Tungabhadra Dam: ಎರಡನೇ ಬೆಳೆಗೂ ನೀರು; ತುಂಗಭದ್ರಾ ಅಚ್ಚುಕಟ್ಟು ರೈತರಿಗೆ ಸಿಹಿಸುದ್ದಿ
ಕ್ರಸ್ಟ್‌ಗೇಟ್ ಮುರಿದು ಅಪಾರ ಪ್ರಮಾಣದ ನೀರು ಹೊರಗಡೆ ಹರಿದಿದ್ದರೂ ತುಂಗಭದ್ರಾ ಜಲಾಶಯ ಮತ್ತೆ ಭರ್ತಿಯಾಗಿದ್ದು ರೈತರಲ್ಲಿ ಸಂತಸ ತಂದಿದೆ. ಭರ್ತಿಯಾಗಿರುವ ಜಲಾಶಯಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದರು. ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಮೊದಲ ಸಿಎಂ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಶಿವರಾಜ ತಂಗಡಗಿ,ಜಮೀರ್ ಅಹ್ಮದ್ ಖಾನ್, ಶರಣಪ್ರಕಾಶ್ ಪಾಟೀಲ್ ಜೊತೆಯಾಗಿದ್ದರು. ಕ್ರಸ್ಟ್‌ಗೇಟ್ ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕನ್ನಯ್ಯ ನಾಯ್ಡು ಕೂಡ ಈ ಸಮಯದಲ್ಲಿ ಹಾಜರಿದ್ದರು.
ಬಾಗಿನ ಅರ್ಪಿಸಿದ ಬಳಿಕ ಕೊಪ್ಪಳದ ಗಿಣಿಗೇರಾ ಏರ್ ಸ್ಟ್ರಿಪ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕ್ರಸ್ಟ್ ಗೇಟ್‌ಗಳನ್ನು 50 ವರ್ಷಕ್ಕೆ ಒಮ್ಮೆ ಬದಲಿಸಬೇಕು. 70 ವರ್ಷಗಳಿಂದ ಗೇಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ 70 ವರ್ಷ ಬಾಳಿಕೆ ಬಂದಿವೆ, ಈಗ ಕ್ರಸ್ಟ್‌ಗೇಟ್ ಬದಲಾವಣೆ ಮಾಡುವ ಬಗ್ಗೆ ನಿರ್ಧಾರ ಮಾಡಲು ತಜ್ಞರ ಸಮಿತಿ ರಚನೆ ಮಾಡಲಾಗಿದ್ದು, ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕ್ರಸ್ಟ್‌ಗೇಟ್ ಅಳವಡಿಕೆ ಮಾಡಿದ ಬಳಿಕ ತುಂಗಭದ್ರಾ ಜಲಾಶಯ ಮತ್ತೆ ಭರ್ತಿಯಾಗಿದೆ. ಸದ್ಯ ಜಲಾಶಯದಲ್ಲಿ 101.77 ಟಿಎಂಸಿ ನೀರು ಲಭ್ಯವಿದೆ. ಈ ಬಾರಿ ಮುಂಗಾರು ಮತ್ತು ಹಿಂಗಾರು ಬಿತ್ತನೆಗೂ ನೀರು ಸಿಗಲಿದೆ ಎಂದು ಹೇಳಿದರು.
19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋಗಿದ್ದರಿಂದ ಸಮಸ್ಯೆಯಾಗಿತ್ತು, ಆದರೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಿವರಾಜ ತಂಗಡಗಿ, ಜಮೀರ್ ಅಹಮದ್ ಖಾನ್ ಸ್ಥಳದಲ್ಲೆ ಇದ್ದು ದುರಸ್ಥಿಗೆ ಕ್ರಮ ವಹಿಸಿದ್ದಾರೆ. ಕನ್ನಯ್ಯ ನಾಯ್ಡು ನೇತೃತ್ವದಲ್ಲಿ, ಜಿಂದಾಲ್, ನಾರಾಯಣ್ ಇಂಜಿನಿಯರಿಂಗ್ ಹಾಗೂ ಇಂಜಿನಿಯರ್‌ಗಳು, ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ತ್ವರಿತವಾಗಿ ಗೇಟ್ ಅಳವಡಿಸಲಾಗಿದೆ. ರೈತರಿಗೆ ಸದ್ಯ ಯಾವುದೇ ತೊಂದರೆಯಾಗಿಲ್ಲ, ಕ್ರಸ್ಟ್‌ಗೇಟ್ ಬೇಗ ಅಳವಡಿಸಿದ್ದರಿಂದ 20ಕ್ಕೂ ಹೆಚ್ಚು ಟಿಎಂಸಿ ನೀರು ಉಳಿತಾಯವಾಗಿದೆ ಎಂದು ಹೇಳಿದರು.
ರೈತರಿಗೆ ಆತಂಕ ಬೇಡ
ಮುಂಗಾರು ಬೆಳೆಗೆ ಜಲಾಶಯದಿಂದ ನೀರು ಬಿಡುತ್ತಾರೋ ಇಲ್ಲವೋ ಎನ್ನುವ ರೈತರ ಆತಂಕ ನಿವಾರಣೆಯಾಗಿದೆ. ಹಿಂಗಾರು ಬೆಳೆಗಳಿಗೂ ಯಾವುದೇ ತೊಂದರೆ ಇಲ್ಲ, ಎರಡನೇ ಬೆಳೆಗೂ ನೀರು ಒದಗಿಸಲು ಪ್ರಯತ್ನಿಸಲಾಗುತ್ತದೆ. 101 ಟಿಎಂಸಿ ನೀರು ಸಂಗ್ರಹವಾಗಿರುವುದರಿಂದ ನೀರು ಲಭ್ಯವಾಗು ವಿಶ್ವಾಸವಿದೆ ಎಂದು ಹೇಳಿದರು.












Click it and Unblock the Notifications