ಸಿಇಟಿ ಸೀಟು ಹಂಚಿಕೆ ಅಕ್ರಮ : ಸಿಐಡಿ ತನಿಖೆಗೆ

ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಆರ್ ವಿ ದೇಶಪಾಂಡೆ, ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯಲ್ಲಿ ವ್ಯಾಪಕ ಅವ್ಯವಹಾರ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಕಳೆದ ವರ್ಷದ ಸಿಇಟಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಕೋಟಾ ಬದಲಿಸಿ ಮೆಡಿಕಲ್ ಸೀಟು ಒದಗಿಸಿದ ಪ್ರಕರಣ ಬಯಲಿಗೆ ಬಂದಿದೆ.
ಈ ಹಿನ್ನಲೆಯಲ್ಲಿ ಅವ್ಯವಹಾರದ ತನಿಖೆಯನ್ನು ಸಿಐಡಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 2013-14 ನೇ ಸಾಲಿನ ಅವ್ಯವಹಾರ ತನಿಖೆಯನ್ನು ಮಾತ್ರ ವಹಿಸಬೇಕೇ ಅಥವಾ ಅದರ ಹಿಂದಿನ ವರ್ಷಗಳ ಪ್ರಕರಣಗಳನ್ನು ವಹಿಸಬೇಕೇ ಎಂಬ ಬಗ್ಗೆ ಸರ್ಕಾರ ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಸಿಇಟಿ ನಿಯಮಾವಳಿ 7ರ ಪ್ರಕಾರ ಜಾತಿ ಪ್ರಮಾಣ ಪತ್ರವನ್ನು 2ನೇ ಬಾರಿ ಪರಿಶೀಲನೆ ಮಾಡಲು ಅವಕಾಶವಿಲ್ಲ. ಆದರೆ ಮೇ 24ರಂದು 120 ವಿದ್ಯಾರ್ಥಿಗಳು 2ನೇ ಬಾರಿ ಜಾತಿ ಪ್ರಮಾಣಪತ್ರ ಪರಿಶೀಲನೆ ಮಾಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 91 ಮಂದಿ ಅಭ್ಯರ್ಥಿಗಳ ಜಾತಿ ಪ್ರಮಾಣಪತ್ರವನ್ನು ಪರಿಶೀಲನೆ ಮಾಡಿದಾಗ 70 ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರ ಬದಲಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ವಿವರಣೆ ಕೇಳಿ, ತಹಶೀಲ್ದಾರ್, ಕಾಲೇಜಿನ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಸಚಿವ ದೇಶಪಾಂಡೆ ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಸಿಇಟಿ ಆಡಳಿತಾಧಿಕಾರಿ ಕುಲಕರ್ಣಿ ಅವರನ್ನು ಅಮಾನತು ಮಾಡಲಾಗಿದೆ. 2009ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಆಮೇಲೆ ಬೇರೆ ಕಡೆಗೆ ವರ್ಗವಾಗಿದ್ದರು. ಮತ್ತೆ 2012ರಲ್ಲಿ ಕುಲಕರ್ಣಿ ಅವರು ಸಿಇಟಿ ಆಡಳಿತಾಧಿಕಾರಿಯಾಗಿ ನೇಮಕ ಗೊಂಡಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಯಲಿದೆ ಎಂದರು.












Click it and Unblock the Notifications