ಜಾತಿಗಣತಿ ಪ್ರಶ್ನಿಸಿದ ಆರ್.ಅಶೋಕ್‌ಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಾತಿ ಗಣತಿ ಜಾರಿ ಬಗ್ಗೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಮಾಹಿತಿ ನೀಡಿದ್ದರು. ಶೀಘ್ರದಲ್ಲೇ ಈ ವರದಿ ಜಾರಿ ಮಾಡುವುದಾಗಿ ಭರವಸೆಯೂ ನೀಡಿದ್ದರು. ಈ ಜಾತಿ ಗಣತಿ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಿದ್ದರಾಮಯ್ಯ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದಕ್ಕೆ ಸಿಎಂ ಟ್ವೀಟ್‌ನಲ್ಲಿ ಉತ್ತರಿಸಿದ್ದಾರೆ.
ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು-ವಿರೋಧ ಇಲ್ಲ, ಅದರ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂಬ ವಿರೋಧಪಕ್ಷದ ನಾಯಕರಾದ ಆರ್.ಅಶೋಕ್ ಅವರ ಹೇಳಿಕೆಯಿಂದ ಮನಸ್ಸು ನಿರಾಳವಾಯಿತು. ಅಶೋಕ್ ಅವರೇ, ನಮ್ಮ ಪಕ್ಷದೊಳಗಿನ ತಕರಾರುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ, ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನೀವು ನುಡಿದಂತೆ ನಡೆದರೆ, ಜಾತಿ ಜನಗಣತಿ ಜಾರಿಯಾಗಿ ನೀವೇ ಹೇಳಿಕೊಂಡಿರುವ ನಿಮ್ಮ ಪಕ್ಷದ ಕನಸಿನ ಅಂತ್ಯೋದಯ ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ನೀವು ಮಾತ್ರ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು ಅಷ್ಟೆ! 2018ರಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದರೂ ಅಂಕಿಅಂಶಗಳ ಪರಿಶೀಲನಾ ಕಾರ್ಯ ಪೂರ್ಣಗೊಳ‍್ಳದೆ ಇದ್ದ ಕಾರಣ ಆ ಅವಧಿಯಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಬೇರೆ ಯಾವ ಕಾರಣಗಳು ಇರಲಿಲ್ಲ. ಈಗ ವರದಿ ಬಿಡುಗಡೆಗೆ ಸಿದ್ಧವಾಗಿದೆ ಎಂದಿದ್ದಾರೆ.
ನಮ್ಮ ಪಕ್ಷದ ಎಲ್ಲ ನಾಯಕರು ತಾತ್ವಿಕವಾಗಿ ಜಾತಿಗಣತಿಯನ್ನು ಒಪ್ಪಿಕೊಂಡಿದ್ದಾರೆ. ಯಾರ ವಿರೋಧವೂ ಇಲ್ಲ. ವಿರೋಧ ಪಕ್ಷಗಳ ಸುಳ್ಳು ಪ್ರಚಾರದಿಂದಾಗಿ ಕೆಲವರಲ್ಲಿ ನಿರಾಧಾರವಾದ ಸಂಶಯಗಳು ಹುಟ್ಟಿಕೊಂಡಿವೆ, ಇನ್ನು ಕೆಲವರಲ್ಲಿ ತಪ್ಪು ಅಭಿಪ್ರಾಯಗಳಿಂದಾಗಿ ಗೊಂದಲಗಳಿವೆ. ಮಠಾಧೀಶರು ಸೇರಿದಂತೆ ಎಲ್ಲರ ಅನುಮಾನ-ಸಂಶಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಜಾತಿ ಗಣತಿ ವರದಿಯನ್ನು ಜಾರಿಗೆ ತರುವ ನಿರ್ಧಾರವನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕಾಂತರಾಜ್ ಆಯೋಗ ನಡೆಸಿದ್ದ ಜಾತಿಗಣತಿಯ ವರದಿ ಇಲ್ಲಿಯ ವರೆಗೆ ಬಿಡುಗಡೆಯಾಗಿಲ್ಲ. ನಾನು ಕೂಡಾ ಅದನ್ನು ಓದಿಲ್ಲ. ಹೀಗಿರುವಾಗ ಅಶೋಕ್ ಅವರು ವರದಿ ಬಿಡುಗಡೆಯಾಗುವ ಮೊದಲೇ ಅದು ವೈಜ್ಞಾನಿಕವಾಗಿ ನಡೆದಿಲ್ಲ, ಅದರಲ್ಲಿ ತಪ್ಪುಗಳಿವೆ ಎಂದು ಆರೋಪಿಸುತ್ತಿದ್ದಾರೆ. ವರದಿ ಅವರಲ್ಲಿದೆಯೇ? ಯಾವ ಆಧಾರದಲ್ಲಿ ಅವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಕೇಳಿದ್ದಾರೆ.
ಈಗ ಏಕಾಏಕಿಯಾಗಿ ವರದಿಯನ್ನು ಬಿಡುಗಡೆಗೊಳಿಸುವ ನಿರ್ಧಾರ ಯಾಕೆ ಎಂದು ಆರ್.ಅಶೋಕ್ ಕೇಳುತ್ತಿದ್ದಾರೆ. ಇದೇನು ದಿಢೀರ್ ನಿರ್ಧಾರ ಅಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಇದರ ಬಗ್ಗೆ ಸಮಾಲೋಚನೆ ನಡೆಸುತ್ತಾ ಬಂದಿದ್ದೇವೆ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು, ಯಾವುದೇ ಚರ್ಚೆ-ಸಂವಾದ ಇಲ್ಲದೆ ದಿಢೀರ್ ನಿರ್ಧಾರ ಕೈಗೊಳ್ಳುವ ಸರ್ವಾಧಿಕಾರಿ ಧೋರಣೆ ನಮ್ಮದಲ್ಲ. ಸಾರ್ವಜನಿಕ ತೀರ್ಮಾನಗಳನ್ನು ಸಹಮತ ಮೂಡಿಸುವ ಮೂಲಕ ಕೈಗೊಳ್ಳಬೇಕೆಂಬ ಅಭಿಪ್ರಾಯ ನಮ್ಮದಾಗಿದೆ. ಇದರಿಂದಾಗಿ ಸ್ವಲ್ಪ ವಿಳಂಬವಾಗಿದೆ ಅಷ್ಟೆ ಎಂದು ವಿವರಣೆ ನೀಡಿದ್ದಾರೆ.
ಅಶೋಕ್ ಅವರೇ.. ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ, ಇದು ಕೇವಲ ಜಾತಿ ಜನಗಣತಿ ಅಲ್ಲ, ಇದು ಸರ್ವರ ಒಳಿತಿಗಾಗಿ ನಡೆಸಲಾದ ರಾಜ್ಯದ ಏಳು ಕೋಟಿ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ. ಇದನ್ನು ಇಲ್ಲಿಯವರೆಗೆ ದಲಿತರಾಗಲಿ, ಹಿಂದುಳಿದ ಜಾತಿಯವರಾಗಲಿ ವಿರೋಧಿಸಿಲ್ಲ. ಹೀಗಿರುವಾಗ ಅವರಿಗೆ ಅವಮಾನವಾಗಿದೆ ಎಂದು ಹೇಗೆ ಹೇಳುತ್ತೀರಿ? ಜಾತಿ ಜನಗಣತಿ ವಿರುದ್ಧ ತಳ ಸಮುದಾಯಗಳನ್ನು ಎತ್ತಿಕಟ್ಟುವ ಉದ್ದೇಶ ನಿಮ್ಮದಾಗಿದ್ದರೆ ನಿಮಗೆ ನಿರಾಶೆ ಖಚಿತ. ಜಾತಿ ಗಣತಿ ನನ್ನ ಕನಸಿನ ಕೂಸು ಎಂದು ಹೇಳಲು ಯಾವ ಹಿಂಜರಿಕೆಯೂ ಇಲ್ಲ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.
ಜಾತಿ ಗಣತಿ ಬಗ್ಗೆ ನನ್ನ ಬದ್ಧತೆಯನ್ನು ಪ್ರಶ್ನಿಸುತ್ತಿರುವ ಅಶೋಕ್ ಅವರು ತಮ್ಮ ಪಕ್ಷ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿಯೂ ಜಾತಿಗಣತಿ ನಡೆಸುವ ಧೈರ್ಯವನ್ನು ಯಾಕೆ ಮಾಡಿಲ್ಲ? ಎನ್ನುವ ಪ್ರಶ್ನೆಗೆ ಉತ್ತರಿಸಬೇಕು. ನೀವು ಇದೇ ಮಾತನ್ನು ಪ್ರಧಾನಿ ಮೋದಿ ಅವರಿಗೆ ಹೇಳಿ, ರಾಷ್ಟ್ರಮಟ್ಟದಲ್ಲಿ ಜನಗಣತಿಯ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವಂತೆ ಒತ್ತಡ ಹೇರಿ, ನಿಮ್ಮ ಬದ್ದತೆ ಮತ್ತು ಸತ್ಯಸಂಧತೆಯನ್ನು ಸಾಬೀತುಪಡಿಸಿ ಎಂದು ಸವಾಲು ಹಾಕಿದ್ದಾರೆ.
ಅಶೋಕ್ ಆರೋಪವೇನು?: ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು ಇಲ್ಲ ಅಥವಾ ವಿರೋಧವೂ ಇಲ್ಲ. ಆದರೆ ರಾಜಕೀಯ ಚದುರಂಗದಾಟದಲ್ಲಿ ಜಾತಿ ಜನಗಣತಿಯನ್ನು ದಾಳವಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ರಾಜಕೀಯ ಹಾವು-ಏಣಿ ಆಟದಲ್ಲಿ ಕೆಳಗೆ ಬಿದ್ದಾಗ ಮೇಲೇಳಲು, ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿಯನ್ನ ಏಣಿಯಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ತಕರಾರಿದೆ ಎಂದು ಆರ್.ಅಶೋಕ್ ಹೇಳಿದ್ದರು.












Click it and Unblock the Notifications