ಮತ್ತೆ ಗೊಂದಲ: 5, 8, 9ನೇ ತರಗತಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಮಾರ್ಚ್ 12: ಕರ್ನಾಟಕದಲ್ಲಿ 5, 8, 9ನೇ ತರಗತಿಯ ರಾಜ್ಯಮಟ್ಟದ ಬೋರ್ಡ್ (ಪಬ್ಲಿಕ್) ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಮಾರ್ಚ್ 11ರಂದು ಪರೀಕ್ಷೆ ಆರಂಭವಾಗಿದ್ದು, ಮಾರ್ಚ್ 13ರಿಂದ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಬೆಂಗಳೂರು ಮಂಗಳವಾರ ಆದೇಶ ಹೊರಡಿಸಿದ್ದಾರೆ. 5, 8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದ ತನಕ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಆದೇಶ ಹೇಳಿದೆ.

ದಿನಾಂಕ 13/3/2024ರ ಬುಧವಾರದಿಂದ ನಡೆಯಬೇಕಿದ್ದ 5, 8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದ ತನಕ ಮುಂದೂಡಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ನಾಳೆ ಪರೀಕ್ಷೆಗಳು ಇರುವುದಿಲ್ಲ.
ಆದೇಶದ ವಿವರ: ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ 6/10/2023 ಮತ್ತು 9/10/2023ರ ಅಧಿಸೂಚನೆಗಳನ್ನು ಏಕ ಸದಸ್ಯ ಪೀಠದಲ್ಲಿ ರದ್ದು ಮಾಡಲಾಗಿರುತ್ತದೆ.
ಈ ತೀರ್ಪಿನ ವಿರುದ್ಧ ಸರ್ಕಾರವು ದಿನಾಂಕ 7/3/2024 ರಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯದ ದ್ವಿಸದಸ್ಯ ಪೀಠವು ಪ್ರಕರಣವನ್ನು ಆಲಿಸಿ ಸದರಿ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಂಕನ ಮುಂದುವರೆಸಲು ತೀರ್ಪ ನೀಡಲಾಗಿರುತ್ತದೆ.
11/03/2024ರಿಂದ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಂಕನ ಕಾರ್ಯವನ್ನು ಪ್ರಾರಂಭಿಸಲಾಗಿರುತ್ತದೆ. ತದನಂತರ ಹೈಕೋರ್ಟ್ ದ್ವಿಸದಸ್ಯ ಪೀಠದ ಮಧ್ಯಂತರ ತೀರ್ಪನ್ನು ಪ್ರಶ್ನಿಸಿ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಕೋರ್ಟ್ ವಿಚಾರಣೆ ನಡೆಸಿದ್ದು, ಮಂಗಳವಾರದ ಆದೇಶದಲ್ಲಿ ಸದರಿ ಮಧ್ಯಂತರ ತೀರ್ಪನ್ನು ರದ್ದುಪಡಿಸಿರುತ್ತದೆ.
ಕೋರ್ಟ್ ಈ ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ರವಾನಿಸಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ 13/3/2024ರಿಂದ ನಡೆಯಬೇಕಾಗಿದ್ದ 5, 8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಗೊಂದಲ ಮಯವಾದ ಪರೀಕ್ಷೆಗಳು: ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವಿನ ಜಟಾಪಟಿಯ ಕಾರಣಕ್ಕೆ 5, 8 ಮತ್ತು 9ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಗೊಂದಲ ಮಯವಾಗಿವೆ. ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಹಾಗೂ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ (ಅವರ್ ಸ್ಕೂಲ್ಸ್) ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದವು.
ಈ ಅರ್ಜಿಗಳನ್ನಯ ಪುರಸ್ಕರಿಸಿದ್ದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ರವಿ ವಿ. ಹೊಸಮನಿ ಸರ್ಕಾರದ ಸುತ್ತೋಲೆಗಳನ್ನು ರದ್ದುಪಡಿಸಿ ಕಳೆದ ಬುಧವಾರ ಆದೇಶಿಸಿದ್ದರು. ಆದ್ದರಿಂದ ಮಾರ್ಚ್ 11ರಿಂದ ಆರಂಭವಾಗಬೇಕಿದ್ದ ಪರೀಕ್ಷೆಗಳು ರದ್ದಾಗಿತ್ತು.
ಏಕಸದಸ್ಯ ಪೀಠದ ಆದೇಶದ ಬಗ್ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿ ಮಾರ್ಚ್ 7ರ ಗುರುವಾರ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠವು ಏಕಸದಸ್ಯ ನ್ಯಾಯಪೀಠದ ತೀರ್ಪಿಗೆ ತಡೆಯಾಜ್ಞೆ ನೀಡಿ ಮಧ್ಯಂತರ ತೀರ್ಪು ಪ್ರಕಟಿಸಿತು. ಬೋರ್ಡ್ ಪರೀಕ್ಷೆಗೆ ಹಸಿರು ನಿಶಾನೆ ತೋರಿಸಿತು.
ಆಗ ಶಿಕ್ಷಣ ಇಲಾಖೆ ಪೂರ್ವ ನಿಗದಿಯಂತೆ 5, 8, 9ನೇ ತರಗತಿಗಳಿಗೆ ಮಾರ್ಚ್ 11ರಿಂದ ಪರೀಕ್ಷೆಗಳು ಆರಂಭವಾಗಲಿದೆ ಎಂದು ಹೇಳಿತು. ಸೋಮವಾರಿಂದ ಪರೀಕ್ಷೆಗಳು ಆರಂಭವಾಗಿವೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿರುವ ಕಾರಣ ಮಾರ್ಚ್ 13ರಿಂದ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.












Click it and Unblock the Notifications