂತಿಮವಾಗಲಿದೆ. ಹಾಗೇ ಮತ್ತೊಮ್ಮೆ ಕಾವೇರಿ ನದಿ ನೀರಿಗಾಗಿ 2 ರಾಜ್ಯಗಳ ಮಧ್ಯೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಪರದಾಡುತ್ತಿರುವ ಕಾವೇರಿ ಕೊಳ್ಳದ ಜನ
ಒಂದು ಕಡೆ ತಮಿಳುನಾಡು ತನ್ನಲ್ಲಿ ಇರುವ ನೀರನ್ನ ಖಾಲಿ ಮಾಡಿಕೊಂಡು, ಈಗ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿದೆ. ಹೀಗಾಗಿ ಕರ್ನಾಟಕ ಅನಿವಾರ್ಯ ಪರಿಸ್ಥಿತಿ ಕಾರಣಕ್ಕೆ ಈಗಾಗಲೇ 15 ದಿನಗಳ ಕಾಲ ನೀರು ಬಿಟ್ಟಿದೆ. ಆದ್ರೆ ಈಗ ಮತ್ತೆ ನೀರು ಬಿಡುವಂತೆ ಭಾರಿ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಕರ್ನಾಟಕ ಸರ್ಕಾರವೂ ನೀರು ಬಿಡಲು ಆಗಲ್ಲ ಎಂಬ ನಿಲುವಿಗೆ ಬರುವ ಸಾಧ್ಯತೆ ಇದೆ.

ನೆರೆ ರಾಜ್ಯದ ಕಿರಿಕಿರಿ ನಡುವೆ ಸಿದ್ದರಾಮಯ್ಯ ಸರ್ಕಾರ ಇದೀಗ ಖಡಕ್ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ನಮ್ಮಲ್ಲೇ ನೀರು ಇಲ್ಲದೆ ರೈತರು ಹಾಗೂ ಹಳ್ಳಿಗಳ ಜನರು ನಿತ್ಯವು ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಕಾವೇರಿ ಕೊಳ್ಳದ ಡ್ಯಾಂಗಳನ್ನ ಖಾಲಿ ಮಾಡಿ ನೀರು ಕೊಡಬೇಕಾ? ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗಿದ್ದರೂ ನೆರೆಯ ರಾಜ್ಯ ತಮಿಳುನಾಡು ಸರ್ಕಾರ ಮಾತ್ರ ಕರ್ನಾಟಕದ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ
ಇನ್ನು, ಕಾವೇರಿ ನದಿ ನೀರಿನ ವಿಚಾರವಾಗಿ ಚರ್ಚೆ ನಡೆಸಲು ನಾಳೆ ತುರ್ತು ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಮಾಹಿತಿ ನೀಡಿದ್ದಾರೆ. ಹಾಗೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು & ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳ ಜೊತೆ ಸಭೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹಲವು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ದೆಹಲಿಗೆ ತಲುಪುತ್ತಾ ಕರ್ನಾಟಕದ ಸಂಕಷ್ಟ?
ಕಾವೇರಿ ವಿಚಾರವಾಗಿ ಚರ್ಚೆ ಮಾಡಲು ಸರ್ವಪಕ್ಷ ಸಭೆ ಕರೆಯಲಾಗಿದೆ. ಹಿರಿಯ ನಾಯಕರು, ಸಂಸದರು, ಸಚಿವರನ್ನು ಸಭೆಗೆ ಆಹ್ವಾನಿಸಲಾಗಿದೆ. ನಾಳೆ ದೆಹಲಿಗೆ ತೆರಳುತ್ತಿದ್ದು, ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸಂಕಷ್ಟ ಪರಿಸ್ಥಿತಿ ಕುರಿತು ಮನವಿ ಸಲ್ಲಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಈ ಮೂಲಕ ರಾಜ್ಯ ಪರಿಸ್ಥಿತಿ ಬಗ್ಗೆ ದೆಹಲಿ ಮಟ್ಟದಲ್ಲಿ ಸುದ್ದಿ ಮುಟ್ಟಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.
ನಮಗೇ ನೀರಿಲ್ಲ.. ಇನ್ನು ಅವರಿಗೆ...
ನಮ್ಮಲ್ಲಿ ನೀರಿದ್ದರೆ ಅದನ್ನು ಬಿಡಲು ಯಾವುದೇ ಅಭ್ಯಂತರವಿರಲಿಲ್ಲ. ಆದರೆ ನಮಗೆ ನೀರಿನ ಹೆಚ್ಚಿನ ತೊಂದರೆ ಎದುರಾಗಿದೆ. ನಮ್ಮಲ್ಲಿ ಮಳೆ ಕೊರತೆ ಎದುರಾಗಿದ್ದು, ನೀರು ಇಲ್ಲವಾಗಿದೆ. ಕುಡಿವ ನೀರು ಶೇಖರಣೆ ನಮ್ಮ ಮೊದಲ ಆದ್ಯತೆ. ನಮ್ಮ ಸ್ಥಿತಿ ಕುರಿತು ಅಡ್ವೊಕೇಟ್ ಜನರಲ್ ಹಾಗೂ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಇದೇ ವೇಳೆ ಮಾಹಿತಿ ನೀಡಿದ್ದಾರೆ. ಹೀಗೆ ತಮಿಳುನಾಡು ಸರ್ಕಾರದ ಸವಾಲಿಗೆ ಕರ್ನಾಟಕ ಕೂಡ ಈಗ ಪ್ರತಿ ಸವಾಲು ಹಾಕಿದೆ.
ಒಟ್ನಲ್ಲಿ ತಿಳಿಸಿ ಹೇಳಿದರೂ ತಮಿಳುನಾಡು ಸರ್ಕಾರ ತಿಳಿದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕರ್ನಾಟಕದಲ್ಲಿ ಮುಂಗಾರು ಮಳೆಯ ಕೊರತೆ ನಡುವೆ ಬರದ ಸ್ಥಿತಿ ಎದುರಾಗಿದೆ. ಹೀಗೆ ಕರ್ನಾಟಕದಲ್ಲಿ ಸಂಕಷ್ಟ ಇರುವಾಗ ಈಗಾಗಲೇ ಭಾರಿ ಪ್ರಮಾಣದ ನೀರನ್ನು ಬಿಡಲಾಗಿದೆ. ಆದರೂ ಮತ್ತೆ ಮತ್ತೆ ಕಿರಿಕ್ ಶುರುವಾಗಿರುವುದು ರಾಜ್ಯ ಸರ್ಕಾರಕ್ಕೂ ಸಂಕಟ ತರಿಸಿದೆ. ಹೀಗಾಗಿ ಮತ್ತೆ ನೀಡುವ ಬಿಡದೇ ಇರುವುದಕ್ಕೆ ನಿರ್ಧರಿಸುವ ಸಾಧ್ಯತೆ ಇದೆ. ಹೀಗಾಗಿಯೇ ತಮಿಳುನಾಡು ಕೂಡ ಕಾನೂನು ಹೋರಾಟದ ಬಗ್ಗೆ ಮಾತನಾಡುತ್ತಿದ್ದು, ಮುಂದೆ ನೀರಿನ ಕಿತ್ತಾಟ ದೊಡ್ಡದಾಗುವ ಸಂಭವ ಹೆಚ್ಚಾಗಿದೆ. ಕರ್ನಾಟಕ ಸರ್ಕಾರ ಕೂಡ ಇದೇ ಪರಿಸ್ಥಿತಿ ಮುಂದಿಟ್ಟು ಮೇಕೆದಾಟು ಯೋಜನೆ ಪರವಾಗಿ ವಾದಿಸುವ ಸಾಧ್ಯತೆ ಇದೆ.












Click it and Unblock the Notifications