Karnataka Elections 2023: ಸಿಎಂ ಬೊಮ್ಮಾಯಿ ವರುಣಾ ಪ್ರವಾಸ ರದ್ದು: ಕಾರಣವೇನಿರಬಹುದು?
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಹೈ ವೋಲ್ಟೇಜ್ ಅಖಾಡ ವರುಣಾದಲ್ಲಿ ಈಗಾಗಲೇ ಬಿಜೆಪಿ ಮತಬೇಟೆ ಶುರುಮಾಡಿದೆ. ಈ ನಡುವೆ ಇಂದು ವರುಣಾ ಕ್ಷೇತ್ರದಲ್ಲಿ ನಡೆಯಬೇಕಿದ್ದು ಬಸವರಾಜ್ ಬೊಮ್ಮಾಯಿ ಅವರ ಪ್ರವಾಸ ದಿಢೀರ್ ರದ್ದಾಗಿದೆ.
ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ಅವರನ್ನ ವರುಣಾದಲ್ಲಿ ಸ್ಪರ್ಧಿಸಲು ಬಿಜೆಪಿ ಕಣಕ್ಕೆ ಇಳಿಸಿದೆ. ಹೀಗಾಗಿ ವಿ ಸೋಮಣ್ಣ ಪರ ಪ್ರಚಾರ ಮಾಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ವರುಣಾಕ್ಕೆ ಭೇಟಿ ನೀಡಬೇಕಿತ್ತು. ಆದರೆ ಈ ಪ್ರವಾಸ ರದ್ದಾಗಿದೆ. ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವರುಣಾದಲ್ಲಿ ಮತಭೇಟೆಯನ್ನು ನಡೆಸಲಿದ್ದಾರೆ. ಹೀಗಾಗಿ ಬಸವರಾಜ್ ಬೊಮ್ಮಾಯಿ ವರುಣಾ ಪ್ರವಾಸವನ್ನು ರದ್ದು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ವರುಣಾದಲ್ಲಿ ಬೊಮ್ಮಾಯಿ ರೋಡ್ ಶೋ, ಸಾರ್ವಜನಿಕ ಸಭೆ ನಿಯೋಜಿಸಲಾಗಿತ್ತು. ವರುಣಾ ಬಿಜೆಪಿ ಅಭ್ಯರ್ಥಿ ಸಚಿವ ವಿ. ಸೋಮಣ್ಣ ಪರ ಭರ್ಜರಿ ಪ್ರಚಾರ ನಡೆಸಲಿದ್ದರು. ಆದರೆ ವರುಣಾದಲ್ಲಿ ಮಂಗಳೂರು ನಡೆಯುವ ಅಮಿತ್ ಶಾ ರೋಡ್ ಶೋ ವೇಳೆ ಬಸವರಾಜ್ ಬೊಮ್ಮಾಯಿ ಕೂಡ ಅವರೊಂದಿಗೆ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಇಂದು ವರುಣಾ ಸಿಎಂ ಪ್ರಚಾರ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಹೈ ವೋಲ್ಟೇಜ್ ವರುಣಾ ಕ್ಷೇತ್ರ
ಸಿದ್ದರಾಮಯ್ಯ VS ಸೋಮಣ್ಣ ಕಾದಾಟದಲ್ಲಿ ವರುಣಾ ಅಖಾಡ ರಂಗೇರಿದೆ. ಬಿಜೆಪಿ ನಾಯಕರ ದಂಡೇ ದಿಲ್ಲಿಯಿಂದ ಮೈಸೂರಿಗೆ ದೌಡಾಯಿಸಿ ಸಿದ್ದರಾಮಯ್ಯ ವಿರುದ್ಧ ಪ್ರಚಾರ ಅಖಾಡಕ್ಕೆ ಇಳಿದಿದ್ದರೆ, ಇತ್ತ ಸಿದ್ದರಾಮಯ್ಯ ಪರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಖಾಡ ಪ್ರವೇಶಿಸುತ್ತಿದ್ದಾರೆ. ಚಿತ್ರರಂಗದ ತಾರೆಯರ ದಂಡೇ 'ಟಗರು' ಪರ ಕ್ಯಾಂಪೇನ್ ನಡೆಸೋದು ಪಕ್ಕಾ ಆಗಿದೆ.
ಇನ್ನೂ ವರುಣಾ ಪ್ರಚಾರದ ವೇಳೆ ಸಿದ್ದರಾಮಯ್ಯ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಾಲು, ಜಿಎಸ್‌ಟಿ ಪರಿಹಾರ, ವಿಶೇಷ ಅನುದಾನ, ಪ್ರವಾಹ ಪರಿಹಾರ ನಿಧಿ, ಅಭಿವೃದ್ಧಿ ಯೋಜನೆಗಳಿಗೆ ಬರುವ ಅನುದಾನ ಈ ಎಲ್ಲವೂ ಬಿಡಿಗಾಸು ಬರುತ್ತಿದ್ದರೂ, ಅದರ ವಿರುದ್ಧ ಎಂದೂ ತುಟಿಬಿಚ್ಚದೆ, ಮತನೀಡಿ ಗೆಲ್ಲಿಸಿದ ಕನ್ನಡಿಗರಿಗೆ ದ್ರೋಹವೆಸಗುತ್ತಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆದು, ನಮ್ಮ ಪಾಲಿನ ಅನುದಾನವನ್ನು ಹಕ್ಕಿನಿಂದ ಕೇಳಿ ಪಡೆಯುವ ನಾಡಿನ ಧ್ವನಿಯಾದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಮತ ನೀಡಿ. ರಾಜ್ಯದ ಹಿತಾಸಕ್ತಿಗೆ ನಾವು ಬದ್ಧರಿದ್ದೇವೆ ಎಂದು ಹೇಳುತ್ತಿದ್ದಾರೆ.
ಇನ್ನೂ ಮಳೆ ಹಾನಿಗಾಗಿ ರಾಜ್ಯ ಸರ್ಕಾರ ರೂ.35,000 ಕೋಟಿ ಪರಿಹಾರ ಕೇಳಿದ್ದರೂ ಡಬಲ್ ಎಂಜಿನ್ ಸರ್ಕಾರ ಕೇವಲ ರೂ.1,895 ಕೋಟಿ ನೀಡಿದೆ. ರೈತರ ಬೆಳೆಗಳ ಬೆಲೆ ಕುಸಿತ ತಡೆಯಲು ಬೆಂಬಲ ಬೆಲೆಯ ಮೂಲಕ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ನೀಡಲಾಗುತ್ತಿದ್ದ ಅನುದಾನವನ್ನು ರೂ.1,500 ಕೋಟಿ ಗಳಿಂದ ಒಂದು ಲಕ್ಷ ರೂಪಾಯಿಗಳಿಗೆ ಇಳಿಸಲಾಗಿದೆ. ಪಿಎಸ್‌ಐ ನೇಮಕದಲ್ಲಿ ಅಂದಾಜು ರೂ.300 ಕೋಟಿಗೂ ಮೀರಿ ಲಂಚದ ಅವ್ಯವಹಾರ ನಡೆದು ಉದ್ಯೋಗದ ಅವಕಾಶ ಕಳೆದುಕೊಂಡಿರುವ ಸುಮಾರು 54 ಸಾವಿರ ಯುವಜನರ ಮನದ ಮಾತಿಗೆ ನೀವು ಪ್ರತಿಕ್ರಿಯಿಸದೆ ಮೌನವಾಗಿರುವ ಮೋದಿ ಯಾವಾಗ ಉತ್ತರಿಸುತ್ತಾರೆ ಎಂದು ಟಗರು ಗುಡುಗಿದೆ.
ಜೊತೆಗೆ ಲಿಂಗಾಯತ ವಿರೋಧಿ, ನಲವತ್ತು ಪರ್ಸೆಂಟ್ ಸರ್ಕಾರ ಇಂತೆಲ್ಲಾ ಆರೋಪಗಳ ಮೂಲಕ ಸಿದ್ದರಾಮಯ್ಯ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.
ಇದಕ್ಕೆ ಠಕ್ಕರ್ ಕೊಡಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಬಾರಿ ವರುಣಾದಲ್ಲಿ ಗೆಲ್ಲುವ ಛಲ ತೊಟ್ಟಿರುವ ಬಿಜೆಪಿ ಕೇಂದ್ರ ನಾಯಕರ ಮೊರೆ ಹೋಗಿದೆ. ಹೀಗಾಗಿ ವರುಣಾ ರಾಜ್ಯ ಚುನಾವಣಾ ಕ್ಷೇತ್ರಗಳ ಪೈಕಿ ಹೈ ವೋಲ್ಟೇಜ್ ಕ್ಷೇತ್ರ ಎಮದೇ ಬಿಂಬಿತವಾಗಿದೆ. ಸದ್ಯ ರಾಜ್ಯದ ಚಿತ್ತ ವರುಣಾದತ್ತ ನೆಟ್ಟಿದ್ದು 'ಟಗರು' ವಿರುದ್ಧ 'ಅಣ್ಣ' ಗೆಲ್ತಾರಾ ಕಾದು ನೋಡಬೇಕಿದೆ.












Click it and Unblock the Notifications