ಧಾರಾಕಾರ ಮಳೆ: ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಸಿಎಂ ಪ್ರವಾಸ
ಬೆಂಗಳೂರು, ಜುಲೈ 11 : ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಪ್ರವಾಸ ಕೈಗೊಳ್ಳಲಿದ್ದಾರೆ.
ಮಲೆನಾಡು, ಕೊಡಗು, ಕರಾವಳಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಕಳೆದ 10 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ಹಾಗೂ ನೆರವಾಗಿಯೂ ಮಾತನಾಡಿದ್ದು, ಮಳೆ ತಗ್ಗಿರುವುದರಿಂದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಸ್ಥಿತಿಗತಿಯನ್ನು ಅವಲಂಬಿಸಿ ಪರಿಹಾರಕ್ಕೆ ಸೂಚನೆ ನೀಡಿದ್ದಾರೆ. ಈಗ ಸ್ವತಃ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಸಿಎಂ ಪ್ರವಾಸದ ವಿವರ:
ಮಂಗಳವಾರ ಬೆಳಗ್ಗೆ 9ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಟು ಮೈಸೂರು ತಲುಪಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಹೊರಟು ಮೊದಲಿಗೆ ಕೊಡಗು ಜಿಲ್ಲೆಯ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ.

ಮಧ್ಯಾಹ್ನ 1ಕ್ಕೆ ಮಡಿಕೇರಿ ತಲುಪಿ ಅಲ್ಲಿ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಿದ್ದಾರೆ. ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಾಗುತ್ತದೆ.
ಮಧ್ಯಾಹ್ನ 2.30ಕ್ಕೆ ಮಡಿಕೇರಿಯಿಂದ ಸುಳ್ಯ ಮಾರ್ಗವಾಗಿ ಹೊರಟು ರಸ್ತೆ ಮಧ್ಯೆಯ ಮಳೆ ಹಾನಿ ಪ್ರದೇಶಗಳ ವೀಕ್ಷಣೆ ನಡೆಸಿ ಸಂಜೆ 5.30ಕ್ಕೆ ಮಂಗಳೂರು ತಲುಪಲಿದ್ದಾರೆ. ಅಲ್ಲಿ ಜಿಲ್ಲಾಡಳಿತದೊಂದಿಗೆ ಮಳೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಸಭೆ ನಡೆಯುತ್ತದೆ. ಬಳಿಕ ರಾತ್ರಿ 7.30ಕ್ಕೆ ರಸ್ತೆ ಮಾರ್ಗವಾಗು ಉಡುಪಿ ತಲುಪಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ವೀಕ್ಷಣೆ:
ಜುಲೈ 13ರಂದು ಬುಧವಾರ ಬೆಳಗ್ಗೆ 9ಕ್ಕೆ ಮಳೆಹಾನಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬಳಿಕ ರಸ್ತೆ ಮೂಲಕ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಮಳೆ ಹಾನಿ ವೀಕ್ಷಣೆ ಮಾಡಿ ಉತ್ತರ ಕರ್ನಾಟಕ ಜಿಲ್ಲಾಡಳಿತದೊಂದಿಗೆ ಸಭೆ ಮಾಡಲಿದ್ದಾರೆ. ನಂತರ ಉಡುಪಿ ಜಿಲ್ಲೆಯ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿ ರಾತ್ರಿ 7.30ಕ್ಕೆ ಬಜ್ಪೆ ವಿಮಾನ ನಿಲ್ದಾಣ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.












Click it and Unblock the Notifications