ಸಿಎಂ ಹೆಲಿಕಾಪ್ಟರ್ ಬಿಟ್ಟು ನೆಲದ ಮೇಲೆ ತಿರುಗಲಿ: ಬಿಎಸ್ ವೈ
ಯಾದಗಿರಿಯಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರಿಗೆ ಆಕಾಶದಲ್ಲಿ ಹಾರಾಡುವುದರಿಂದ ಬರ ಅಧ್ಯಯನ ಮಾಡಿದಂತಾಗುವುದಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಯಾದಗಿರಿ, ಮೇ 31: ಬರದ ಹಿನ್ನೆಲೆಯಲ್ಲಿ ರಾಜ್ಯದ ಜನರು ಅನುಭವಿಸುತ್ತಿರುವ ಬವಣೆಗಳನ್ನು
ಅರಿಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕಾಶದಲ್ಲಿ ಹೆಲಿಕಾಪ್ಟರ್ ನಲ್ಲಿ ಹಾರಾಡುವುದನ್ನು ಬಿಟ್ಟು ನೆಲದ ಮೇಲೆ ತಿರುಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ತಾಕೀತು ಮಾಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಸದ್ಯಕ್ಕೆ ಪ್ರವಾಸದಲ್ಲಿರುವ ಯಡಿಯೂರಪ್ಪ ಅವರು, ಯರಗೋಳ ಗ್ರಾಮದ
ಕೆರೆಯನ್ನು ವೀಕ್ಷಿಸಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜ್ಯದ
ಬರದ ಬಗ್ಗೆ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ. ಇದನ್ನು ತಿಳಿಯಬೇಕಾದರೆ ಅವರು
ಹೆಲಿಕಾಪ್ಟರ್ ನಲ್ಲಿ ಹಾರಾಡುವುದನ್ನು ಬಿಟ್ಟು ನೆಲದ ಮೇಲೆ ತಿರುಗಬೇಕು'' ಎಂದರು.

ಆನಂತರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ''ನಾನು ಬರ ಪ್ರವಾಸ
ಮಾಡಿದರೆ ನನ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸುತ್ತಾರೆ. ಆದರೆ, ಅವರಿಗಾದರೂ
ಬರ ಪ್ರವಾಸ ಮಾಡಬೇಕು ಎಂದೆನಿಸಿಲ್ಲ'' ಎಂದು ಟೀಕಿಸಿದರು.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಬರ ಅಧ್ಯಯನ ಪ್ರವಾಸ ಆರಂಭಿಸಿದ್ದಾರೆ. ಇದರ ಅಂಗವಾಗಿ ಯಾದಗಿರಿಗೆ ಭೇಟಿ ನೀಡಿದ್ದರು. ಆ ಭಾಗದ ನಾನಾ ಕಡೆ ಸುತ್ತಾಡಿದ ಯಡಿಯೂರಪ್ಪ ಅವರು, ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು.












Click it and Unblock the Notifications