Lalbagh Flower Show 2023 : ಲಾಲ್ ಬಾಗ್ ನಲ್ಲಿ ಸಿಎಂ ಬೊಮ್ಮಾಯಿ ಚಾಲನೆ
ಬೆಂಗಳೂರು, ಜನವರಿ 20: ಬೆಂಗಳೂರು ಉದ್ಯಾನ ನಗರ ಎಂದು ಈಗಾಗಲೇ ಪ್ರಸಿದ್ಧಿಯಾಗಿದೆ. ಅಭಿವೃದ್ಧಿಯಲ್ಲಿ ಈ ಹೆಸರು ಹಿಂದೆ ಸರಿದಿದ್ದು, ಮತ್ತೊಮ್ಮೆ ಉದ್ಯಾನ ನಗರದ ಗತ ವೈಭವವನ್ನು ಮರುಕಳಿಸುವಂತೆ ಸರ್ಕಾರ ಕ್ರಮ ವಹಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿರುವ ಬೆಂಗಳೂರು ನಗರದ ಇತಿಹಾಸ ವಿಷಯಾಧಾರಿತದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ - 2023 ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಲಾಲ್ ಬಾಗ್ , ಕಬ್ಬನ್ ಪಾರ್ಕ್ ಸೇರಿದಂತೆ ಪ್ರಮುಖ ಉದ್ಯಾನಗಳನ್ನು ಉತ್ತಮವಾಗಿಟ್ಟುಕೊಂಡು ಬಿಬಿಎಂಪಿ ನಿರ್ವಹಿಸುವ ಹೊಸ ಉದ್ಯಾನವನ ಗಳಲ್ಲಿ ಹೆಚ್ಚಿನ ಸಸ್ಯ ಸಂಪತ್ತನ್ನು ಬೆಳೆಸುವುದು ಹಾಗೂ ಹೊರವಲಯದಲ್ಲಿ ಹೊಸ ಉದ್ಯಾನ ಗಳನ್ನು ನಿರ್ಮಿಸುವ ಮೂಲಕ ಉದ್ಯಾನ ನಗರ ಹೆಸರನ್ನು ಖಾಯಂ ಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಹಸಿರು ಪದರ ವಿಸ್ತರಣೆಯಾಗಬೇಕು
213 ನೇ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ್ದು, ಫಲಪುಷ್ಪ ಪ್ರದರ್ಶನ ಅತ್ಯಂತ ಜನಪ್ರಿಯವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಈ ಬಾರಿ 10- 15 ಲಕ್ಷ ಜನ ಬರುವ ನಿರೀಕ್ಷೆ ಇದೆ. ಅದಕ್ಕಾಗಿ ತೋಟಗಾರಿಕಾ ಇಲಾಖೆ ವ್ಯವಸ್ಥೆ ಗಳನ್ನು ಮಾಡಿಕೊಂಡಿದೆ. ಫಲಪುಷ್ಪ ಎಲ್ಲರಿಗೂ ಬಹಳ ಪ್ರಿಯವಾಗಿರುವಂಥದ್ದು, ಇಲ್ಲಿ ಪ್ರದರ್ಶನದ ಮುಖಾಂತರ ರಾಜ್ಯದ ಸಸ್ಯಸಂಪತ್ತು ಎಷ್ಟು ದೊಡ್ಡದಿದೆ, ವಿಭಿನ್ನ, ವಿಸ್ತಾರವಾಗಿದೆ ಎಂದು ಪ್ರದರ್ಶನವಾಗುತ್ತದೆ.

ಸಸ್ಯಸಂಪತ್ತನ್ನು ಹೆಚ್ಚಿಗೆ ಮಾಡುವುದು ನಮ್ಮ ಉದ್ದೇಶ. ರಾಜ್ಯದಲ್ಲಿ ಹಸಿರು ಪದರ ವಿಸ್ತರಣೆಯಾಗಬೇಕು. ಅದಕ್ಕಾಗಿ ಹಸಿರು ಆಯವ್ಯಯವನ್ನು ರೂಪಿಸಲಾಗಿದೆ. 100 ಕೋಟಿ ರೂ.ಗಳನ್ನು ಹಸಿರು ವಿಸ್ತರಣೆಗಾಗಿ ಮೀಸಲಿರಿಸಿದೆ. ಅದರ ಅನುಷ್ಠಾನ ವೂ ಆಗುತ್ತಿದೆ. ಗುಡ್ಡಗಾಡು ಪ್ರದೇಶಗಳ ಸಂಪೂರ್ಣ ಹಸಿರು ಮಾಡಿ ಪರಿಸರ ಸಮತೋಲನ ಕಾಯ್ದುಕೊಳ್ಳಲು.ರಾಜ್ಯದಲ್ಲಿ ಪ್ರಥಮ ಬಾರಿಗೆ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ತೋಟಗಾರಿಕೆ ವಿಸ್ತರಣೆಯೂ ಆಗಬೇಕು.ಲಾಲ್ ಬಾಗ್ ನಿಂದ ಹಿಡಿದು ರಾಜ್ಯದೆಲ್ಲೆಡೆ ತೋಟಗಾರಿಕೆ ಇದೆ. ಇವುಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದು, ಬಜೆಟ್ ನಲ್ಲಿ ಅನುದಾನ ನೀಡಬೇಕೆನ್ನುವ ಚಿಂತನೆಯೂ ಇದೆ. ತೋಟಗಾರಿಕೆಯಿಂದ ಹಸಿರು ಹೆಚ್ಚುವುದರ ಜೊತೆಗೆ ಅಲ್ಲಿ ಉತ್ಪಾದನೆ, ಉತ್ಪನ್ನ ಹೆಚ್ಚಾಗುತ್ತದೆ ಹಾಗೂ ಪೌಷ್ಟಿಕ ಆಹಾರವನ್ನು ಒದಗಿಸಲು ಸಾಧ್ಯವಿದೆ. ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆಯನ್ನು ವಿಸ್ತರಿಸಿ, ಫಾರ್ಮ್ ಗಳನ್ನು ಬೆಳೆಸುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದರು.

ಜನಫಲಪುಷ್ಪಗಳನ್ನು ಬೆಳೆಸಲು ಪ್ರಯತ್ನಿಸಬೇಕು
ಇನ್ನೂ ಜನ ಫಲಪುಷ್ಪ ಪ್ರದರ್ಶನದ ಲಾಭ ಪಡೆಯಲಿ ಹಾಗೂ ತಮ್ಮದೇ ರೀತಿಯಲ್ಲಿ ಫಲಪುಷ್ಪಗಳನ್ನು ಬೆಳೆಸಲು ತಮ್ಮ ಪ್ರಯತ್ನ ಮಾಡಬೇಕು ಎಂದರು.
ಇನ್ನೂ ಈ ಬಾರಿಯೂ ಅದ್ದೂರಿ ಫಲಪುಷ್ಪಪ್ರದರ್ಶನಕ್ಕೆ ಸಿದ್ದಗೊಂಡಿದ್ದು, ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಬೆಂಗಳೂರು ನಗರದ ಚಿತ್ರಣ ಕಂಗೊಳಿಸಲಿದೆ. ಲಾಲ್ ಬಾಗ್ ನಲ್ಲಿ 1,500 ವರ್ಷಗಳ ಬೆಂಗಳೂರು ಇತಿಹಾಸದ ಚಿತ್ರಣ ಸೃಷ್ಟಿಯಾಗಲಿದ್ದು, ವರ್ಟಿಕಲ್ ಗಾರ್ಡನ್ ರೂಪದಲ್ಲಿ ಐತಿಹಾಸಿಕ ಬೆಂಗಳೂರು ಗಡಿ ಗೋಪುರ ಅನಾವರಣಗೊಂಡಿದೆ.ಇಂದಿನಿಂದ ಆರಂಭವಗಿರುವ ಫಲಪುಷ್ಪ ಪ್ರದರ್ಶನ 10 ದಿನ ಜ. 30ರವರೆಗೆ ನಡೆಯಲಿದೆ.

ಇನ್ನೂ ಟಿಕೆಟ್ ದರವನ್ನು ಹೆಚ್ಚಿಸಲಾಗಿಲ್ಲ.ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಾಜಾ ದಿನಗಳಲ್ಲಿ 75 ರೂಪಾಯಿ ನಿಗದಿ ಮಾಡಲಾಗಿದೆ.ಇನ್ನೂ 12 ವರ್ಷ ಒಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂಪಾಯಿ ಫಿಕ್ಸ್ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಾಲ್ಕು ಗೇಟ್ ಗಳಲ್ಲಿಯೂ ಟಿಕೆಟ್ ಕೌಂಟರ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications