‘ಕನ್ನಡಕ್ಕೊಂದು ನಾಡಗೀತೆಯಂತೆ ನಾಡಧ್ವಜ ಇರಬೇಕೆಂಬುದು ಆರೂವರೆ ಕೋಟಿ ಕನ್ನಡಿಗರ ಒಕ್ಕೊರಲ ಒತ್ತಾಯ...’
ಕನ್ನಡ ನಾಡು & ನುಡಿ ವಿಚಾರ ಪ್ರಸ್ತಾಪ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸಿಎಂ ಸಿದ್ದರಾಮಯ್ಯ ಇಂದು ಹೊಸ ಬಾಂಬ್ ಸಿಡಿಸಿದ್ದಾರೆ. ಈ ಪೈಕಿ ಕನ್ನಡಿಗರ ಧ್ವಜದ ಬಗ್ಗೆ ಕೇಂದ್ರ ಸರ್ಕಾರ ಯಾವ ರೀತಿ ನಿಲುವು ಹೊಂದಿದೆ? ಎಂಬುದನ್ನ ಸಿಎಂ ಸಿದ್ದರಾಮಯ್ಯ ಈಗ ತಮ್ಮದೇ ವ್ಯಾಖ್ಯಾನದ ಮೂಲಕ ವಿವರಿಸಿದ್ದು, ಇದರ ಜೊತೆ ಕನ್ನಡಿಗರ ಧ್ವಜಕ್ಕೆ ಅನುಮತಿ ಏಕೆ ಸಿಕ್ಕಿಲ್ಲ? ಎಂಬ ಬಗ್ಗೆ ವಿವರಿಸುತ್ತಾ ಕೇಂದ್ರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರ ನಡುವೆ ತಿಕ್ಕಾಟ ಜೋರಾಗಿದೆ. ಅದರಲ್ಲಿ ಕನ್ನಡ ನಾಡು & ನುಡಿ ವಿಚಾರವಾಗಿ ಎರಡೂ ಪಕ್ಷಗಳ ನಾಯಕರು ಪರಸ್ಪರ ಆರೋಪ & ಪ್ರತ್ಯಾರೋಪ ಮಾಡುತ್ತಿದ್ದಾರೆ. ಹೀಗೆ ತಿಕ್ಕಾಟ ಜೋರಾಗಿರುವ ಸಮಯದಲ್ಲಿ, ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕನ್ನಡಿಗರ ವಿರೋಧಿ ಎಂಬ ಅಸ್ತ್ರವನ್ನು ಪ್ರಯೋಗ ಮಾಡಿದ್ದಾರೆ. ಹಾಗಾದರೆ ಸಿಎಂ ಈಗ ಎನ್‌ಡಿಎ ಸರ್ಕಾರದ ವಿರುದ್ಧ ಮಾಡಿರುವ ಆರೋಪ ಏನು?

ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯ?
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, 'ಕನ್ನಡಕ್ಕೊಂದು ನಾಡಗೀತೆಯಂತೆ ನಾಡಧ್ವಜ ಇರಬೇಕೆಂಬುದು ಆರೂವರೆ ಕೋಟಿ ಕನ್ನಡಿಗರ ಒಕ್ಕೊರಲ ಒತ್ತಾಯ. ಕನ್ನಡಿಗರ ಎದೆಯ ದನಿಗೆ ಓಗೊಟ್ಟು ನಾಡದ್ವಜವೊಂದನ್ನು ವಿನ್ಯಾಸಗೊಳಿಸಿ, ಮನ್ನಣೆಗಾಗಿ ಐದು ವರ್ಷಗಳ ಹಿಂದೆಯೇ ನಾವು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆವು. ಆದರೆ @narendramodi ನೇತೃತ್ವದ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯ ಎಸಗಿದೆ.' ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹಾಗೇ ಸಿಎಂ ಸಿದ್ದರಾಮಯ್ಯ ತಮ್ಮ ಆರೋಪ ಮುಂದುವರಿಸಿ, 'ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ ಇಲ್ಲವೇ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ನಾವು ನಮಗೊಂದು ನಾಡಗೀತೆಯನ್ನು ಒಪ್ಪಿಕೊಂಡಿಲ್ಲವೇ? ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುವುದೇ? ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜಗಳನ್ನು ಹಾರಿಸಬಹುದೆಂದು ರಾಷ್ಟ್ರಧ‍್ವಜ ಸಂಹಿತೆಯೇ ಹೇಳಿದೆ. ಹೀಗಿರುವಾಗ ಯಾಕೆ ಕನ್ನಡಿಗರ ಬಗ್ಗೆ ನಿಮಗೆ ತಾತ್ಸಾರ? ಕೇಂದ್ರ @BJP4India ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ #ಸ್ವಾಭಿಮಾನಿ_ಕನ್ನಡಿಗರಪ್ರಶ್ನೆ #AnswerMadiModi' ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಹೊಸ ಅಸ್ತ್ರವನ್ನು ಪ್ರಯೋಗ ಮಾಡಿದ್ದಾರೆ.
ಕನ್ನಡಕ್ಕೊಂದು ನಾಡಗೀತೆಯಂತೆ ನಾಡಧ್ವಜ ಇರಬೇಕೆಂಬುದು ಆರೂವರೆ ಕೋಟಿ ಕನ್ನಡಿಗರ ಒಕ್ಕೊರಲ ಒತ್ತಾಯ. ಕನ್ನಡಿಗರ ಎದೆಯ ದನಿಗೆ ಓಗೊಟ್ಟು ನಾಡದ್ವಜವೊಂದನ್ನು ವಿನ್ಯಾಸಗೊಳಿಸಿ, ಮನ್ನಣೆಗಾಗಿ ಐದು ವರ್ಷಗಳ ಹಿಂದೆಯೇ ನಾವು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆವು. ಆದರೆ @narendramodi ನೇತೃತ್ವದ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿ… pic.twitter.com/licuBjSup2
— Siddaramaiah (@siddaramaiah) October 31, 2023
ಒಟ್ನಲ್ಲಿ ಹೀಗೆ ಸಿಎಂ ಸಿದ್ದರಾಮಯ್ಯ ಕೇಳಿರುವ ಪ್ರಶ್ನೆಗೆ ಬಿಜೆಪಿ ನಾಯಕರು ಯಾವ ರೀತಿ ಉತ್ತರ ನೀಡುತ್ತಾರೆ? ಮುಂದೆ ಈ ವಿಚಾರ ಎಲ್ಲಿಗೆ ಬಂದು ನಿಲ್ಲಲಿದೆ? ಹಾಗೇ ರಾಜಕೀಯ ದೃಷ್ಟಿಕೋನದಲ್ಲಿ ಈ ಆರೋಪದಿಂದ ಏನೆಲ್ಲಾ ಬದಲಾವಣೆ ಆಗಬಹುದು? ಎಂಬ ಕುರಿತು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.












Click it and Unblock the Notifications