ಸಂಪುಟ ವಿಸ್ತರಣೆ, ಚುನಾವಣೆಗಾಗಿ ಸಿಎಂ ಬೊಮ್ಮಾಯಿ ದೆಹಲಿ ಭೇಟಿ, ಸಂಜೆ ಕೋವಿಡ್ ಮಾರ್ಗಸೂಚಿ ಪ್ರಕಟ
ಬೆಳಗಾವಿ, ಡಿಸೆಂಬರ್ 26: ವಿಧಾನಸಭೆ ಚುನಾವಣೆ ಹಾಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಇನ್ನಿತರ ವಿಚಾರಗಳನ್ನು ಚರ್ಚಿಸಲು ಇಂದಿನ ಸಭೆಯಲ್ಲಿ ವರಿಷ್ಠರ ಜೊತೆ ಚರ್ಚಿಸಲು ಇಂದು ಮಧ್ಯಾಹ್ನ ದೆಹಲಿ ತೆರಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಹಿಂದಿನ ಸಭೆಯಲ್ಲಿ ಕೆಲವು ವಿಚಾರಗಳ ಚರ್ಚೆ ಅಪೂರ್ಣವಾಗಿದೆ. ಇಂದಿನ ಸಭೆಯಲ್ಲಿ ಅವೆಲ್ಲ ವಿಚಾರಗಳ ಬಗ್ಗೆ ಹಾಗೂ ಕರ್ನಾಟಕ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲಿದ್ದೇನೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿವಿಧ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಾಕಿ ಉಳಿದ ಸಚಿವ ಸ್ಥಾನಗಳ ಭರ್ತಿ ಅಥವಾ ಪೂರ್ತಿ ಸಂಪುಟ ವಿಸ್ತರಣೆ ಆಗಲಿದಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಂದಿನ ಸಭೆಯಲ್ಲಿ ಚರ್ಚೆ ಬಳಿಕವೇ ಎಲ್ಲದ್ದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದರು. ಮುಖ್ಯವಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಆಯಾ ಇಲಾಖೆ ಕೇಂದ್ರ ಸಚಿವರನ್ನು ಸಂಪರ್ಕಿಸಲಾಗುವುದು. ಸಾಧ್ಯವಾದರೆ ನೀರಾವರಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ನೀರಾವರಿ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಲಿದ್ದೇನೆ ಎಂದರು.

ಕೋವಿಡ್ ವ್ಯಾಪಿಸುತ್ತಿರುವುದರ ವಿರುದ್ಧ ಕರ್ನಾಟಕದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಕೊರೊನಾ ಬೂಸ್ಟರ್ ಡೋಸ್ ಕೊಡುವ ಕೆಲಸವಾಗಬೇಕು. ಕೋವಿಡ್ ತಪಾಸಣೆಯ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಐಎಲ್‌ಐ ಮತ್ತು ಸಾರಿ ರೋಗಿಗಳ ಪರೀಕ್ಷೆಗಳನ್ನೂ ಹೆಚ್ಚಿಸಬೇಕು. ಯಾವ ಯಾವ ಸ್ಥಳದಲ್ಲಿ ಮಾಸ್ಕ್ ಕಡ್ಡಾಯಗೊಳಿಸಬೇಕು ಎಂಬ ಇತ್ಯಾದಿ ನಿಯಮಗಳ ಜಾರಿ ಕುರಿತು ಇಂದು ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ಸಚಿವರ ಅಧ್ಯಕ್ಷತೆಯಲ್ಲಿನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ ಈ ಬಾರಿ ಕೋವಿಡ್ ನಿಯಮಗಳು ಜನಸಾಮಾನ್ಯರ ಬದುಕಿಗೆ, ವ್ಯಾಪಾರ ವಹೀವಾಟು ಸೇರಿದಂತೆ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರದಂತೆ ಹೊರಡಿಸಲಾಗುವುದು. ಸರ್ಕಾರ ಈಗಾಗಲೇ ಮುಂಜಾಗೃತ ಕ್ರಮವಾಗಿ ಒಂದಷ್ಟು ಮಾರ್ಗಸೂಚಿ ಹೊರಡಿಸಿದೆ. ಇದೀಗ ಮತ್ತೆ ಸೋಂಕು ನಿಯಂತ್ರಣ ದೃಷ್ಟಿಯಿಂದ ಚರ್ಚಿಸಿ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ವಿವರಿಸಿದರು.












Click it and Unblock the Notifications