ಮಕ್ಕಳ ಸುಪರ್ದಿಗೆ ಮಗು ನೆಲೆಸಿದ ವ್ಯಾಪ್ತಿ ಕೋರ್ಟ್‌ನಲ್ಲೇ ಅರ್ಜಿ ಹಾಕಿ
ಬೆಂಗಳೂರು, ಮೇ 18: ಮಕ್ಕಳ ಸುಪರ್ದಿಗೆ ಕೋರುವ ಅರ್ಜಿಗಳನ್ನು ಮಗು ನೆಲೆಸಿಸುವ ಪ್ರದೇಶದ ವ್ಯಾಪ್ತಿಯ ನ್ಯಾಯಾಲಯದಲ್ಲಿ ಮಾತ್ರ ಸಲ್ಲಿಸಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸ್ನ ಅವರ ಏಕಸದಸ್ಯಪೀಠ ಚಾಮರಾಜನಗರ ಜಿಲ್ಲೆ ನಿವಾಸಿಗಳಾದ ಸಮೀವುಲ್ಲಾ ಮತ್ತು ಮುಬೀನ್ ತಾಜ್ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ಮಾಡಿದೆ. ಹೈಕೋರ್ಟ್, ಮಗು ಚಾಮರಾಜನಗರ ಜಿಲ್ಲೆಯಲ್ಲಿ ನೆಲೆಸಿರುವ ಕಾರಣ, ಸಂಬಂಧಪಟ್ಟ ಸ್ಥಳೀಯ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಬೇಕಿದೆ.
ಮೈಸೂರಿನ ಕೌಟುಂಬಿಕ ನ್ಯಾಯಾಲಯವು ಮಗುವಿನ ತಂದೆಯ ಅರ್ಜಿಯನ್ನು ವಿಚಾರಣೆ ನಡೆಸಲು ಪ್ರಾದೇಶಿಕ ವ್ಯಾಪ್ತಿ ಹೊಂದಿಲ್ಲ ಎಂದು ನ್ಯಾಯಪೀಠ ತೀರ್ಮಾನಿಸಿದೆ. ಅಂತಿಮವಾಗಿ ಮೈಸೂರು ನ್ಯಾಯಾಲಯದ ಆದೇಶ ರದ್ದುಪಡಿಸಿ, ಮಗು ನೆಲೆಸಿರುವ ಪ್ರದೇಶ ವ್ಯಾಪ್ತಿಯ ನ್ಯಾಯಾಲಯಕ್ಕೆ ತಂದೆ ಅರ್ಜಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದಲ್ಲಿ ಅರ್ಜಿದಾರರ ಮೊಮ್ಮಗು ಚಾಮರಾಜನಗರದಲ್ಲಿ ನೆಲೆಸಿದೆ. ಮಗುವಿನ ಸುಪರ್ದಿ ಕೋರಿ ತಂದೆ ಮೈಸೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರಿಂಕೋರ್ಟ್ ತೀರ್ಪು ಪ್ರಕಾರ ಮಗುವಿನ ಸುಪರ್ದಿಗೆ ಕೋರಿ ಎಲ್ಲೆಂದರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮಗು ನೆಲೆಸಿರುವ ವ್ಯಾಪ್ತಿಯ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅದರಂತೆ ತಂದೆಯು ಚಾಮರಾಮನಗರದ ಸಂಬಂಧಪಟ್ಟ ನ್ಯಾಯಾಲಯಲ್ಲಿಯೇ ಮಗುವಿನ ಸುಪರ್ದಿಗೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಮಗುವಿನ ಅಜ್ಜಿ-ತಾತನ ಪರ ವಕೀಲರು, ಅರ್ಜಿದಾರರೊಂದಿಗೆ ಮಗು ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ನೆಲೆಸಿದೆ. ಮಗುವಿನ ತಂದೆ ಮೈಸೂರಿನ ನಿವಾಸಿ. ಮಗುವಿನ ಸುಪರ್ದಿಗೆ ಕೋರುವ ಅರ್ಜಿಯನ್ನು ಮಗು ನೆಲೆಸಿರುವ ಪ್ರದೇಶ ವ್ಯಾಪ್ತಿಯ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಅದು ಬಿಟ್ಟು ಸಂಬಂಧಿಗಳು, ತಂದೆ ಅಥವಾ ತಾಯಿ ನೆಲೆಸಿರುವ ವ್ಯಾಪ್ತಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತಿಲ್ಲಎಂದು ವಾದ ಮಂಡಿಸಿದರು.
ಈ ವಾದ ಆಕ್ಷೇಪಿಸಿದ ಪ್ರತಿವಾದಿಯಾದ ಮಗುವಿನ ತಂದೆ ಪರ ವಕೀಲರು, ಪ್ರತಿವಾದಿ ಮೈಸೂರಿನ ನಿವಾಸಿ. ಅವರ ಪತ್ನಿ ಸಾವನ್ನಪ್ಪಿದ ನಂತರ ಮಗು ಅರ್ಜಿದಾರರ ಸುಪರ್ದಿಯಲ್ಲಿದೆ. ಹಾಗಾಗಿ ಮಗುವಿನ ಸುಪರ್ದಿಗಾಗಿ ಮೈಸೂರಿನ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದು ಸೂಕ್ತವಾಗಿದೆ. ಚಾಮರಾಜನಗರ ಕೋರ್ಟ್‌ಗೆ ವರ್ಗಾಯಿಸಬೇಕು ಎಂಬ ಅರ್ಜಿದಾರರ ವಾದ ತಿರಸ್ಕರಿಸಿದ ಅಧೀನ ನ್ಯಾಯಾಲಯದ ನ್ಯಾಯೋಚಿತವಾಗಿದೆ ಎಂದು ಪ್ರತಿವಾದಿಸಿದ್ದರು.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಪುತ್ರಿ ಮೊಹಮ್ಮದ್ ಸಮೀರ್ (ಮಗುವಿನ ತಂದೆ) ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಮಗು ಜನಿಸಿತ್ತು. ಅರ್ಜಿದಾರರ ಪುತ್ರಿ 2021 ಮೇ 6ರಂದು ನಿಧನರಾಗಿದ್ದರು. ಇದರಿಂದ ಮೊಮ್ಮಗುವನ್ನು ತಮ್ಮ ಬಳಿಯೇ ಅರ್ಜಿದಾರರು ಇರಿಸಿಕೊಂಡಿದ್ದರು. ಮಗು ಮತ್ತು ಅರ್ಜಿದಾರರು ಚಾಮರಾಜನಗರದಲ್ಲಿ ನೆಲೆಸಿದ್ದಾರೆ.
ಈ ನಡುವೆ ಮಗುವಿನ ಸುಪರ್ದಿಯನ್ನು ತನಗೆ ಒಪ್ಪಿಸಲು ಆದೇಶಿಸಬೇಕು ಎಂದು ಕೋರಿ ತಂದೆ, 2021ರ ಡಿ.21ರಂದು ಮೈಸೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಚಾಮರಾಜನಗರ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಕೋರಿ ಅರ್ಜಿದಾರರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಿ ಮೈಸೂರಿನ 3ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2023ರ ಫೆ.3ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications