ದ್ವಂದ್ವ ನೀತಿಯ ಕಾಂಗ್ರೆಸ್‌ನಿಂದ ದಲಿತರು ಎಚ್ಚರಿಕೆ ವಹಿಸಿ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ, ಏಪ್ರಿಲ್ 06: ದ್ವಂದ್ವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ನಾಯಕರ ಮಾತು ಮತ್ತು ಕೃತಿಯಲ್ಲಿ ವ್ಯತ್ಯಾಸವಿದೆ. ಸಿದ್ದರಾಮಯ್ಯ ಅವರು ಜಾತಿ ವಿಷ ಬೀಜ ಬಿತ್ತಲು ಮುಂದಾದರು. ದಲಿತರು ಈ ಎಲ್ಲದರ ಬಗ್ಗೆ ಎಚ್ಚರಿಕೆ ವಹಿಸಿ ಎಂಉ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ರಾಜ್ಯ ಪರಿಶಿಷ್ಟ ಸಮುದಾಯಗಳ ಒಳಮೀಸಲಾತಿ ಜಾರಿಗೊಳಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಪರಿಶಿಷ್ಟ ಸಮುದಾಯದ ಒಕ್ಕೂಟ ಏರ್ಪಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಾತಿ ವಿಷ ಬೀಜ ಬಿತ್ತಲು ಮುಂದಾಗಿ, ಧರ್ಮ ಒಡೆಯಲು ಮುಂದಾದರು.ಮೀಸಲಾತಿ ಹೆಚ್ಚಿಸುವ ಬಗ್ಗೆ ಕಾಂಗ್ರೆಸ್‌ಗೆ ಬದ್ಧತೆ ಆಗಲಿ ರಾಜಕೀಯ ಇಚ್ಛಾಶಕ್ತಿ ಆಗಲಿ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಭವಿಷ್ಯ ನುಡಿದರು.
ಅಧಿಕಾರ ಶಾಶ್ವತ ಅಲ್ಲಾ, ಹೃದಯ ಸ್ಥಾನ ದೊಡ್ಡದು
ಒಳ ಮೀಸಲಾತಿ ಹೋರಾಟ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಒಳ ಮೀಸಲಾತಿಯನ್ನು ಯಾರು ಮಾಡುತ್ತಾರೆ? ಅವರು ಬಸ್ಮವಾಗತ್ತಾರೆ ಎಂದೆಲ್ಲ ಹೇಳುತ್ತಿದ್ದರು. ಅಧಿಕಾರ ಶಾಶ್ವತ ಅಲ್ಲಾ, ಜನರ ಹೃದಯದಲ್ಲಿ ದೊರೆಯುವ ಸ್ಥಾನ ದೊಡ್ಡದು ಎಂಬ ನಂಬಿಕೆ ನಮ್ಮದು. ಹೀಗಾಗಿ ಮೀಸಲಾತಿ ಹೆಚ್ಚಳ ಮಾಡುವಾಗ ಸರ್ವಪಕ್ಷದ ಸಭೆ ಕರೆದು ಎಲ್ಲರ ಒಪ್ಪಿಗೆ ಪಡೆಯಲಾಯಿತು. ಆದರೆ ಈಗ ಇದು ಸಂವಿಧಾನಾತ್ಮಕವಲ್ಲ ಎನ್ನುವ ಕಾಂಗ್ರೆಸ್ ಅವರದ್ದು ಒಳಗೊಂದು ಹೊರಗೊಂದು ನೀತಿ ಅನುಸರಿಸುತ್ತಿದ. ಅಂತಹ ಕಾಂಗ್ರೆಸ್ ನಿಂದ ದಲಿತರು ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಮೀಸಲಾತಿ ಹಾಗೂ ಒಳ ಮೀಸಲಾತಿ ಪರವಾಗಿದ್ದರೋ ವಿರೋಧವಾಗಿದ್ದರೋ ಎಂದು ಸ್ಪಷ್ಟ ಚಿತ್ರಣ ನೀಡಲಿ. ಅದು ಬಿಟ್ಟು ದ್ವಂದ್ವ ನೀತಿ ಬೇಡ.ಕೇಂದ್ರಕ್ಕೆ ಸಲ್ಲಿಸಿರುವ ಪತ್ರದ ಪ್ರತಿ ಪ್ರದರ್ಶನ ಮಾಡಿದ ಮುಖ್ಯಮಂತ್ರಿಗಳು ನಾನು ಬೇರೆ ಮುಖ್ಯಮಂತ್ರಿಗಳ ರೀತಿ ಅಲ್ಲಾ, ಕೆಲಸ ಮಾಡಿ ಮಾತನಾಡುವ ಮುಖ್ಯಮಂತ್ರಿ ಎಂದು ಮೀಸಲಾತಿ ಜಾರಿ ಕುರಿತು ಕಾಂಗ್ರೆಸ್ ತಿರುಗೇಟು ನೀಡಿದರು.

ಬಿಜೆಪಿಯಿಂದ ಯಾರಿಗೂ ಅನ್ಯಾಯವಾಗಿಲ್ಲ:ಸಿಎಂ
ಬಿಜೆಪಿ ಪಕ್ಷದಿಂದ ಯಾರಿಗೂ ಯಾವ ಸಮುದಾಯಕ್ಕೂ ಅನ್ಯಾಯ ಆಗಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾಂಡ ಅಭಿವೃದ್ಧಿ ಮಾಡಿದರು. ಆದರೆ ಈಗ ಅವರ ಪರವಾಗಿ ಕಾಂಗ್ರೆಸ್ ಮಾತನಾಡುತ್ತಿದೆ. ತಾಂಡಗಳಿಗೆ ಹಕ್ಕು ಪತ್ರ ಕೊಟ್ಟಿದ್ದು ನಾವು ಎಂದು ಹೇಳಿಕೊಂಡಿದೆ. ನಾವು ಇನ್ನೊಬ್ಬರಿಗೆ ನೋವಾಗದಂತೆ ಮೀಸಲಾತಿ ನೀಡಿದ್ದು, ದಲಿತರನ್ನು ಎದುರು ಹಾಕಿಕೊಂಡು ಯಾವ ಸರ್ಕಾರ ಅಧಿಕಾರಕ್ಕೆ ಬರೋದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರ ಬರೋದು ಕನಸಿನ ಮಾತು. ಒಳ ಮೀಸಲಾತಿ ಕಾಂಗ್ರೆಸ್ ಮುಟ್ಟಿದರೆ ಕ್ರಾಂತಿಯೇ ಆಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದರು.
ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಲಾಗಿದೆ. ಇದು ಸಾಮಾಜಿಕ, ಸಮಾನತೆ ಇರುವ ಡಾ.ಬಿ.ಆರ್. ಅಂಬೇಡ್ಕರ್, ಶರಣ ಬಸವಣ್ಣ, ವಾಲ್ಮೀಕಿ ತತ್ವಾದರ್ಶಗಳನ್ನು ಇಟ್ಟುಕೊಂಡು ಮಾಡಿರುವ ಕಾನೂನು. ದೇಶದಲ್ಲಿ ಇದು ಮಹತ್ತರ ಬದಲಾವಣೆಗೆ ನಾಂದಿಯಾಗಲಿದೆ. ದೇಶದ ಬದಲಾವಣೆ ಬೀಜ ಕರ್ನಾಟಕದಿಂದ ಬಿತ್ತನೆಯಾಗಲಿದೆ. ಬಂಜಾರ, ಭೋವಿ, ಕುಂಚಾ, ಕೊರಮ ಬಂಧುಗಳ ಮೀಸಲಾತಿಯನ್ನು ಸೂರ್ಯ, ಚಂದ್ರ ಇರುವವರಗೂ ತೆಗೆಯುವದಿಲ್ಲ ಎಂದು ಹೇಳಿದರು.
ಮೊದಲ ತುತ್ತು ದಲಿತ ಸಮುದಾಯಕ್ಕೆ ಮೀಸಲು
ರಾಜ್ಯ ಜನರು ಕಾಂಗ್ರೆಸ್ ಪಕ್ಷ ಹೇಳುವ ಸುಳ್ಳುಗಳನ್ನು ನಂಬಬಾರದು. ಬಜೆಟ್ ನಲ್ಲಿ ಘೋಷಣೆ ಮಾಡಿದ್ದಂತೆ 7ಡಿ ಕಾನೂನನ್ನು ತೆಗೆಯಲಾಗುವುದು. ದಲಿತ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಕಾನೂನು ಸಿದ್ದರಾಮಯ್ಯ ಮಾಡಿದ್ದರು. ನನ್ನ ಅನ್ನದ ಮೊದಲ ತುತ್ತು ದಲಿತ ಸಮುದಾಯಕ್ಕೆ ಮೀಸಲು ಎಂದು ಮುಖ್ಯಮಂತ್ರಿಗಳು ತಿಳಿಸಿದರು.












Click it and Unblock the Notifications