ಚಿತ್ರದುರ್ಗ ಬಸ್ ಅಪಘಾತ: 5 ವರ್ಷದ ಮಗು ಸೇರಿ 5 ಸಾವು, ಅಪಘಾತಕ್ಕೆ ಕಾರಣ ಬಹಿರಂಗ
ಚಿತ್ರದುರ್ಗ: ಕರ್ನಾಟಕದಲ್ಲಿ ಗುರುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಗ್ರಾಮದ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದಿತ್ತು. ಇದೀಗ ಈ ಅಪಘಾತಕ್ಕೆ ಕಾರಣವೇನು, ಅಪಘಾತದಲ್ಲಿ ಯಾರೆಲ್ಲಾ ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡವರು ಯಾರು ಎನ್ನುವ ಬಗ್ಗೆ ಚಿತ್ರದುರ್ಗದ ಹಿರಿಯೂರು ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ಈ ದುರಂತದಲ್ಲಿ ಐದು ವರ್ಷದ ಮಗು ಸೇರಿದಂತೆ ಒಟ್ಟು 5 ಜನ ಮೃತಪಟ್ಟಿದ್ದು, 28 ಜನ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಒಳಗಾದ ಬಸ್ ಸೀಬರ್ಡ್ ಟೂರಿಸ್ಟ್‌ಗೆ ಸೇರಿದ್ದು ಬಸ್‌ನಲ್ಲಿ ಒಟ್ಟು 33 ಜನ ಪ್ರಯಾಣಿಕರು ಇದ್ದರು. ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಎಲ್ಲರಿಗೂ ಗಾಯಗಳಾಗಿವೆ. ಕೆಲವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

ಘಟನೆಯ ಹಿನ್ನೆಲೆ ಏನು
ಡಿಸೆಂಬರ್ 25ರ ಬೆಳಗಿನ ಜಾವ 2ಗಂಟೆ ಸಮಯದಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎನ್.ಎಚ್ 48 ರಸ್ತೆಯಲ್ಲಿ ಹಿರಿಯೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ HR - 38 - AB -3455 ಸಂಖ್ಯೆಯ ಕಂಟೈನರ್ ಲಾರಿಯ ಚಾಲಕ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಡಿವೈಡರ್‌ಗೆ ಗುದ್ದಿದ್ದಾನೆ.
ಇದೇ ಸಮಯದಲ್ಲಿ ಬೆಂಗಳೂರಿನಿಂದ ಹಿರಿಯೂರು ಮಾರ್ಗವಾಗಿ ಗೋಕರ್ಣಕ್ಕೆ ಹೋಗುತ್ತಿದ್ದ KA - 01-AE - 5217ನ ಸ್ಲೀಪರ್ ಕೋಚ್ ಬಸ್ಸಿಗೆ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಸಂಪೂರ್ಣ ಸುಟ್ಟು ಹೋಗಿದೆ. ಅಲ್ಲದೇ ಲಾರಿಗೂ ಸಹ ಬೆಂಕಿ ಹತ್ತಿ ಲಾರಿ ಚಾಲಕ ಸಹ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ 5 ಜನ ಸಾವು
ಇನ್ನು ಈ ಅಪಘಾತದಲ್ಲಿ ಐದು ಜನ ಮೃತಪಟ್ಟಿದ್ದಾರೆ. ಅಪಘಾತವಾದ ಬಸ್‌ನಿಂದ ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳ ಸಹಾಯದಿಂದ ಮೃತದೇಹಗಳನ್ನು ಹೊರತಗೆಯಲಾಗಿದ್ದು, ಐದು ಮೃತದೇಹಗಳು ಸುಟ್ಟು ಕರಕಲಾಗಿರುವುದರಿಂದ ಸಂಬಂಧಿಕರನ್ನು ಪತ್ತೆ ಮಾಡಿ, ಡಿಎನ್‌ಎ ಸಹಾಯದಿಂದ ಮೃತದೇಹಗಳನ್ನು ಗುರುತಿಸಬೇಕಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತಪಟ್ಟವರ ವಿವರ
ಬಿಂದು, ಗ್ರೇಯ (05 ವರ್ಷ - ಬಿಂದು ಅವರ ಮಗಳು), ಮಾನಸ, ನವ್ಯ ಹಾಗೂ ರಶ್ಮಿ ಮಹಲೆ ಎನ್ನುವವರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಇನ್ನು ಅಪಘಾತದಲ್ಲಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಿರಿಯೂರು ಸರ್ಕಾರಿ ಆಸ್ಪತ್ರೆ, ಶಿರಾ ಸರ್ಕಾರಿ ಆಸ್ಪತ್ರೆ, ಶಿರಾ ಖಾಸಗಿ ಆಸ್ಪತ್ರೆ ಹಾಗೂ ತುಮಕೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಇನ್ನುಳಿದ 25 ಜನರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ.












Click it and Unblock the Notifications