Basavaraj Bommai in Bidar: ಬೀದರ್ ಹುಮ್ನಾಬಾದ್ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ
ಹುಮ್ನಾಬಾದ್ ಏಪ್ರಿಲ್ 29: ಬೀದರ್‌ನ ಹುಮ್ನಾಬಾದ್ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದರು. ಲಿಂಗಾಯತರು ಹಾಗೂ ಮೋದಿ ಬಗ್ಗೆ ಕಾಂಗ್ರೆಸ್ ಹೇಳಿಕೆಯನ್ನು ಬೊಮ್ಮಾಯಿ ಈ ಸಂದರ್ಭದಲ್ಲಿ ನೆನಸಿಕೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ರಾಜ್ಯ ವಿಧಾನಸಭಾ ಚುನಾವಣೆಯ ಬೆನ್ನಲ್ಲೆ ಬೀದರ್‌ನ ಹುಮ್ನಾಬಾದ್ ಸಮಾವೇಶದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಈ ಸಮಾವೇಶದಲ್ಲಿ ಮಾತನಾಡಿದ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. 'ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ನಮ್ಮ ಡಬಲ್ ಇಂಜಿನ್ ಸರಕಾರ ವಿಶೇಷ ಕೊಡುಗೆಯನ್ನು ನೀಡಿದೆ. ಹೀಗಿದ್ದರೂ ಸಿದ್ದರಾಮಯ್ಯನವರು ಲಿಂಗಾಯತರು ಎಲ್ಲರೂ ಭ್ರಷ್ಟರು ಎನ್ನುತ್ತಾರೆ, ಅವರಿಗೆ ನಾಚಿಕೆಯಾಗಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೀದರ್‌ನ ಹುಮ್ನಾಬಾದ್ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ಜೊತೆಗೆ ಪ್ರಧಾನಿ ಮೋದಿಯನ್ನು 'ವಿಷಹಾವು' ಎಂದು ಕರೆದಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬೊಮ್ಮಾಯಿ ವಾಗ್ದಾಳಿ ಮಾಡಿದರು. 'ಐವತ್ತು ವರ್ಷ ರಾಜಕೀಯ ಜೀವನದಲ್ಲಿರುವ ಖರ್ಗೆಯವರು ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದಾರೆ' ಎಂದು ದೂರಿದರು.
ನಮ್ಮ ಸರಕಾರ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ನೀಡಿದೆ. ಹೀಗಾಗಿ ಮುಂದೆ ರಾಜ್ಯವನ್ನು ಅಭಿವೃದ್ಧಿಯತ್ತ ನಡೆಸಿಕೊಂಡು ಹೋಗಲು ಬಿಜೆಪಿ ಸರ್ಕಾರ ಅಗತ್ಯವಿದೆ. ಹೀಗಾಗಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ಇದೇ ವೇಳೆ ಬೊಮ್ಮಾಯಿ ಬಳಿಕ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಬಸವೇಶ್ವರರಿಗೆ ನಮಿಸಿದರು. 'ಕರ್ನಾಟಕ ನಂಬರ್ ಒನ್ ಮಾಡೋ ಚುನಾವಣೆ ಇದು. ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಬರಬೇಕು. ಡಬಲ್ ಬೆನಿಫಿಟ್, ಡಬಲ್ ಸ್ಪೀಡ್ ಎಲ್ಲವನ್ನೂ ನೀವು ನೋಡಬೇಕು. ಕರ್ನಾಟಕದ ಕಿರೀಟ ಬೀದರ್ ಶಕ್ತಿ ನನಗೆ ಸಿಕ್ಕಿದೆ. ನಿಮ್ಮ ಕನಸು ನನಸಾಗಿಸೋದು ಬಿಜೆಪಿ ಮಾತ್ರ. ಹೀಗಾಗಿ ಡಬಲ್ ಇಂಜಿನ್ ಸರ್ಕಾರದ ಅವಶ್ಯಕತೆ ಇದೆ' ಎಂದು ಮೋದಿ ಹೇಳಿದರು.
ರೊಟ್ಟಿ ಬಗ್ಗೆ ಮೋದಿ ಮಾತು
ಕಿಸಾನ್ ಸಮ್ಮಾನ್ ಯೋಜನೆ, ಕರ್ನಾಟಕ ಸರ್ಕಾರ ರೈತರಿಗೆ ನಾಲ್ಕು ಸಾವಿರ ನೀಡುತ್ತಿದೆ. ಡಬಲ್ ಇಂಜಿನ್ ಸರ್ಕಾರ ಅಭಿವೃದ್ದಿಗೆ ಶ್ರಮಿಸುತ್ತಿದೆ. ದೇಶದ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಇಲ್ಲಿಯ ರೊಟ್ಟಿ ದೇಶದ ಮೂಲೆ ಮೂಲೆಯಲ್ಲಿ ತಲುಪಿದರೆ ಅದರ ಲಾಭ ಇಲ್ಲಿನ ನಾಗರೀಕರು ಪಡೆಯುತ್ತಾರೆ. ಕಾಂಗ್ರೆಸ್ ಬಡತನವನ್ನು ನೋಡಿಲ್ಲ. ಹೀಗಾಗಿ ಇದನ್ನು ಅವರು ಮಾಡಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯದ ಅಭಿವೃದ್ಧಿ ನಿಲ್ಲಬಾರದು. ಎಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಇತ್ತೋ ಅಲ್ಲಿವರೆಗೂ ಮನೆಗಳು ಆಗಿಲ್ಲ. ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಮನೆ ನಿರ್ಮಾಣ ವೇಗ ಪಡೆದುಕೊಂಡಿತು' ಎಂದರು.












Click it and Unblock the Notifications