ಅರೆಬೆತ್ತಲೆ ಚಿತ್ರ ಹಂಚಿಕೊಂಡಿದ್ದ ಆರೋಪಿಗೆ ಸಿಕ್ತು ಜಾಮೀನು
ಬೆಂಗಳೂರು, ಫೆಬ್ರವರಿ 01: ಮಣಿಪುರದಲ್ಲಿ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಹೋಲುವಂತೆ ಭಾರತಮಾತೆ ರಾಷ್ಟ್ರಧ್ವಜ ಹೊದ್ದುಕೊಂಡಿರುವ ಅರೆಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲಾತಾಣ ವಾಟ್ಸಪ್‌ನಲ್ಲಿ ಹಂಚಿಕೊಂಡಿದ್ದಆರೋಪ ಎದುರಿಸುತ್ತಿದ್ದ ಬಳ್ಳಾರಿಯ ವ್ಯಕ್ತಿಗೆ ಕೊನೆಗೂ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಇದರಿಂದಾಗಿ ಆತ ಬಂಧನ ಭೀತಿಯಿಂದ ಪಾರಾದಂತಾಗಿದೆ.
ಬಳ್ಳಾರಿ ಜಿಲ್ಲೆಯ ಸಿರುಗಪ್ಪ ತಾಲೂಕಿನ ನಿವಾಸಿ ಸಬು ಹುಸೈನ್ ಎಂಬುವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತದ ಒಂದು ವ್ಯಕ್ತಿಯ ಶ್ಯೂರಿಟಿ ನೀಡಬೇಕು. ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಜತೆಗೆ, ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು ಷರತ್ತುಗಳನ್ನು ವಿಧಿಸಿದೆ.
ವಾದ-ಪ್ರತಿವಾದ ಆಲಿಸಿ ನ್ಯಾಯಪೀಠ, ಅರ್ಜಿದಾರರು ವಾಟ್ಸಪ್ ಮೂಲಕ ತನ್ನ ಫೋನ್‌ಗೆ ಬಂದ ಸಂದೇಶವನ್ನು ಮತ್ತೊಬ್ಬರಿಗೆ ಹಂಚಿಕೊಂಡಿದ್ದಾರೆ. ಈ ಆರೋಪಕ್ಕೆ ಗರಿಷ್ಠ ಶಿಕ್ಷೆ ಕೇವಲ 3 ವರ್ಷವಾಗಿದೆ. ಜತೆಗೆ, ಯಾವುದೇ ಅಪರಾಧ ಕೃತ್ಯವೆಸಗಬೇಕು ಎಂಬ ಉದ್ದೇಶವಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿತು.
ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಯಾವುದೇ ದುರುದ್ದೇಶವಿರಲಿಲ್ಲ. ಹಂಮ್ ಸಾಥ್ ಸಾಥ್ ಹೈನ್ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಬಂದ ವಿಡಿಯೋವನ್ನು ಮತ್ತೊಬ್ಬರಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು, ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಆದ್ದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಪ್ರಕರಣದ ಹಿನ್ನೆಲೆ: ಭಾರತ ಮಾತೆಯ ಭಾವಚಿತ್ರಕ್ಕೆ ರಾಷ್ಟ್ರ ಧ್ವಜವನ್ನು ಹೊದ್ದುಕೊಂಡಿರುವ ಅರೆಬೆತ್ತಲೆ ಫೋಟೋ ಹಂಚಿಕೊಂಡಿರುತ್ತಾರೆ. ಈ ಸಂಬಂಧ ಮಾಹಿತಿ ಪಡೆದಿದ್ದ ಪೊಲೀಸರು ಅರ್ಜಿದಾರ ಆರೋಪಿಯ ವಿರುದ್ದ ಸಿರುಗುಪ್ಪ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು.
ಅಲ್ಲದೆ, ಈ ಕೃತ್ಯದಿಂದ ಸಾರ್ವಜನಿಕರ ಮನಸ್ಸು ಕೆಡಿಸುವ ಉದ್ದೇಶವಾಗಿತ್ತು ಎಂದು ಆರೋಪಿಸಿ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 67ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಹಾಗಾಗಿ ಪೊಲೀಸರರು ಆತನ ಬಂಧನಕ್ಕೆ ಬಲೆ ಬೀಸಿದ್ದರು.
ಬಂಧನದ ಭೀತಿಯಲ್ಲಿದ್ದ ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಿರುಗುಪ್ಪದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications