Siddaramaiah: ಬಿಜೆಪಿ ಶಾಸಕರು ಉತ್ತರ ಕರ್ನಾಟಕ ವಿರೋಧಿಗಳು: ಸಿಎಂ ಸಿದ್ದರಾಮಯ್ಯ ಆಕ್ರೋಶ
ಸೋಮವಾರ ಅಧಿವೇಶನದಲ್ಲಿ ವಿಪಕ್ಷ ನಾಯಕರ ಗದ್ದಲ, ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಜಮೀರ್ ಅಹ್ಮದ್ ಖಾನ್ ಸ್ಪೀಕರ್ ಬಗ್ಗೆ ನೀಡಿದ ಹೇಳಿಕೆಯನ್ನು ವಿರೋಧಿಸಿ ವಿಪಕ್ಷಗಳು ಗದ್ದಲ ಸೃಷ್ಟಿಸಿದವು.
ವಿಪಕ್ಷಗಳ ವರ್ತನೆಗೆ ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವೈಫಲ್ಯ ಮುಚ್ಚಿ ಹಾಕಿ ಜನರ ಗಮನ ಬೇರೆಡೆ ಸೆಳೆಯಲು ವಿಧಾನಸಭೆಯಲ್ಲಿ ಈ ರೀತಿ ಗದ್ದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಜನರ ಹಣದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ. ಟ್ವೀಟ್‌ನಲ್ಲಿ, "ತಮ್ಮ ಪಕ್ಷದೊಳಗಿನ ಒಳಜಗಳ ಮತ್ತು ಬರಗಾಲ ಪರಿಹಾರಕ್ಕೆ ಹಣ ನೀಡದ ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆ ಕಡೆ ಸೆಳೆಯುವ ದುರುದ್ದೇಶದಿಂದ ರಾಜ್ಯದ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಧರಣಿ ನಡೆಸಿ ಕಲಾಪಕ್ಕೆ ತಡೆಯೊಡ್ಡುತ್ತಿದ್ದಾರೆ.
ಇವರಿಗೆ ರಾಜ್ಯದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರಿಗೆ ಜನತೆ ಛೀಮಾರಿ ಹಾಕುತ್ತಿರುವುದಕ್ಕೆ ಚುನಾಯಿತ ಪ್ರತಿನಿಧಿಗಳ ಇಂತಹ ಬೇಜವಾಬ್ದಾರಿ ನಡವಳಿಕೆಗಳೇ ಕಾರಣ." ಎಂದಿದ್ದಾರೆ.
ಜನರ ತೆರಿಗೆ ಹಣದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ವರ್ಷಕ್ಕೊಂದು ಬಾರಿ ವಿಧಾನಮಂಡಲದ ಅಧಿವೇಶನ ನಡೆಸುತ್ತಿರುವುದರ ಮುಖ್ಯ ಉದ್ದೇಶವೇ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿದೆ. ಇಂತಹ ಚರ್ಚೆಗೆ ಅವಕಾಶವನ್ನು ಕೊಡದೆ ಇರುವ ರಾಜ್ಯದ ಬಿಜೆಪಿ ಶಾಸಕರು ತಾವು ಉತ್ತರ ಕರ್ನಾಟಕದ ವಿರೋಧಿಗಳು ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.
ಕೇಂದ್ರ ಬರಪರಿಹಾರ ಕೊಟ್ಟಿಲ್ಲ
ರಾಜ್ಯದ 223 ತಾಲ್ಲೂಕುಗಳಲ್ಲಿ ಬರಪರಿಸ್ಥಿತಿ ಇದೆ. ರಾಜ್ಯ ಸರ್ಕಾರ ಶಕ್ತಿ ಮೀರಿ ಪರಿಹಾರ ಕಾರ್ಯವನ್ನು ನಡೆಸುತ್ತಿದೆ. ಬರಪರಿಹಾರಕ್ಕಾಗಿ ರೂ.18,171 ಕೋಟಿ ನೆರವನ್ನು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಈ ನಷ್ಟಕ್ಕೆ ಪರಿಹಾರ ನೀಡಲು ರೂ.4,663 ಕೋಟಿ ಕೇಳಿದ್ದೇವೆ. ಸೆಪ್ಟಂಬರ್ 21 ರಂದು ಬರಪರಿಹಾರಕ್ಕಾಗಿ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೆವು. ಕೇಂದ್ರದ ತಂಡ ಬಂದು ಸಮೀಕ್ಷೆ ನಡೆಸಿ, ವರದಿಯನ್ನೂ ಕೂಡಾ ನೀಡಿದೆ. ರಾಜ್ಯ ಸರ್ಕಾರದ ಮನವಿಗೆ ಇಲ್ಲಿಯ ವರೆಗೆ ಕೇಂದ್ರ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ. ನಾವು ಬರೆದ ಪತ್ರಗಳಿಗೆ ಪ್ರತಿಕ್ರಿಯೆ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದರೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಡಬಲ್ ಎಂಜಿನ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ತುಪ್ಪದ ಹೊಳೆ ಹರಿಯುತ್ತದೆ ಎಂಬ
ನಾಯಕರ ಹಸಿ ಸುಳ್ಳುಗಳನ್ನು ನಂಬಿ ಕನ್ನಡಿಗರು 25 ಮಂದಿ ಬಿಜೆಪಿ ಸದಸ್ಯರನ್ನು ಲೋಕಸಭೆಗೆ ಕಳಿಸಿದ್ದರು. ಅವರು ಇಲ್ಲಿಯವರೆಗೆ ಲೋಕಸಭೆಯಲ್ಲಿ ತುಟಿ ಬಿಚ್ಚಿಲ್ಲ. ವಿಧಾನಮಂಡಲದಲ್ಲಿ ಬರಗಾಲದ ಚರ್ಚೆ ನಡೆದರೆ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಈ ಅನ್ಯಾಯದ ವಿವರಗಳೆಲ್ಲವೂ ಹೊರಬಂದು ರಾಜ್ಯದ ಜನರ ಎದುರು ತಲೆತಗ್ಗಿಸುವಂತಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ರಾಜ್ಯದ ಬಿಜೆಪಿ ಶಾಸಕರು ಧರಣಿ ನಡೆಸಿ ಕಲಾಪ ನಡೆಯದಂತೆ ತಡೆಯೊಡ್ಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದಿರುವ ಸಿದ್ದರಾಮಯ್ಯ ರಾಜ್ಯದ ಇದನ್ನೆಲ್ಲಾ ಗಮನಿಸುತ್ತಿದ್ದಾರೆ ಎಂದರು.
ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಅಶೋಕ್ ಅವರಿಗೆ ಅವರ ಪಕ್ಷದ ಶಾಸಕರ ಬೆಂಬಲವೇ ಇಲ್ಲ. ಪ್ರತಿದಿನ ಅವರದ್ದೇ ಪಕ್ಷದ ಶಾಸಕರು ಒಬ್ಬೊಬ್ಬರಾಗಿ ಅಶೋಕ್ ಅವರ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಾರೆ. ಯಾವ ಕುರ್ಚಿಯೂ ಸಿಕ್ಕಿಲ್ಲ ಎಂಬ ವೇದನೆಯಿಂದ ಕುದಿಯುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹವರು ಬಹಿರಂಗವಾಗಿ ಬಿ.ಎಸ್. ಯಡಿಯೂರಪ್ಪನವರಿಂದ ಹಿಡಿದು ಆರ್.ಅಶೋಕ್ ವರೆಗೆ ಎಲ್ಲರ ವಿರುದ್ಧ ಹರಿಹಾಯುತ್ತಿದ್ದಾರೆ ಎಂದಿದ್ದಾರೆ.
ಮಾತೆತ್ತಿದರೆ ದಮ್ಮು - ತಾಖತ್ ಬಗ್ಗೆ ಮಾತನಾಡುವ ನಾಯಕರು ವಿಧಾನಮಂಡಲದ ಕಲಾಪದಲ್ಲಿ ಭಾಗವಹಿಸುವ ಧೈರ್ಯ ತೋರಬೇಕು. ವಿಧಾನಸಭಾ ಅಧಿವೇಶನವನ್ನು ಕರೆದಿರುವುದೇ ರಾಜ್ಯ ಸರ್ಕಾರದ ಆಡಳಿತದ ವಿಮರ್ಶೆಗೆ. ಸರ್ಕಾರ ತನ್ನ ಕರ್ತವ್ಯದಲ್ಲಿ ಎಡವಿದ್ದರೆ, ತಪ್ಪುಗಳನ್ನು ಮಾಡಿದ್ದರೆ ಅದನ್ನು ಎತ್ತಿ ತೋರಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕಾಗಿದೆ. ಆ ದಮ್ಮು - ತಾಖತ್ ಬಿಜೆಪಿ ಶಾಸಕರಿಗೆ ಇಲ್ಲ ಎಂದು ಸವಾಲು ಹಾಕಿದ್ದಾರೆ.












Click it and Unblock the Notifications