'ಉತ್ತಮ ಆಡಳಿತ' ಕೊಡಲು ಪ್ರಧಾನಿ ಮೋದಿ ಅನುಸರಿಸಿದ ಮುಖ್ಯಮಂತ್ರಿ ಬೊಮ್ಮಾಯಿ!
ಬೆಂಗಳೂರು, ಅ. 05: ರಾಜ್ಯದ ಆಡಳಿತದಲ್ಲಿ ಸಮಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಉತ್ತಮ ಆಡಳಿತ ಕೊಡಲು ಪ್ರಧಾನಿ ಮೋದಿ ಅವರನ್ನು ಅನುಸರಿಸಲು ಅವರು ಮುಂದಾಗಿದ್ದಾರೆ. ಪ್ರತಿ ಇಲಾಖೆಯ ಸಮಗ್ರ ಮಾಹಿತಿಯನ್ನು ಅಕ್ಷರಶಃ ಬೆರಳ ತುದಿಯಲ್ಲಿ ಸಿಗುವಂತೆ ಕಾರ್ಯಕ್ರಮ ರೂಪಿಸಿದ್ದಾರೆ. ಮೊದಲ ದಿನವೇ ಆರು ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಮಾಡಿ ಮುಗಿಸಿದ್ದಾರೆ. ಆ ಮೂಲಕ ಜನರಿಗೆ 'ಇದು ನಮ್ಮದೇ ಸರ್ಕಾರ' ಎಂಬ ಭಾವನ ಮೂಡಿಸಲು ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ.
ಆಡಳಿತದ ವಿಚಾರದಲ್ಲಿ ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ಹೊರತಾಗಿಯೂ ಹೊಸದನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಅದೇ ಮಾದರಿಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಳ್ಳಲು ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ. ಪ್ರಧಾನಿ ಕಚೇರಿ ಮಾದರಿಯಲ್ಲಿ ಮುಖ್ಯಮಂತ್ರಿಗೆ ಡಿಜಿಟಲ್ ವೇದಿಕೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಮಾಹಿತಿ ನೀಡುವ ಸಿಎಂ ಡ್ಯಾಷ್ ಬೋರ್ಡ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ. ಇದು ಉತ್ತಮ ಆಡಳಿತ ಕೊಡಲು ಹೇಗೆ ಸಹಾಯಕವಾಗುತ್ತದೆ? ಮುಂದಿದೆ ಸಂಪೂರ್ಣ ಮಾಹಿತಿ.

ಪ್ರಧಾನಿ ಮೋದಿ ಅನುಸರಿಸಿದ ಸಿಎಂ ಬೊಮ್ಮಾಯಿ!
ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಪಿಎಂ ಡ್ಯಾಷ್ ಬೋರ್ಡ್ ಮಾದರಿಯಲ್ಲಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಗತಿಯಲ್ಲಿ ಇರುವ ಯೋಜನೆಗಳ ಸ್ಥಿತಿಗತಿ ಕುರಿತು ಸಿಎಂ ಡ್ಯಾಶ್ ಬೋರ್ಡ್ ನೇರವಾಗಿ ಮುಖ್ಯಮಂತ್ರಿಗಳಿಗೆ ಸಮಗ್ರ ಮಾಹಿತಿ ನೀಡಲಿದೆ.
ಸಿಎಂ ಡ್ಯಾಷ್ ಬೋರ್ಡ್‌ಗೆ ಚಾಲನೆ ಕೊಟ್ಟ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ವಿವಿಧ ಇಲಾಖೆಗಳ ಪ್ರಮುಖ ಯೋಜನೆಗಳ ಕುರಿತು ದಿನ ದಿನದ ಮಾಹಿತಿಯನ್ನು ಡ್ಯಾಶ್ ಬೋರ್ಡ್‌ನಲ್ಲಿ ನಿಖರವಾಗಿ ದಾಖಲಿಸಿ ಎಂದು ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಮ್ಮ ಸರ್ಕಾರದ ಯಾವುದೇ ಯೋಜನೆ ಮತ್ತು ಅವುಗಳ ಸ್ಥಿತಿಯನ್ನು ಆನ್‌ಲೈನ್ ಮೂಲಕ ತಕ್ಷಣ ಪಡೆಯಲು ಸಿಎಂ ಡ್ಯಾಶ್ ಬೋರ್ಡ್ ಸಹಾಯ ಮಾಡುತ್ತದೆ. ಸಿಎಂ ಡ್ಯಾಷ್ ಬೋರ್ಡ್‌ಗೆ ಚಾಲನೆ ಕೊಡುತ್ತಲೇ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಮಾಡಿದ್ದಾರೆ.

ಆರಕ್ಕೂ ಹೆಚ್ಚು ಇಲಾಖೆಗಳ ಪ್ರಗತಿ ಪರಿಶೀಲನೆ!
ಮುಖ್ಯಮಂತ್ರಿ ಡ್ಯಾಷ್ ಬೋರ್ಡ್‌ಗೆ ಮಂಗಳವಾರ ಚಾಲನೆ ನೀಡಿದ ಬಸವರಾಜ ಬೊಮ್ಮಾಯಿ ಅವರು ಪ್ರಮುಖವಾಗಿ ಆರೇಳು ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಬೆರಳ ತುದಿಯಲ್ಲಿ ಮಾಹಿತಿ ಪಡೆಯುವ ಮೂಲಕ ಮಾಡಿದ್ದಾರೆ. ಕಂದಾಯ, ಬಿಬಿಎಂಪಿ, ಇಂಧನ, ಶಿಕ್ಷಣ, ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸ್ವಲ್ಪವೇ ಸಮಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ನಡೆಸಿದರು. ಆ ಮೂಲಕ ಕೇಂದ್ರದ ಉತ್ತಮ ಆಡಳಿತ (good governance)ದ ಮಾದರಿಯನ್ನು ರಾಜ್ಯದಲ್ಲಿಯೂ ಅಳವಡಿಸಿಕೊಂಡಂತಾಗಿದೆ.

ಸಿಎಂ ಡ್ಯಾಷ್ ಬೋರ್ಡ್ ಹೇಗೆ ಕೆಲಸ ಮಾಡುತ್ತದೆ?
ವಿವಿಧ ಇಲಾಖೆಗಳ ಪ್ರಮುಖ ಕಾರ್ಯಕ್ರಮಗಳ ಕುರಿತು ಆಯಾ ದಿನ ದಿನದ ಮಾಹಿತಿಯನ್ನು ಡ್ಯಾಷ್ ಬೋರ್ಡಿನಲ್ಲಿ ದಾಖಲಿಸುವಂತೆ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಈ ಮಾಹಿತಿ ದಾಖಲಿಸುವಲ್ಲಿ ಸ್ಪಷ್ಟತೆ, ನಿಖರತೆ ಇರಬೇಕು. ಯಾವುದೇ ಗೊಂದಲಕ್ಕೆಡೆಮಾಡಬಾರದು ಎಂದು ಸೂಚಿಸಿದ್ದಾರೆ. ರಾಜ್ಯ ಸರ್ಕಾರದ ನೋಡಲ್ ಅಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರು ಈ ಮಾಹಿತಿಯ ಕುರಿತು ವಿಶೇಷ ಆಸಕ್ತಿ ವಹಿಸಬೇಕು ಎಂದು ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಪ್ರತಿ ದಿನ ಯಾವ ಇಲಾಖೆಯಲ್ಲಿ ಏನಾಗುತ್ತದೆಯೊ ಅದನ್ನು ಡ್ಯಾಷ್ ಬೋರ್ಡ್‌ನಲ್ಲಿ ದಾಖಲಿಸಬೇಕು. ಅದು ಯಾವಗ ಬೇಕಾದರೂ ಮುಖ್ಯಮಂತ್ರಿಗಳಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಆ ಮೂಲಕ ಎಲ್ಲ ಇಲಾಖೆಗಳ ಸಮಗ್ರ ಅಭಿವೃದ್ಧಿಯೂ ಸಮರ್ಪಕವಾಗಿ ಆಗುತ್ತದೆ ಎಂಬುದು ಸರ್ಕಾರದ ನಿಲುವಾಗಿದೆ.

ಈ ಸರ್ಕಾರ ನಮ್ಮದು ಎಂಬ ಭಾವನೆ!
ಕಾರ್ಯಕ್ರಮ ರೂಪಿಸುವಷ್ಟೇ ಪ್ರಾಮುಖ್ಯತೆಯನ್ನು ಅನುಷ್ಠಾನಕ್ಕೆ ಸಹ ನೀಡಬೇಕು. ಹಿರಿಯ ಅಧಿಕಾರಿಗಳು ಆಸಕ್ತಿ ವಹಿಸದಿದ್ದರೆ ತಳ ಹಂತದ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಆದ್ದರಿಂದ ಇಲಾಖಾ ಮುಖ್ಯಸ್ಥರು ಕಾರ್ಯಕ್ರಮದ ಫಲಾನುಭವಿಗೆ ಸೌಲಭ್ಯ ತಲುಪಿಸುವ ವರೆಗೂ ಖಾತರಿಪಡಿಸಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದ್ದಾರೆ.
ಯೋಜನೆಗಳ ಪರಿಣಾಮಕಾರಿ ಅನುಷ್ಠಾನವಾದಾಗ ಜನರಿಗೆ ಈ ವ್ಯವಸ್ಥೆ ನಮ್ಮದು, ನಮಗಾಗಿ ಸ್ಪಂದಿಸುವವರು ಇದ್ದಾರೆ ಎಂಬ ಭಾವನೆ ಬರುವುದು. ಈ ಭಾವ ಮೂಡಿಸಲು ನಾವು ಶ್ರಮಿಸಬೇಕು. ಈ ಡ್ಯಾಷ್ ಬೋರ್ಡ್ ನಿಮ್ಮ ಇಲಾಖೆಯ ಕಾರ್ಯನಿರ್ವಹಣೆ ಕುರಿತು ನಿಮಗೂ ಕನ್ನಡಿ ಹಿಡಿಯುತ್ತದೆ. ಎಲ್ಲರೂ ಜೊತೆಯಾಗಿ ನಮ್ಮ ಜವಾಬ್ದಾರಿ ನಿರ್ವಹಿಸೋಣ. ಆಯವ್ಯಯದಲ್ಲಿ ನಿಗದಿ ಪಡಿಸಿದ ಗುರಿಯನ್ನು ಸಕಾಲದಲ್ಲಿ ತಲುಪುವ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ದಸರಾ ನಂತರ ಮತ್ತೊಂದು ಸಭೆ ನಡೆಸುವುದಾಗಿ ತಿಳಿಸಿದ್ದಾರೆ.












Click it and Unblock the Notifications