ಮೀಸಲಾತಿ ಹೇಳಿಕೆಯು ರಣದೀಪ್ ಸುರ್ಜೆವಾಲರ ನ್ಯಾಯಾಂಗ ಅಪ್ರಬುದ್ಧತೆ ತೋರಿಸುತ್ತದೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಏಪ್ರಿಲ್ 26: ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ವಿವಿಧ ಸಮುದಾಯಗಳಿಗೆ ಮೋಸ ಮಾಡಿದ್ದಾರೆ ಎಂದೆಲ್ಲ ನೀಡಿದ ಆರೋಪಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಬುಧವಾರ ಟ್ವೀಟ್ ಮೂಲಕ ದಾಖಲೆ ಒದಗಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮೀಸಲಾತಿ ವಿಚಾರ ಕುರಿತು ಕಾಂಗ್ರೆಸ್ ಪಕ್ಷದ ರಂದೀಪ್ ಸುರ್ಜೆವಾಲ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಮೀಸಲಾತಿ ಪ್ರಕರಣ 'ಮೊಟ್ಟ ಮೊದಲಿಗೆ, ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ಕಾಂಗ್ರೆಸ್ ಪಕ್ಷದ ಶ್ರೀ ಸುರ್ಜೆವಾಲಾ ಅಥವಾ ಕಾಂಗ್ರೆಸ್ ಪಕ್ಷ ನೀಡಿರುವ ಹೇಳಿಕೆ ನ್ಯಾಯಾಂಗ ನಿಂದನೆ ಮತ್ತು ಆ ಮೂಲಕ ನ್ಯಾಯ ಒದಗಿಸಲು ತಡೆಒಡ್ಡಲು ಮಾಡಿರುವ ಪ್ರಯತ್ನ ವಾಗಿದೆ. ಸಂವಿಧಾನವು ಮೀಸಲಾತಿಯನ್ನು ಧರ್ಮದ ಆಧಾರದ ಮೇಲೆ ನೀಡುವುದರ ಬಗ್ಗೆ ಆಲೋಚಿಸಿಲ್ಲ. ಭಾರತದ ಸಂವಿಧಾನಶಿಲ್ಪಿ, ಬಾಬಾ ಸಾಹೇಬ್ ಡಾ: ಬಿ.ಆರ್. ಅಂಬೇಡ್ಕರ್ ಅವರು ಪ್ರಥಮ ತಿದ್ದುಪಡಿಯನ್ನು ಪರಿಚಯಿಸುವ ಸಂದರ್ಭದಲ್ಲಿ ಈ ಕುರಿತು ಭಾಷಣ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
'ನ್ಯಾಯಾಲಯದಲ್ಲಿ ಮುಚ್ಚಳಿಕೆ ನೀಡಿದ್ದು ಏಕೆ ಎಂಬ ಹೇಳಿಕೆ ಹಾಸ್ಯಾಸ್ಪದವಾಗಿದೆ. ಇದು ನ್ಯಾಯಾಂಗ ಪ್ರಕ್ರಿಯೆಗಳ ಕುರಿತಂತೆ ನಿಮಗಿರುವ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಭಾರತೀಯ ಕಾಂಗ್ರೆಸ್ ಪಕ್ಷವು (ಐಎನ್‌ಸಿ) ಕರ್ನಾಟಕ ರಾಜ್ಯದಲ್ಲಿ ಯಾವಾಗಲೂ ಓಲೈಕೆ ರಾಜಕಾರಣದಲ್ಲಿ ತೊಡಗಿದೆ. ತುಷ್ಟೀಕರಣ ರಾಜಕಾರಣ ಮಾಡುತ್ತದೆ. ಸಾಮಾಜಿಕ ನ್ಯಾಯ ಒದಗಿಸುವುದನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಅವರು ದೂರಿದರು.
ನ್ಯಾಯಾಂಗ ನಿಂದನೆಯ ಎಚ್ಚರಿಕೆ
ಸರ್ಕಾರವು, ಹಿರಿಯ ನ್ಯಾಯವಾದಿಗಳನ್ನು ನೇಮಿಸಿಕೊಂಡು ತನ್ನ ನಿಲುವನ್ನು ಸಮರ್ಪಕವಾಗಿ ಸಮರ್ಥಿಸಿಕೊಳ್ಳುತ್ತಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ದೊರೆಯುವ ವಿಶ್ವಾಸ ನಮಗಿದೆ. ಈ ರೀತಿಯ ಹೇಳಿಕೆಗಳ ಮೂಲಕ ನ್ಯಾಯ ವ್ಯವಸ್ಥೆಯನ್ನು ಕಲುಷಿತಗೊಳಿಸಲು ಪ್ರಯತ್ನಿಸಿದರೆ, ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಅವರು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಸುರ್ಜೆವಾಲ ಮಾಡಿದ ಆರೋಪವೇನು?
ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದ ರಣದೀಪ್ ಸುರ್ಜೆವಾಲಾ ಅವರು ಬಿಜೆಪಿ ಸರ್ಕಾರದ ಮೇಲೆ ಸಾಲು ಸಾಲು ಆರೋಪ ಮಾಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ತನ್ನ ಮೀಸಲಾತಿ ಹೆಚ್ಚಳ ಆದೇಶ ಸಮರ್ಥಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಆ ಮೂಲಕ ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ದ್ರೋಹ ಮಾಡಿದೆ. ಆ ಸಮುದಾಯದ ಜನರಿಗೆ ಅಪಮಾನ ಮಾಡಿದೆ ಎಂದು ಆಪಾದಿಸಿದರು.
ಕರ್ನಾಟಕ ಬಿಜೆಪಿ ಸರ್ಕಾರ 2002 ರಲ್ಲಿ ಜಾರಿಗೊಳಿಸಿದ್ದ ಮೀಸಲಾತಿಯನ್ನು ಮರುಜಾರಿ ಮಾಡುವ ಬಗ್ಗೆ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಆ ಮೂಲಕ ಒಕ್ಕಲಿಗರು 3ಎ, ಲಿಂಗಾಯತರು 3ಬಿ ವರ್ಗೀಕರಣದಲ್ಲಿ ಮುಂದುವರಿಯುತ್ತಾರೆ. ಆದರೆ ಬೊಮ್ಮಾಯಿ ಸರ್ಕಾರದ ಆದೇಶದಂತೆ ಹೆಚ್ಚುವರಿ ಶೇಕಡಾ 2ರಷ್ಟು ಮೀಸಲಾತಿ ಕೆಗೆಟಕುವುದಿಲ್ಲ. ಮೊನ್ನೆ ಏಪ್ರಿಲ್ 25 ಸುಪ್ರೀಂ ಕೋರ್ಟ್‌ನಲ್ಲಿ ಸಾಲಿಸಿಟರ್ ಜನರಲ್ ಮೂಲಕ, ಮಾರ್ಚ್ 27, 2023ರಂದು ತಾನು ಹೊರಡಿಸಿದ್ದ ಮೀಸಲಾತಿ ಹೆಚ್ಚಳ ಆದೇಶಕ್ಕೆ ತಾನೇ ತಡೆ ಹಿಡಿದಿದೆ. ಇದು ಬಿಜೆಪಿಯಿಂದಾಗಿರುವ ಪಾಪ ಎಂದು ಅವರು ಕಿಡಿ ಕಾರಿದ್ದರು.












Click it and Unblock the Notifications