ಧಾರವಾಡ, ಶಿಗ್ಗಾಂವ್, ಹಾವೇರಿಯಲ್ಲಿ ಮೋಡ ಬಿತ್ತನೆ, ಒಳ್ಳೆ ಮಳೆ
ಧಾರವಾಡ, ಶಿಗ್ಗಾಂವ್ ಹಾಗೂ ಹಾವೇರಿಯಲ್ಲಿ ಮೋಡ ಬಿತ್ತನೆ ಮಾಡಲಾಗಿದೆ. ಹಾಗೆ ನೋಡಿದರೆ ಚಿತ್ರದುರ್ಗದಲ್ಲೂ ಮೋಡ ಬಿತ್ತನೆ ಆಗಬೇಕಿತ್ತು. ಆದರೆ ಸೂಕ್ತ ವಾತಾವರಣ ಇರದ ಕಾರಣಕ್ಕೆ ಅಲ್ಲಿ ಮೋಡ ಬಿತ್ತನೆ ಮಾಡಿಲ್ಲ ಎಂದು ಈ ಯೋಜನೆಯ ಸಮನ್ವಯಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಹಾವೇರಿ ಹಾಗೂ ಶಿಗ್ಗಾಂವದಲ್ಲಿ ಮೋಡ ಬಿತ್ತನೆ ಯಶಸ್ವಿಯಾಗಿದ್ದು, ಉತ್ತಮ ಮಳೆಯಾಗುತ್ತಿದೆ ಎಂದು ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೋಡ ಬಿತ್ತನೆಗೆ ನಿಯೋಜನೆಯಾದ ಏರ್ ಕ್ರಾಫ್ಟ್ ಗೆ ಸಚಿವರಾದ ಎಚ್.ಕೆ.ಪಾಟೀಲ್ ಹಸಿರು ನಿಶಾನೆ ತೋರಿದರು.

ಮೊದಲಿಗೆ ವಿಮಾನ ಚಿತ್ರದುರ್ಗದ ಕಡೆಗೆ ತೆರಳಿತು. ಕಳೆದ ನಾಲ್ಕು ವರ್ಷಗಳಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ಇಲ್ಲಿನ ಜನ ಈ ಯೋಜನೆ ಬಗ್ಗೆ ವಿಪರೀತ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಆದರೆ ಪೂರಕ ವಾತಾವರಣ ಇಲ್ಲದ ಕಾರಣಕ್ಕೆ ಬೇರೆಡೆ ಮೋಡ ಬಿತ್ತನೆ ಮಾಡಲಾಯಿತು.
ಮೋಡ ಬಿತ್ತನೆ ಮಾಡುವುದಕ್ಕೆ ರಾಜ್ಯ ಸರಕಾರ ಅರವತ್ತು ದಿನಗಳ ಒಪ್ಪಂದ ಮಾಡಿಕೊಂಡಿದೆ. ಈಚೆಗೆ ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೋಡ ಬಿತ್ತನೆ ಮಾಡಲಾಗಿತ್ತು. ಈ ಪ್ರದೇಶದಲ್ಲಿ ವಾಡಿಕೆಗಿಂತ ಶೇ ಇಪ್ಪತ್ತರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಯಾಗಿದೆ. ಉತ್ತರ ಕರ್ನಾಟಕದಲ್ಲಿ ನಿರೀಕ್ಷಿತ ಫಲಿತಾಂಶ ಬರುತ್ತದೆ ಎಂದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋಡ ಬಿತ್ತನೆ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಜಗತ್ತಿನ ಐವತ್ತು ರಾಷ್ಟ್ರಗಳಲ್ಲಿ ನಿಯಮಿತವಾಗಿ ಮೋಡ ಬಿತ್ತನೆ ಮಾಡಲಾಗುತ್ತಿದೆ. ಇದು ವೈಜ್ಞಾನಿಕ ವಿಧಾನ. 2003ರಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಯಶಸ್ವಿಯಾಗಿತ್ತು. ಈ ಬಗ್ಗೆ ತಿಳಿದುಕೊಳ್ಳದೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.












Click it and Unblock the Notifications