CM ಡಿ.ಕೆ ಶಿವಕುಮಾರ್‌ಗೆ ಸ್ವಪಕ್ಷದ ಶಾಸಕ ಎಚ್.ಕೆ ಪಾಟೀಲ ಹೇಳಿಕೆಯಿಂದ ಮುಜುಗರ, ಆಡಳಿತ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ಯಾಕೆ
ಕರಾವಳಿ ಭಾಗದಿಂದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಬಲ ಹಾಗೂ ಬೆಂಬಲ ಸಿಗಲಿದೆ ಎನ್ನುವ ವಿಚಾರವು ಚರ್ಚೆ ಆಗುತ್ತಿರುವಾಗಲೇ ಉತ್ತರ ಕರ್ನಾಟಕ ಭಾಗದಿಂದ ಶಾಕ್ ಎದುರಾಗಿದೆ. ಸ್ವಪಕ್ಷದ ಶಾಸಕರು ನೀಡಿರುವ ಹೇಳಿಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಜುಗರವನ್ನು ತಂದೊಡ್ಡಿದೆ. ಅಲ್ಲದೆ ಇದೇ ವಿಷಯವನ್ನು ವಿರೋಧ ಪಕ್ಷಗಳು ಅಸ್ತ್ರವನ್ನಾಗಿಸಿಕೊಂಡಿವೆ. ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಶಾಸಕ ಎಚ್.ಕೆ. ಪಾಟೀಲ ಅವರು ಹೇಳಿದ್ದಾರೆ.
ಗದಗ ತಾಲ್ಲೂಕನ್ನು ಅಕ್ಟೋಬರ್ 10ರ ಒಳಗಾಗಿ ಬರ ಪೀಡಿತವೆಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದೇನೆ. ಅಲ್ಲದೆ ರೈತರೊಂದಿಗೆ ಹೋರಾಟ ಮಾಡುತ್ತೇನೆ ಎಂದೂ ಶಾಸಕ ಎಚ್.ಕೆ. ಪಾಟೀಲ ಅವರು ಎಚ್ಚರಿಸಿದ್ದಾರೆ. ತಾಲ್ಲೂಕಿನ ಮುಳಗುಂದದಲ್ಲಿ ರೈತರು ಭಾನುವಾರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಎಚ್.ಕೆ ಪಾಟೀಲ ಅವರು ಈ ಮಾತು ಹೇಳಿದ್ದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಚೆಗೆ ಜಿಲ್ಲೆಗೆ ಭೇಟಿ ನೀಡಿ ಬೆಳೆಹಾನಿ ಪರಿಶೀಲನೆ ಮಾಡಿದ್ದಾರೆ. ಶೇ 49ರಷ್ಟು ಮಳೆ ಕೊರತೆ ಇದ್ದರೂ ಸಹ ಈ ಭಾಗವನ್ನು ಬರ ಪೀಡಿತ ಎಂದು ಯಾಕೆ ಘೋಷಣೆ ಮಾಡಿಲ್ಲ. ಇದಕ್ಕೆ ಅಡ್ಡಿಪಡಿಸುತ್ತಿರುವವರು ಯಾರು, ಈ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ವಪಕ್ಷ, ಆಡಳಿತ ಪಕ್ಷದ ವಿರುದ್ಧವೇ ಎಚ್.ಕೆ ಪಾಟೀಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಉತ್ತರ ಕರ್ನಾಟಕ ಭಾಗದ ಎಲ್ಲ ತಾಲ್ಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸಬೇಕು. ಅಲ್ಲದೆ ಬೆಳೆ ಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದೂ ಶಾಸಕ, ಮಾಜಿ ಸಚಿವ ಎಚ್.ಕೆ ಪಾಟೀಲ ಅವರು ಆಗ್ರಹಿಸಿದ್ದಾರೆ. ಈ ವಿಚಾರವು ಇದೀಗ ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
CM: "ಸ್ವಪಕ್ಷದ ಶಾಸಕರೇ ಛೀ... ಥೂ... ಅಂತ ಉಗಿಯುತ್ತಿದ್ದಾರೆ!'
ಸ್ವಪಕ್ಷದ ಶಾಸಕರೇ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಛೀ... ಥೂ... ಅಂತ ಉಗಿಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ. ಅನ್ನದಾತರನ್ನು ಭಿಕ್ಷುಕರಂತೆ ಕಾಣುತ್ತಿರುವ ಈ ಲಜ್ಜೆಗೆಟ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಸ್ವಪಕ್ಷದ ಹಿರಿಯ ಶಾಸಕರೇ ಕನ್ನಡಿ ಹಿಡಿದಿದ್ದಾರೆ.
ಗದಗ ತಾಲೂಕಿನಲ್ಲಿ ಶೇಕಡಾ 49%ರಷ್ಟು ತೀವ್ರ ಮಳೆ ಕೊರತೆಯಾಗಿದ್ದರೂ, ಬೆಳೆ ಹಾನಿಯಾಗಿ ರೈತರು ಕಣ್ಣೀರು ಹಾಕುತ್ತಿದ್ದರೂ, ಈ ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸದೆ ಕಣ್ಣಿಗೆ ಮಣ್ಣೆರಚುತ್ತಿದೆ. ಸ್ವತಃ ಕಾಂಗ್ರೆಸ್‌ನ ಹಿರಿಯ ಶಾಸಕರಾದ ಎಚ್.ಕೆ ಪಾಟೀಲ ಅವರೇ "ಅಕ್ಟೋಬರ್ 10ರೊಳಗೆ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ತೊಡೆ ತಟ್ಟಿ ಸಿಡಿದೆದ್ದಿದ್ದಾರೆ ಎಂದರೆ ಈ ಲಜ್ಜೆಗೇಡಿ ಸರ್ಕಾರ ಎಷ್ಟು ದಪ್ಪ ಚರ್ಮದ್ದು ಅಂತ ನೀವೇ ಊಹಿಸಿಕೊಳ್ಳಿ.
ಹೆಲಿಕಾಪ್ಟರ್ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಗದಗಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಿದ ಮೇಲೆಯೂ ಬರ ಘೋಷಣೆ ಮಾಡಲು ನಿಮಗೇನು ಅಡ್ಡಿ? ರೈತರಿಗೆ ಪರಿಹಾರ ಕೊಡಲು ನಿಮ್ಮ ಖಜಾನೆಯಲ್ಲಿ ಹಣವಿಲ್ಲವೇ ಅಥವಾ ಉತ್ತರ ಕರ್ನಾಟಕದ ರೈತರ ಎಂದರೆ ನಿಮಗಷ್ಟು ನಿರ್ಲಕ್ಷ್ಯವೇ?
CM: ಎಕರೆಗೆ ₹50,000 ಪರಿಹಾರ ನೀಡಬೇಕು
ಕೂಡಲೇ ಬರ ಘೋಷಣೆ ಮಾಡಿ: ಗದಗ ಮಾತ್ರವಲ್ಲದೆ, ಕುಂಟು ನೆಪಹೇಳಿ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಡಲಾಗಿರುವ ಉಳಿದ ಎಲ್ಲಾ ಬರಪೀಡಿತ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಪರಿಹಾರ ಬಿಡುಗಡೆ ಮಾಡಿ: ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೂ ತಕ್ಷಣವೇ ಎಕರೆಗೆ ₹50,000 ಪರಿಹಾರ ನೀಡಬೇಕು.
ಸಿಎಂ ಡಿ.ಕೆ ಶಿವಕುಮಾರ್ ಅವರೇ ಉತ್ತರ ಕೊಡಿ: ನಿಮ್ಮದೇ ಶಾಸಕರು ರಾಜೀನಾಮೆ ಬೆದರಿಕೆ ಹಾಕುವ ಸ್ಥಿತಿ ತಂದಿಟ್ಟಿರುವ ನೀವು, ಕೇವಲ ಶೋಕಿ ರಾಜಕಾರಣ ಮಾಡುವುದನ್ನು ಬಿಟ್ಟು ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ರೈತರ ಹೊಟ್ಟೆಗೆ ಪದೇ ಪದೇ ಹೊಡೆಯುತ್ತಿರುವ ಈ ನಿರ್ದಯಿ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದೂ ಹೇಳಿದ್ದಾರೆ.


Click it and Unblock the Notifications
