ಚುನಾವಣೆ ಮುಗಿಯೋವರೆಗೆ ಕಾಂಗ್ರೆಸ್‌ನ ಗ್ಯಾರಂಟಿ, ಆಮೇಲೆ ಗಳಗಂಟಿ: ಬೊಮ್ಮಾಯಿ
ಬೆಂಗಳೂರು, ಏಪ್ರಿಲ್ 25: ರಾಜ್ಯದ ಬೆಳಗಾವಿ ಜಿಲ್ಲೆ ಅಭಿವೃದ್ಧಿ ಕಾರ್ಯಗಳ ಪರವಾದ ಜಿಲ್ಲೆ. ಇಲ್ಲಿ ಜಾತಿ ರಾಜಕಾರಣ, ಹಣದ ರಾಜಕಾರಣ ನಡೆಯುವುದಿಲ್ಲ. ಚುನಾವಣೆ ಮುಗಿಯುವವರೆಗೂ ಮಾತ್ರ ಕಾಂಗ್ರೆಸ್‌ನ ಗ್ಯಾರಂಟಿ, ಆಮೇಲೆ ಗಳಗಂಟಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಮಂಗಳವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ ಪರ ರೋಡ್ ಶೋ ನಡೆಸಿ ಮತಯಾಚಿಸಿ ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು. ಕಿತ್ತೂರುರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಈ ಗಂಡು ಮೆಟ್ಟಿದ ನಾಡು ಬೆಳಗಾವಿ ನೆಲದವರು. ಇಂತಹ ಜಿಲ್ಲೆಯ ನಾಗರಿಕರು ಅಭಿವೃದ್ಧಿ ಪರವಾಗಿದ್ದಾರೆ. ನಿಮ್ಮ ಗ್ಯಾರಂಟಿ ಕಾರ್ಡುಗಳು ನಡೆಯುವುದಿಲ್ಲ ಎಂದರು.

ರಮೇಶ್ ಜಾರಕಿಹೊಳಿ ಯಾವುದೇ ಅಧಿಕಾರದ ಆಸೆ ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ಅವರು ಗುರಿ ಇಟ್ಟರೆ ಗೆಲುವು ಖಚಿತ. ರಮೇಶ ಜಾರಕಿಹೊಳಿ ಜನರ ಪ್ರಿತಿ ವಿಶ್ವಾಸ ಗಳಿಸಿ ನಾಯಕರಾಗಿದ್ದಾರೆ. ಅವರು ಅಧಿಕಾರದ ನಾಯಕರಾಗಿಲ್ಲ.
ಅವರು ನಾಗೇಶ್ ಮನೊಳ್ಕರ್ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಗೋಕಾಕ್ ಕ್ಷೇತ್ರ ಬಿಟ್ಟು ಇಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರದ ಸಾಧನೆ ಜ್ಞಾಪಿಸಿದ ಸಿಎಂ ಬೊಮ್ಮಾಯಿ
ರಾಜ್ಯ ಬಿಜೆಪಿ ಸರ್ಕಾರ ಐದು ವರ್ಷದಲ್ಲಿ ಕೇವಲ ಮೂರು ವರ್ಷ ಅಧಿಕಾರ ನಡೆಸಿದೆ. ಒಂದು ವರ್ಷ ಸಮ್ಮಿಶ್ರ ಸರ್ಕಾರ ಒಂದು ವರ್ಷ ಕೋವಿಡ್ ನಲ್ಲಿ ಕಾಲ ಹರಣವಾಯಿತು. ಪ್ರವಾಹ ಬಂದಾಗ ನಾವು ಎರಡು ಪಟ್ಟು ಪರಿಹಾರ ನೀಡಿದ್ದೇವು. ಒಂದು ತಿಂಗಳಲ್ಲಿ ಎರಡೂವರೆ ಸಾವಿರ ಕೋಟಿ ರೂ. ಪರಿಹಾರ ನೀಡಿದ್ದೇವೆ. ಈ ಹಿಂದಿನ ನಾಲ್ಕು ವರ್ಷದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 54 ಲಕ್ಷ ರೈತರಿಗೆ 16 ಸಾವಿರ ಕೋಟಿ ರೂ.ಅನುದಾನ ನೀಡಿದ್ದೇವೆ ಎಂದು ತಿಳಿಸಿದರು.

ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ರೈತರು ಯಾರ ಹೆಸರು ಹೇಳುತ್ತಾರೆ. ಬಿಜೆಪಿ ಹೆಸರು ಹೇಳುತ್ತಾರೆ. ರೈತರ ಪರವಾಗಿ ನಮ್ಮ ಸರ್ಕಾರ. ವಿದ್ಯಾರ್ಥಿಗಳ ಪರವಾಗಿ ನಮ್ಮ ಸರ್ಕಾರ. ಸಾಮಾಜಿಕ ನ್ಯಾಯ ಅಂತ ಹೇಳಿ ಕಾಂಗ್ರೆಸ್ ನವರು ಮಾತ್ರ ಮುಂದೆ ಹೋದರು. ದೀನ ದಲಿತರನ್ನು ಅಲ್ಲಿಯೇ ಇಟ್ಟಿದ್ದೀರಿ. ಈ ಬಾರಿ ಬಿಜೆಪಿ ಸರ್ಕಾರ ಇದೆ. ಸಿದ್ದರಾಮಯ್ಯ ಒಳಮೀಸಲಾತಿ ವಿಷಯ ಬಂದಾಗ ಮಾತನಾಡದೇ ಓಡಿ ಹೋದರು. ಆದರೆ, ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ನಾನು ಜೇನು ಗೂಡಿಗೆ ಕೈ ಹಾಕಿ ಅವರಿಗೆ ಜೇನು ತುಪ್ಪ ನೀಡಿದ್ದೇನೆ ಎಂದು ಬಿಜೆಪಿ ಕಾರ್ಯಗಳನ್ನು ವಿವರಿಸಿದರು.
ಸುರ್ಜೇವಾಲ ಅಂತ ಒಬ್ಬ ವ್ಯಕ್ತಿ ಇದ್ದಾನೆ. ಅವರು ಬೊಮ್ಮಾಯಿ ಲಿಂಗಾಯತರಲ್ಲ ಅಂತ ಹೇಳಿದ್ದಾರೆ. ನಾನು ಒಬ್ಬ ಮುಖ್ಯಮಂತ್ರಿಯಾಗಿ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸುವ ಕೆಲಸ ಮಾಡಿದ್ದೇನೆ ಎಂದರು.












Click it and Unblock the Notifications