ನೀರಿನ ಕನಸು ನನಸು, ಅಂತಿಮ ಹಂತದಲ್ಲಿ ಚಿಮ್ಮಲಗಿ ನೀರಾವರಿ ಯೋಜನೆ
ವಿಜಯಪುರ, ಸೆಪ್ಟೆಂಬರ್ 04 : ಚಿಮ್ಮಲಗಿ ಏತ ನೀರಾವರಿ ಯೋಜನೆ ಅಂತಿಮ ಹಂತಕ್ಕೆ ತಲುಪಿದೆ. ಯೋಜನೆ ಪೂರ್ಣಗೊಂಡಲ್ಲಿ ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ ಜನರ ಬಹುದಿನದ ಕನಸು ನನಸಾಗಲಿದೆ.
22 ಕೆರೆಗಳನ್ನು ತುಂಬಿಸುವ ಮತ್ತು 2.15 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ವ್ಯವಸ್ಥೆ ಒದಗಿಸುವ ಮಹತ್ವದ ಯೋಜನೆ ಇದಾಗಿದೆ. 2016ರ ಮೇ ತಿಂಗಳಿನಲ್ಲಿ ಈ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂ ಸ್ವಾಧೀನದ ಅಡಚಣೆ ಕಾರಣ ಕಾಮಗಾರಿ ವಿಳಂಬವಾಗಿದೆ.
ವಿಜಯಪುರ ಜಿಲ್ಲೆಯ 5 ತಾಲೂಕು ಹಾಗೂ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಲವು ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ. ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, 2017ರ ಅಕ್ಟೋಬರ್‌ನಲ್ಲಿ 22 ಕೆರೆಗಳಿಗೂ ನೀರು ಹರಿಸಲು ಉದ್ದೇಶಿಸಲಾಗಿದೆ.
'ಯೋಜನೆ ಅನ್ವಯ ಪ್ರಾಯೋಗಿಕವಾಗಿ 10 ಕೆರೆಗಳಿಗೆ ನೀರು ತುಂಬಿಸಲಾಗಿದೆ. 2-3 ತಿಂಗಳುಗಳಲ್ಲಿ ಯೋಜಿಸಿರುವ ಎಲ್ಲಾ 22 ಕೆರೆಗಳಿಗೆ ನೀರು ತುಂಬಿಸಲಾಗುವುದು. ಕೆರೆಗಳಿಗೆ ನೀರು ತುಂಬಿದರೆ ಈ ಭಾಗದ ಜನ ಬೇಸಿಗೆಯಲ್ಲಿ ಎದುರಿಸುತ್ತಿದ್ದ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ' ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ್ ಹೇಳಿದ್ದಾರೆ...

5 ತಾಲೂಕುಗಳಿಗೆ ನೀರು
ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಸಿಂಧಗಿ, ಬಸವನಬಾಗೇವಾಡಿ, ಇಂಡಿ ತಾಲೂಕು ಮತ್ತು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕುಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. 22 ಕೆರೆ ತುಂಬಿಸುವ ಮತ್ತು 2.15 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ವ್ಯವಸ್ಥೆ ಒದಗಿಸುವ ಯೋಜನೆ ಇದಾಗಿದೆ.

ಭರದಿಂದ ಸಾಗಿದೆ ಕಾಮಗಾರಿ
ಆಲಮಟ್ಟಿ ಬಲದಂಡೆ ಕಾಲುವೆ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ. ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 137 ಕಿ.ಮೀ. ವರೆಗಿನ ಪೂರ್ವ ಕಾಲುವೆ ಕಾಮಗಾರಿ ಮುಗಿಸಿ ನೀರು ಹರಿಸುವ ಗುರಿಯನ್ನು ಹೊಂದಲಾಗಿದೆ.

2016ರಲ್ಲಿ ಮುಗಿಯಬೇಕಿತ್ತು
ನಿಗದಿಯಂತೆ ಚಿಮ್ಮಲಗಿ ಏತ ನೀರಾವರಿ ಯೋಜನೆ 2016ರ ಮೇ ತಿಂಗಳಿನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂ ಸ್ವಾಧೀನ ವಿಚಾರದಲ್ಲಿ ಅಡಚಣೆ ಉಂಟಾದ ಕಾರಣ ಕಾಮಗಾರಿ ವಿಳಂಬವಾಗಿದೆ. ಆಲಮಟ್ಟಿ ನಾಲೆಯಿಂದ ನೀರು ಎತ್ತಲು 2300 ಕಿ.ವ್ಯಾ ಸಾಮರ್ಥ್ಯದ 8 ಮೋಟಾರ್‌ಗಳನ್ನು ಅಳವಡಿಸಲಾಗಿದೆ.

167 ಹಳ್ಳಿಗಳು
167 ಹಳ್ಳಿಗಳನ್ನು ಈ ನೀರಾವರಿ ಯೋಜನೆ ಒಳಗೊಂಡಿದೆ. 137.16 ಕಿ.ಮೀ. ಪೂರ್ವ ಕಾಲುವೆ ಕಾಮಗಾರಿಗಳು ಹಾಗೂ ನಾಗಠಾಣಾ ಮತ್ತು ಕೋರವಾರ ಶಾಖಾ ಕಾಲುವೆಗಳ ಕಾಮಗಾರಿ ಚುರುಕಿನಿಂದ ಸಾಗಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಈ ಕಾಲುವೆಗೆ ನೀರು ಹರಿಸಲು ಉದ್ದೇಶಿಸಲಾಗಿದೆ.

'ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇಲ್ಲ'
ಚಿಮ್ಮಲಗಿ ಏತ ನೀರಾವರಿ ಯೋಜನೆ ಪೂರ್ಣಗೊಂಡು ಕೆರೆಗಳಿಗೆ ನೀರು ತುಂಬಿದರೆ, ಈ ಭಾಗದ ಜನ ಬೇಸಿಗೆಯಲ್ಲಿ ಎದುರಿಸುತ್ತಿದ್ದ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ' ಎಂದು ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ್ ಹೇಳಿದ್ದಾರೆ.












Click it and Unblock the Notifications