ಅಗ್ನಿಪರೀಕ್ಷೆಗೆ ಸಜ್ಜು, ವಿಶ್ವಾಸಮತ ಯಾಚಿಸಲು ಮುಂದಾದ ಎಚ್ಡಿಕೆ
ಬೆಂಗಳೂರು, ಜುಲೈ 12: ಕಾಂಗ್ರೆಸ್ -ಜೆಡಿಎಸ್ ಶಾಸಕರ ಸರಣಿ ರಾಜೀನಾಮೆ, ಸಚಿವ ಸಂಪುಟದ ಸದಸ್ಯರ ರಾಜೀನಾಮೆ ಬಳಿಕ ಮೈತ್ರಿ ಸರ್ಕಾರ ಅಗ್ನಿಪರೀಕ್ಷೆಗೆ ಸಜ್ಜಾಗಿದೆ.
ತಾಂತ್ರಿಕವಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಸರ್ಕಾರದ ಅಳಿವು, ಉಳಿವು ಜುಲೈ 12ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನ ವೇದಿಕೆ ಒದಗಿಸಿದೆ.
ಈ ನಡುವೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ವಿಪ್ ಜಾರಿಯಾಗಿದೆ. ವಿತ್ತೀಯ ವಿಧೇಯಕಗಳು, ವಿಧೇಯಕಗಳು, ಶಾಸನಗಳು ಹಾಗೂ ಇತರೆ ಕಾರ್ಯ ಕಲಾಪಗಳಲ್ಲಿ ಭಾಗವಹಿಸಿ ಸರ್ಕಾರದ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ ಈ ಮೂಲಕ ವಿಪ್ ನೀಡಲಾಗಿದೆ.
ವಿಪ್ ಜಾರಿಗೊಳಿಸಿದ ವೇಳೆ ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಮತ ಹಾಕುವಂತಿಲ್ಲ. ಸದನಕ್ಕೆ ಗೈರು ಹಾಜರಾಗುವಂತಿಲ್ಲ. ಆದ್ದರಿಂದ, ರಾಜೀನಾಮೆ ನೀಡಿರುವ ಶಾಸಕರು ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಸರ್ಕಾರ ಉರುಳಿದರೂ ಶಾಸಕರಿಗೆ ತಕ್ಕ ಪಾಠ ಕಲಿಸಲು ಉಭಯ ಪಕ್ಷಗಳು ಮುಂದಾಗಿವೆ.

ಸುಪ್ರೀಂನಿಂದ ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶ
ಶಾಸಕರ ರಾಜೀನಾಮೆ ಅಂಗೀಕಾರ, ಅನರ್ಹತೆಗೆ ಸಂಬಂಧಿಸಿದಂತೆ ಸ್ಪೀಕರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ಸಿಜೆಐ ಇದ್ದ ತ್ರಿಸದಸ್ಯ ನ್ಯಾಯಪೀಠವು ಮಂಗಳವಾರದ ನಂತರ ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶ ನೀಡಿದೆ.ಅನರ್ಹತೆ ಅರ್ಜಿಗಳ ವಿಚಾರಣೆಯನ್ನು ಸದ್ಯಕ್ಕೆ ಮಾಡುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಕರ್ನಾಟಕದ 16 ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆ ಇನ್ನೂ ಬಾಕಿಯಿರುವುದರಿಂದ ರಾಜಕೀಯ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಸದ್ಯಕ್ಕೆ ಸಾಧ್ಯವಿಲ್ಲ ಎನ್ನಬಹುದು.

ವಿಶ್ವಾಸಮತ ಯಾಚನೆ ಮಾಡಲು ಮುಂದಾದ ಎಚ್ಡಿಕೆ
ಸಭಾಧ್ಯಕ್ಷರೆ, ರಾಜ್ಯದಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡುವ ಮೂಲಕ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ, ಈ ಸ್ಥಾನವನ್ನು ದುರುಪಯೋಗ ಪಡಿಸಿಕೊಳ್ಳಲು ನನಗಿಷ್ಟವಿಲ್ಲ. ಸದನದ ಬೆಂಬಲ ಇದ್ದಾಗ ಮಾತ್ರ ನಾನು ಈ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯ. ನಾನು ಸ್ವಪ್ರೇರಣೆಯಿಂದ ಬಹುಮತ ಸಾಬೀತುಪಡಿಸಲು ಮುಂದಾಗಿದ್ದೇನೆ. ಹೀಗಾಗಿ, ಸಮಯವನ್ನು ನಿಗದಿಪಡಿಸುವಂತೆ ಕೋರಿದ್ದೇನೆ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.

ವಿಪ್ ಜಾರಿಯಾದರೂ ಸದನಕ್ಕೆ ಗೈರಾಗಿರುವ ರೆಬೆಲ್ಸ್
ರಾಜೀನಾಮೆಗಳು ಅಂಗೀಕಾರವಾಗಿಲ್ಲದ ಕಾರಣ ಕಾಂಗ್ರೆಸ್ -ಜೆಡಿಎಸ್ ಪಕ್ಷಗಳು ತಮ್ಮ ರೆಬೆಲ್ ಶಾಸಕರಿಗೆ ವಿಪ್ ಜಾರಿಗೊಳಿಸಿ ಸದನಕ್ಕೆ ಹಾಜರಾಗಿ, ಇಲ್ಲದಿದ್ದರೆ ಅರ್ನಹತೆ ಎದುರಿಸಿ ಎಂದು ಸೂಚಿಸಿವೆ.
ಇದಲ್ಲದೆ, ಜೆಡಿಎಸ್ ಪರವಾಗಿ ವಕೀಲ ರಂಗನಾಥ್ ಅವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಕಾಂಗ್ರೆಸ್ ಸಹ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್‌ಗೆ ದೂರು ನೀಡಿದೆ. ಆದರೆ, ಯಾವುದೇ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಸ್ಪೀಕರ್ ಇನ್ನೂ ಯಾವುದೇ ತೀರ್ಮಾನಗಳನ್ನು ಕೈಗೊಂಡಿಲ್ಲ. ಮಂಗಳವಾರದ ತನಕ ತೀರ್ಮಾನ ಕೈಗೊಳ್ಳುವ ಸಾಧ್ಯತೆಯೂ ಇಲ್ಲ

ರೆಬೆಲ್ ಶಾಸಕರನ್ನು ಅನರ್ಹಗೊಳಿಸಿದರೆ
ಒಂದು ವೇಳೆ ವಿಪ್ ಉಲ್ಲಂಘಿಸಿದ್ದಕ್ಕೆ ರೆಬೆಲ್ ಶಾಸಕರನ್ನು ಅನರ್ಹಗೊಳಿಸಿದರೆ, ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕಷ್ಟವಾಗಲಿದೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಅಗತ್ಯ ಸಂಖ್ಯಾಬಲ ಸಿಗುವುದಿಲ್ಲ, ಅನಿವಾರ್ಯವಾಗಿ ಅನರ್ಹಗೊಂಡ ಶಾಸಕರು, ಅನರ್ಹತೆ ಆದೇಶವನ್ನು ಪ್ರಶ್ನಿಸಿ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಬಹುದು. ಕೋರ್ಟ್ ಮೂಲಕ ಪರಿಹಾರ ಕಂಡುಕೊಳ್ಳುವ ತನಕ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಮಂತ್ರಿಗಿರಿಯೂ ಸಿಗುವುದಿಲ್ಲ.












Click it and Unblock the Notifications