ಉಪ ಚುನಾವಣೆ : ಮೈತ್ರಿ ಸರ್ಕಾರಕ್ಕೆ ಆಗುವ 5 ಲಾಭಗಳು
Recommended Video
ಬೆಂಗಳೂರು, ಏಪ್ರಿಲ್ 30 : ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಕರ್ನಾಟಕದ ಮೈತ್ರಿಕೂಟದ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆಯಾಗಿದೆ.
ಮೇ 19ರಂದು ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ. ಲೋಕಸಭಾ ಚುನಾವಣೆ ಫಲಿತಾಂಶದ ಜೊತೆಗೆ ಉಪ ಚುನಾವಣೆ ಫಲಿತಾಂಶವೂ ಬರಲಿದೆ.
ಉಪ ಚುನಾವಣೆ ಕದನ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದು, ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ.
ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರ. ಸಿ.ಎಸ್.ಶಿವಳ್ಳಿ ಅವರ ನಿಧನದಿಂದಾಗಿ ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು....

ಮೈತ್ರಿಕೂಟಕ್ಕೆ ಬಲ
ಸಿ.ಎಸ್.ಶಿವಳ್ಳಿ ಅವರ ನಿಧನ ಮತ್ತು ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ 2 ಸ್ಥಾನಗಳ ಕೊರತೆ ಉಂಟಾಗಿದೆ. ವಿಧಾನಸಭೆಯ ಬಲ 222ಕ್ಕೆ ಕುಸಿದಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ ಮೈತ್ರಿಕೂಟಕ್ಕೆ 2 ಸ್ಥಾನಗಳು ಸಿಗಲಿವೆ.

ಆಪರೇಷನ್ ಕಮಲಕ್ಕೆ ತಡೆ
ಒಂದು ವೇಳೆ ಎರಡು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಲ್ಲಿ ಪ್ರತಿಪಕ್ಷ ಬಿಜೆಪಿಗೆ ಬಾರಿ ಹಿನ್ನಡೆ ಉಂಟಾಗಲಿದೆ. ಮೈತ್ರಿಕೂಟದ ಸಂಖ್ಯಾಬಲ ಹೆಚ್ಚಲಿದ್ದು, 104 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಒಂದು ವೇಳೆ ಸರ್ಕಾರ ರಚನೆ ಮಾಡಬೇಕಾದರೆ ಮ್ಯಾಜಿಕ್ ನಂಬರ್ ಪಡೆಯಲು ಬಾರಿ ಪರಿಶ್ರಮ ಪಡಬೇಕಾಗುತ್ತದೆ. ಆಪರೇಷನ್ ಕಮಲಕ್ಕೆ ಶಾಶ್ವತ ತಡೆ ಬೀಳುವ ಸಾಧ್ಯತೆಯೂ ಇದೆ.

ಪ್ರತಿಪಕ್ಷದ ವಿರುದ್ಧ ದೊಡ್ಡ ಗೆಲುವು
ಎರಡೂ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಸಾಧಿಸಿದರೆ ಪ್ರತಿಪಕ್ಷದ ವಿರುದ್ಧ ದೊಡ್ಡ ಗೆಲುವು ಸಿಕ್ಕಿದಂತಾಗುತ್ತದೆ. ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಉಮೇಶ್ ಜಾಧವ್ ಅವರ ರಾಜೀನಾಮೆ ಕೊಡಿಸಿ ಅವರನ್ನು ಬಿಜೆಪಿ ಲೋಕಸಭಾ ಕಣಕ್ಕಿಳಿಸಿತ್ತು. ಉಪ ಚುನಾವಣೆಯಲ್ಲಿ ಅಭ್ಯರ್ಥಿ ಸೋತರೆ ಪಕ್ಷಕ್ಕೆ ಮುಖಭಂಗವಾಗಲಿದೆ.

ಮೈತ್ರಿ ಸರ್ಕಾರಕ್ಕೆ ಜನ ಬೆಂಬಲ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಜನರ ಬೆಂಬಲ ಇಲ್ಲ ಎಂದು ಪ್ರತಿಪಕ್ಷ ಬಿಜೆಪಿ ಆರೋಪ ಮಾಡುತ್ತಿದೆ. ಉಪ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಜಯ ಸಿಕ್ಕರೆ ಸರ್ಕಾರಕ್ಕೆ ಜನ ಬೆಂಬಲವಿದೆ ಎನ್ನುವುದು ಸಾಬೀತಾಗಲಿದೆ. ಮೈತ್ರಿಕೂಟದ ಬಲ ಮತ್ತಷ್ಟು ಹೆಚ್ಚಲಿದೆ.

ಸರ್ಕಾರ ಸ್ಥಿರವಾಗುತ್ತದೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿವೆ. ಉಪ ಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಗೆದ್ದರೆ ಮೈತ್ರಿಕೂಟದ ಬಲ ಹೆಚ್ಚಲಿದೆ. ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ. ಅಸಮಾಧಾನಗೊಂಡಿರುವ ಶಾಸಕರು ಸಹ ಬಂಡಾಯ ಚಟುವಟಿಕೆ ನಿಲ್ಲಿಸಿ ಸರ್ಕಾರದ ಜೊತೆ ಇರುವ ನಿರೀಕ್ಷೆ ಇದೆ.












Click it and Unblock the Notifications