
ಸಂಘಟನೆಯನ್ನು ಗಟ್ಟಿಗೊಳಿಸಿ ಚುನಾವಣಾ ಸಮರಕ್ಕೆ ಸಿದ್ಧರಾಗಿ ಕಾರ್ಯಕರ್ತರಿಗೆ ಸಿಎಂ ಕರೆ
ಶಿವಮೊಗ್ಗ, ನವೆಂಬರ್ 25: ಬಿಜೆಪಿ ಸರ್ಕಾರದ ಕೆಲಸದ ರಿಪೋರ್ಟ್ ಕಾರ್ಡ್ ಹಾಗೂ ಮುಂದಿನ ಗುರಿಗಳನ್ನು ಇಟ್ಟುಕೊಂಡು ಜನರ ಬಳಿ ಹೋಗುವ ಸಕಾಲ ಬಂದಿದೆ. ಸಂಘಟನೆಯನ್ನು ಗಟ್ಟಿಗೊಳಿಸಿ, ಬೂತ್ ಮಟ್ಟ, ಮಂಡಲ, ಜಿಲ್ಲಾ ಮತ್ತು ರಾಜ್ಯಮಟ್ಟದ ಸಂಘಟನೆ ಬಲಪಡಿಸಿ, ಚುನಾವಣಾ ಸಮರಕ್ಕೆ ಸಿದ್ಧರಾಗಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಶುಕ್ರವಾರದಂದು ಬಿಜೆಪಿ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಿದ್ದ ರಾಜ್ಯ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆದರ್ಶಗಳು, ಸಾಮಾಜಿಕ ಗುರಿಗಳಿಂದ ಸಂಘಟನೆಯನ್ನು ಮೇಲ್ದರ್ಜೆಗೇರಿಸುವಂತಹ ಪಕ್ಷವೇ ಭಾರತೀಯ ಜನತಾ ಪಕ್ಷ. ಅತಿ ಹೆಚ್ಚು ಸಕ್ರಿಯ ಕಾರ್ಯಕರ್ತರಿರುವಂಥ ಪಕ್ಷ. ಇದು ಜನಸೇವೆಯ ಮುಖಾಂತರ ಪಕ್ಷ ಗಳಿಸಿರುವಂತಹ ಅರ್ಹತೆಯನ್ನು ಬಿಂಬಿಸುತ್ತದೆ.
ದೇಶ ಮೊದಲು, ನಂತರ ಪಕ್ಷ ಎಂಬ ಪಕ್ಷ ನಮ್ಮದು. ಮೌಲ್ಯಾಧಾರಿತ ರಾಜಕಾರಣ ಮಾಡಲು ಬಿಜೆಪಿಗೆ ಮಾತ್ರ ಸಾಧ್ಯ. ವಿಷಯಾಧಾರಿತ ಹೋರಾಟಗಳಿಗೆ ನ್ಯಾಯ ಒದಗಿಸುವ ನಾಯಕರು ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿದ್ದಾರೆ. ಜನಸಾಮಾನ್ಯರು, ರೈತರು, ದುಡಿಯುವ ವರ್ಗ, ಮಹಿಳೆಯರು ಎಲ್ಲ ವರ್ಗದ ಜನರು ಭಾಜಪದ ಬಗ್ಗೆ ಆಶಾಭಾವನೆಯನ್ನು ಹೊಂದಿದ್ದಾರೆ. ಭಾರತವನ್ನು ಬಲಿಷ್ಠವಾಗಿಸುವ ಶಕ್ತಿ ಬಿಜೆಪಿ ಪಕ್ಷಕ್ಕೆ ಮಾತ್ರ ಇದೆ.
ಬಿಜೆಪಿ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತದೆ. ಪ್ರಧಾನಿ ಮೋದಿಯವರು ಸಂವಿಧಾನ ನನ್ನ ಧರ್ಮ ಗ್ರಂಥ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವ ಒಂದು ಮಂದಿರ ಎಂಬ ಭಾವನೆಯಲ್ಲಿ ಆಡಳಿತ ನಡೆಸಲಾಗುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಮಾನ ಅವಕಾಶ, ಪ್ರತಿಯೊಬ್ಬರು ಸ್ವಾಭಿಮಾನದ ಬದುಕು ನಡೆಸಬೇಕೆಂಬುದು ನಮ್ಮ ಪಕ್ಷದ ಗುರಿಯಾಗಿದೆ ಎಂದರು.
ಜನರ ಒಳಿತಿಗಾಗಿ ಸೂಕ್ಷ್ಮವಾದ ನಿರ್ಣಯಗಳನ್ನು ಕೈಗೊಂಡ ಕೇಂದ್ರ ಸರ್ಕಾರ ಉಜ್ವಲ ಯೋಜನೆ, ಜಲಜೀವನ ಮಿಷನ್‌ನಂಥ ಮಹತ್ವದ ಯೋಜನೆಗಳನ್ನು ಜಾರಿಮಾಡಿತು. 10 ಕೋಟಿ ಜನರ ಮನೆಗೆ ಶುದ್ಧ ಕುಡಿಯುವ ನೀರಿನ ಸಂಕಲ್ಪವನ್ನು ಮಾಡಿ, ಅದರಲ್ಲಿ ಈಗಾಗಲೇ 7 ಕೋಟಿ ಮನೆಗಳಿಗೆ ನೀರನ್ನು ತಲುಪಿಸಿರುವ ಕೀರ್ತಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ್ದು. ಸ್ವಾತಂತ್ರ್ಯಾನಂತರ ಯಾವುದೇ ಪ್ರಧಾನಿಗಳು ಇಂತಹ ಗಟ್ಟಿ ನಿರ್ಧಾರವನ್ನು ಮಾಡಿರಲಿಲ್ಲ.
ಪ್ರಧಾನ ಮಂತ್ರಿ ಆವಾಸ್ ಯೋಜನೆ, ದೀನದಯಾಳ್ ವಿದ್ಯುತ್ ಯೋಜನೆ, ಮುದ್ರಾ, ಕೃಷಿ ಸಮ್ಮಾನ್, ಆಯುಷ್ಮಾನ್ ಭಾರತ್ ಯೋಜನೆಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸರ್ವವ್ಯಾಪಿ, ಸರ್ವಸ್ಪರ್ಶಿ ಆಡಳಿತವನ್ನು ನೀಡಲಾಗುತ್ತಿದೆ. ವಿಶ್ವದ ಅನೇಕ ಬಲಿಷ್ಠ ರಾಷ್ಟ್ರಗಳು ಕೋವಿಡ್‌ನಿಂದ ಆರ್ಥಿಕ ಸಂಕಷ್ಟವನ್ನು ಕಾಣುತ್ತಿದ್ದರೆ, ಭಾರತ ದೇಶ ಶೇ.7 ರ ನಿರಂತರ ಬೆಳವಣಿಗೆಯನ್ನು ಕಾಣುತ್ತಿದೆ. ಜನರ ಪ್ರಾಣ ಉಳಿಸಿ, ಅವರಿಗೆ ಆಹಾರ, ಆರೋಗ್ಯ, ಉದ್ಯೋಗವನ್ನು ನೀಡಿದ ಸಮರ್ಥ ನಾಯಕತ್ವ ಪ್ರಧಾನಿ ಮೋದಿಯವರದ್ದು. ಸ್ವಾಭಿಮಾನ, ಸ್ವಾವಲಂಬನೆ, ನಾಯಕತ್ವವನ್ನು ಭಾರತ ದೇಶಕ್ಕೆ ತಂದು ಕೊಟ್ಟ ನಾಯಕ ಪ್ರಧಾನಿ ಮೋದಿ ಎಂದರು.

ಮೀಸಲಾತಿ ಹೆಚ್ಚಳ ನಿರ್ಣಯ ಸರ್ಕಾರದ ಕ್ರಾಂತಿಕಾರಿ ಹೆಜ್ಜೆ
4 ದಶಕಗಳ ಕಾಲ ಎಸ್ ಸಿ, ಎಸ್ ಟಿ ಮೀಸಲಾತಿ ಬೇಡಿಕೆ ಹೆಚ್ಚಿಸಲಿಲ್ಲ. ಮೀಸಲಾತಿ ಹೆಚ್ಚಳ ನಿರ್ಣಯ ಸರ್ಕಾರದ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ವರ್ಗಗಳಿಗೆ ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ರಾಜ್ಯದಲ್ಲಿ ಭಾಜಪ ಸರ್ಕಾರ ಒದಗಿಸುತ್ತಿದೆ. ಭಾಜಪ ಪಕ್ಷ ಬೂತ್ ಮಟ್ಟದಿಂದ ಗಟ್ಟಿಯಿದ್ದು, ಪಕ್ಷದ ಸಿದ್ಧಾಂತ, ವಿಚಾರಧಾರೆಗಳು, ಜನಸ್ಪಂದನೆಯೂ ಗಟ್ಟಿಯಿದೆ ಎಂದರು.
ದುಡಿಯುವ ವರ್ಗಕ್ಕೆ ಶಕ್ತಿ ತುಂಬಲಾಗುತ್ತಿದೆ
ಕೃಷಿಕರ ಮಕ್ಕಳಿಗೆ ರೈತ ವಿದ್ಯಾನಿಧಿ ನೀಡಲಾಗುತ್ತಿದ್ದು, ಈ ಯೋಜನೆಯನ್ನು ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೆ ವಿಸ್ತರಿಸಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯ ಮೂಲಕ 5 ಲಕ್ಷ ಯುವಕರು ಹಾಗೂ 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗುತ್ತಿದೆ. ವೃತ್ತಿ ಆಧಾರಿತ ಜನರಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಹಸನು ಮಾಡಲಾಗುತ್ತಿದೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬಿದರೆ, ರಾಜ್ಯದ ಆದಾಯವೂ ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಪುಣ್ಯಕೋಟಿ ದತ್ತು ಯೋಜನೆಗೆ ಜನರಿಂದ ಉತ್ತಮ ಸ್ಪಂದನೆ
ಅಂಜನಾದ್ರಿ ಬೆಟ್ಟ ಕ್ಷೇತ್ರದ ಅಭಿವೃದ್ಧಿ ಮಾಡಲಾಗುತ್ತಿದೆ. ಗೋಹತ್ಯೆ ನಿಷೇಧ ಕಾನೂನನ್ನು ತಂದು, ವಯಸ್ಸಾದ ಗೋವುಗಳ ರಕ್ಷಣೆಗಾಗಿ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸರ್ಕಾರಿ ನೌಕರರ ಸಂಘದವರು ಈ ಯೋಜನೆಯನ್ನು ಸ್ಪಂದಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದೆ.
ಜನರನ್ನು ಈ ಪುಣ್ಯಕಾರ್ಯದಲ್ಲಿ ಜನರೂ ಪಾಲ್ಗೊಳ್ಳಲಿ ಎಂಬ ಉದ್ದೇಶ ಸರ್ಕಾರದ್ದು. ಮತಾಂತರ ನಿಷೇಧ ಕಾಯ್ದೆಗೆ ಬಹಳ ವಿರೋಧ ವ್ಯಕ್ತಪಡಿಸಲಾಯಿತು. ಇದಕ್ಕೆ ವಿರೋಧ ಪಕ್ಷಗಳು ತಪ್ಪು ವ್ಯಾಖ್ಯಾನ ಮಾಡಿದರು. ದತ್ತಪೀಠ ವಿಚಾರದಲ್ಲಿಯೂ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸಿದೆ. ಶ್ರದ್ಧಾ ಕೇಂದ್ರಗಳು, ಮಂದಿರಗಳನ್ನು ಭಕ್ತರೇ ಮೇಲ್ವಿಚಾರಣೆ ಮಾಡಬೇಕೆಂಬುದು ಸರ್ಕಾರದ ಉದ್ದೇಶ. ಈ ಬಗ್ಗೆ ಶೀಘ್ರದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ಎಲ್ಲರಿಗೂ ಸಮಾನ ಅವಕಾಶಗಳನ್ನು ತರುವ ಉದ್ದೇಶದಿಂದ ಏಕರೂಪ ನಾಗರಿಕ ಸಂಹಿತೆಯನ್ನು ರಾಜ್ಯದಲ್ಲಿಯೂ ಜಾರಿಗೊಳಿಸಲು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಪೌರಕಾರ್ಮಿಕರ ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳು ಕಿವಿಗೊಡಲಿಲ್ಲ. ನಮ್ಮ ಸರ್ಕಾರ ಪೌರಕಾರ್ಮಿಕರ ಭತ್ಯ ಹೆಚ್ಚಳದ ಜೊತೆಗೆ 11, 360 ಪೌರಕಾರ್ಮಿಕರನ್ನು ಖಾಯಂಗೊಳಿಸುವ ಆದೇಶವನ್ನು ನೀಡಲಾಗಿದೆ ಎಂದರು.
ಕಾಂಗ್ರೆಸ್ ನವರ ಬಣ್ಣ ಬಯಲಾಗಿದೆ
ಡಾ.ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ ಅವರ ನಡವಳಿಕೆಯನ್ನು ನಾವು ನೋಡಿದ್ದೇವೆ. ಮೊಸಳೆ ಕಣ್ಣೀರನ್ನು ಹಾಕುತ್ತಾರೆ. ಆದರೆ ಕಾಂಗ್ರೆಸ್ ಅವರಿಗೆ ಅಂಬೇಡ್ಕರ್ ಅವರ ವಿಚಾರಧಾರೆಗಳ ಪಾಲನೆಯಲ್ಲಿ ಸಂಪೂರ್ಣ ವಿರೋಧವಿದೆ. ಸ್ವಾತಂತ್ರ್ಯ ಹೋರಾಟವನ್ನು ಅಧಿಕಾರಕ್ಕೆ ಬಳಸಿಕೊಂಡರು. ಸಂವಿಧಾನದ ರಕ್ಷಕರು ನಾವು ಎಂದು ಕಾಂಗ್ರೆಸ್ ಪಕ್ಷ ಅದರ ಲಾಭವನ್ನೂ ಪಡೆಯಿತು. ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳ ಬೇಡಿಕೆಗೆ ಸ್ಪಂದಿಸದ ಕಾಂಗ್ರೆಸ್ ಪಕ್ಷ , ಆ ವರ್ಗವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದೆ. ದಾಸ್ಯ ಸಂಸ್ಕೃತಿಯನ್ನು ಓಲೈಸುವ ಪಕ್ಷ. ಮತವಂಚನೆ ಮಾಡಿರುವ ಕಾರಣ, ಕಾಂಗ್ರೆಸ್ ನವರ ಬಣ್ಣ ಬಯಲಾಗಿದ್ದು, ಅವರು ಎಲ್ಲ ಕಡೆ ಸೋಲುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಮತ್ತಿತರರು ಹಾಜರಿದ್ದರು.