ಗರ್ಭದಲ್ಲಿದ್ದಾಗಲೇ ಮಗು ದತ್ತು ಒಪ್ಪಂದ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 11; ಮಗು ಹುಟ್ಟಿದ ನಂತರ ದತ್ತು ತೆಗೆದುಕೊಳ್ಳುವ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣವಿದೆ, ಅದರಲ್ಲಿ ಮಗು ಹುಟ್ಟುವ ಮುನ್ನವೇ ದತ್ತು ತೆಗೆದುಕೊಳ್ಳುವ ಒಪ್ಪಂದ ಏರ್ಪಟ್ಟಿದೆ. ಹಾಗಾಗಿ ಅದು ಕಾನೂನು ಬಾಹಿರವೆಂದು ನ್ಯಾಯಾಲಯ ಹೇಳಿದೆ. ಮಗುವಿಗೆ ಜನ್ಮ ನೀಡುವುದಕ್ಕೂ ಮುನ್ನವೇ ದತ್ತು ಸ್ವೀಕಾರಕ್ಕಾಗಿ ಅನ್ಯಧರ್ಮೀಯ ಇಬ್ಬರು ದಂಪತಿಗಳು ಮಾಡಿಕೊಂಡಿದ್ದ ಒಪ್ಪಂದವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಅಲ್ಲದೆ, ಮೊಹಮ್ಮದೀಯ ಕಾನೂನಿನ ತತ್ವಗಳ ಅಡಿಯಲ್ಲಿಯೂ ಸಹ ಈ ರೀತಿಯ ಒಪ್ಪಂದಕ್ಕೆ ಅವಕಾಶವಿಲ್ಲ. ಹಿಂದೂ ಸಮುದಾಯಕ್ಕೆ ಸೇರಿದವರು ಮಗುವನ್ನು ಮುಸ್ಲಿಂ ಸಮುದಾಯದ ದಂಪತಿಗೆ ದತ್ತು ನೀಡುವುದಕ್ಕೆ ಅಂಗೀಕಾರಾರ್ಹವಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಇಂತಹ ಘಟನೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ನ್ಯಾಯಾಲಯ, ಇದು ಹಣಕ್ಕಾಗಿ ಮಗುವನ್ನು ದತ್ತು ಪಡಿಯುವ ಪ್ರಕರಣವಾಗಿದ್ದು, ಈ ರೀತಿಯ ಒಪ್ಪಂದಗಳಿಗೆ ಕಾನೂನಿಯಲ್ಲಿ ಅವಕಾಶವಿಲ್ಲ ಎಂದು ಆದೇಶಿಸಿದೆ.

ಸುಮಾರು ಎರಡು ವರ್ಷ ಮತ್ತು ಒಂಬತ್ತು ತಿಂಗಳ ಹೆಣ್ಣು ಮಗುವಿನ ಮಗುವಿನ ಪೋಷಣೆಯ ಹಕ್ಕು ನೀಡುವಂತೆ ಕೋರಿ ದತ್ತು ಪಡೆದ ಪೋಷಕರು (ಮುಸ್ಲಿಂ ಧರ್ಮಿಯರು) ಮತ್ತು ಮಗುವಿನ ತಂದೆ ತಾಯಿ (ಹಿಂದೂ ಧರ್ಮಿಯರು) ಜಂಟಿಯಾಗಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯದ ವಜಾಗೊಳಿಸಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಇಬ್ಬರೂ ಪೋಷಕರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಹೇಮಲೇಖ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ 2015ರ ಪ್ರಕಾರ ಪಾಲಕರು ಆರ್ಥಿಕವಾಗಿ ಸದೃಢರಾಗಿರದಿದ್ದರೆ ಮಗುವಿನ ಪೋಷಣೆಗೆ ಸಾಕಷ್ಟು ಅವಕಾಶಗಳಿವೆ. ಜತೆಗೆ, ಮಗುವನ್ನು ಅಕ್ರಮವಾಗಿ ಹಣಕ್ಕಾಗಿ ಹಸ್ತಾಂತರ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ದತ್ತುನೀಡಿರುವ ಮತ್ತು ದತ್ತು ಸ್ವೀಕರಿಸಿರುವ ಆರೋಪಿಗಳ (ಅರ್ಜಿದಾರರು) ವಿರುದ್ಧ ಉಡುಪಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ಡಿಸಿಪಿಯು) ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ನಿಜವಾದ ತಂದೆ ಹಾಗೂ ತಾಯಿ ಮಗುವನ್ನು ಹಿಂಪಡೆಯಲು ಇಚ್ಚಿಸಿದಲ್ಲಿ ಅಂತಹ ಮನವಿಯನ್ನು ಪರಿಗಣಿಸಿ ಕಾನೂನಿನ ಪ್ರಕಾರ ಮಕ್ಕಳ ಕಲ್ಯಾಣ ಸಮಿತಿ ಕ್ರಮ ಕೈಗೊಳ್ಳಬಹುದಾಗಿದೆ. ಜತೆಗೆ, ಮಗುವನ್ನು ಬೇರೆಯವರಿಗೆ ಮಾರಾಟ ಮಾಡದಂತೆ ನೋಡಿಕೊಳ್ಳಲು ಅಧಿಕಾರಿಗಳು ದಂಪತಿಯ ಚಟುವಟಿಕೆಗಳನ್ನು ಪರಿಶೀಲಿಸುತ್ತಿರಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಮಗುವಿನ ಪೋಷಕರು ಬಡತನದಿಂದ ಮಗುವನ್ನು ಪೋಷಣೆ ಮಾಡುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ 2020ರ ಮಾರ್ಚ್ 21 ಎಂದು ದತ್ತು ಸ್ವೀಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದಾದ ಕೆಲ ದಿನಗಳ ಬಳಿಕ 2020ರ ಮಾರ್ಚ್ 26 ರಂದು ಮಗು ಜನಿಸಿತ್ತು. ಈ ಸಂಬಂಧ ಉಡುಪಿ ಜಿಲ್ಲೆಯ ಡಿಸಿಪಿಯು 2021 ರಲ್ಲಿ ದೂರು ದಾಖಲಿಸಿಕೊಂಡಿತ್ತು. ಅಲ್ಲದೆ, ಮಗುವನ್ನು ವಶಕ್ಕೆ ಪಡೆದು ಮಕ್ಕಳ ಆರೈಕೆ ಘಟಕಕ್ಕೆ ನೀಡಲಾಗಿತ್ತು.

ಈ ನಡುವೆ ದತ್ತು ಪಡೆದ ಪೋಷಕರು ಮಗುವಿನ ಪಾಲನೆಗಾಗಿ ಮಗುವಿನ ಪಾಲಕರು ಎಂದು ಘೋಷಿಸಲು ಕೋರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಮಗುವಿನ ತಂದೆ ಹಾಗೂ ತಾಯಿ ಬೆಂಬಲಿಸಿದ್ದರು. ಆದರೆ, ಜಿಲ್ಲಾ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು.
ಎರಡನೇ ಬಾರಿ ಡಿಎನ್‌ಎ ಪರೀಕ್ಷೆಗೆ ನಕಾರ: ಪತ್ನಿಯ ನಡೆತೆಯ ಕುರಿತು ಸಂಶಯ ಪಟ್ಟ ತನ್ನ ಮಗುವಿಗೆ ಎರಡನೇ ಬಾರಿ ಡಿಎನ್‌ಎ ಪರೀಕ್ಷೆ ನಡೆಸಲು ಅನುಮತಿ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯ ವಜಾಗೊಳಿಸಿರುವ ಹೈಕೋರ್ಟ್, ಇದು ಹೆಂಡತಿ ಮತ್ತು ಮಕ್ಕಳ ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ತಂತ್ರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಡಿಎನ್‌ಎ ಮಾದರಿಗಳನ್ನು ಎರಡನೇ ಬಾರಿಗೆ ಎಫ್‌ಎಸ್‌ಎಲ್ ಪರೀಕ್ಷೆಗಾಗಿ ಹೈದ್ರಾಬಾದ್‌ಗೆ ರವಾನಿಸುವುದಕ್ಕಾಗಿ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಮನವಿಯನ್ನು ತಿರಸ್ಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಅರ್ಹ ವೈದ್ಯರಿಂದ ಪರೀಕ್ಷೆಗೊಳಪಡಿಸಿ, ಅದರ ನಿರ್ದೇಶಕರು ಅನುಮೋದಿಸಿರುತ್ತಾರೆ. ಹೀಗಾಗಿ ಎರಡನೇ ಬಾರಿಗೆ ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕಾದ ಅಗತ ಉದ್ಭವಿಸುವುದಿಲ್ಲ ಎಂದು ತಿಳಿಸಿದೆ.












Click it and Unblock the Notifications