CM Siddaramaiah: ವಿಪಕ್ಷ ನಾಯಕ ಆಯ್ಕೆ ಕಗ್ಗಂಟು; ಬಿಜೆಪಿ ಗುಂಪುಗಾರಿಕೆ ಕುರಿತು ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಜುಲೈ03: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಇಂದಿನಿಂದ (ಸೋಮವಾರ) ಬಜೆಟ್ ಅಧಿವೇಶನವೂ ಪ್ರಾರಂಭವಾಗಿದೆ. ಆದರೆ, ಬಿಜೆಪಿಗೆ ಇನ್ನು ಸಹ ಪ್ರತಿಪಕ್ಷ ನಾಯಕನ ಸ್ಥಾನ ಅಲಂಕರಿಸುವ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ. ಬಿಜೆಪಿ ಹೈಕಮಾಂಡ್ ಗೆ ಆಯ್ಕೆ ದೊಡ್ಡ ಸಲಾವಾಗಿದ್ದು, ವಿಪಕ್ಷ ನಾಯಕನ ಆಯ್ಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆದೆ. ಬಿಜೆಪಿ ನಾಯಕರು ತಮ್ಮ ಪಕ್ಷ ಶಿಸ್ತಿನ ಪಕ್ಷ ಅಂತ ಹೇಳಿಕೊಳ್ಳುತ್ತಾರೆ. ಆದರೆ,ಅತೀ ಹೆಚ್ಚು ಅಶಿಸ್ತು ಇರುವ ಪಕ್ಷ ಬಿಜೆಪಿ. ವಿಪಕ್ಷ ನಾಯಕನ ಆಯ್ಕೆ ಆಗದಿರುವ ಬಗ್ಗೆ ಗೊತ್ತಿಲ್ಲ, ಅದು ಅವರ ಪಕ್ಷದ ವಿಚಾರ ಎಂದು ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬಹುಮತ ದೊರೆತರೂ, ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸುವಲ್ಲಿ, ಕಾಂಗ್ರೆಸ್ ನಡೆಸಿದ ಹಗ್ಗಜಗ್ಗಾಟವನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಇವರಿಂದ ಹೇಳಿಸಿಕೊಂಡು ಬುದ್ದಿ ಕಲಿಯುವ ಪರಿಸ್ಥಿತಿ ಯಾರಿಗೂ ಬಂದಿಲ್ಲ. ಇಷ್ಟಕ್ಕೂ ಹೊಸದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಸಿದ್ದರಾಮಯ್ಯ, 2008ರಲ್ಲಿ ಅಂದಿನ ವಿಪಕ್ಷ ನಾಯಕನ ಸ್ಥಾನ ಖರ್ಗೆ ಯವರಿಗೆ ದೊರೆತ ಕಾರಣ, ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆ ಪಕ್ಷದ ಕೆಲವು ಶಾಸಕರು ರಾಜೀನಾಮೆ ನೀಡಿದಾಗಲೂ, ಆ ಶಾಸಕರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು ಎಂದು ಬಿಜೆಪಿ ಹೇಳಿತ್ತು.
ಇನ್ನೂ ನಮ್ಮ ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಮ್ಮ ವರಿಷ್ಠರು ಸದನ ಪ್ರಾರಂಭಕ್ಕಿಂತಲೂ ಮೊದಲೆ, ಸೂಕ್ತ ಸಮಯದಲ್ಲಿ ಘೋಷಿಸುತ್ತಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ತಿಳಿಸಿತ್ತು. ಈ ಬಗ್ಗೆ ಕಾಂಗ್ರೆಸ್ ತಲೆ ಕೆರೆದುಕೊಳ್ಳುವುದನ್ನು ಬಿಟ್ಟು, ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನದ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಿದ್ದವಾಗಿರುವ ನಮ್ಮ ಪಕ್ಷದ ಶಾಸಕರನ್ನು ಹೇಗೆ ಎದುರಿಸಬೇಕೆಂದು ತಮ್ಮ ಸರಕಾರಕ್ಕೆ ಸಲಹೆ ನೀಡಲಿ ಎಂದು ಭಾನುವಾರ ಟ್ವೀಟ್ ಮೂಲಕ ಬಿಜೆಪಿ ಹೇಳಿತ್ತು.
ಇತ್ತ ಸೋಮವಾರ ವಿಧಾನಮಂಡಲ ಅಧಿವೇಶನ ಪ್ರಾರಂಭವಾದರೂ ವಿಪಕ್ಷ ನಾಯಕರ ಆಯ್ಕೆಯಾಗದ ಹಿನ್ನಲೆ ಬಿಜೆಪಿ ವಿರುದ್ದ ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದ್ದು, ಸರ್ಕಾರ ರಚನೆ ಆಯ್ತು, ನಮ್ಮ ಸರ್ಕಾರ ಟೆಕಾಫ್ ಆಗಿ ಹಲವು ದಿನಗಳಾಯ್ತು, ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯೂ ಆಯ್ತು, dear ಬಿಜೆಪಿ ಸದನವೂ ಪ್ರಾರಂಭವಾಯ್ತು. ಎಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕ? ಎಂದು ಪ್ರಶ್ನಿಸಿದ್ದು, ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಗ್ಯಾರಂಟಿಯನ್ನೂ ಕೊಡಲಾಗುತ್ತಿಲ್ಲ ಎಂದರೆ ಎಂತಹ ಹಿನಾಯ ಸ್ಥಿತಿಯಲ್ಲಿದೆ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.












Click it and Unblock the Notifications