Karnataka Assembly: ಬಿಟ್ ಕಾಯಿನ್ ,ಕೋವಿಡ್, ಪಿಎಸ್ಐ ಅಕ್ರಮ ತನಿಖೆ ಶುರು; ಬಿಜೆಪಿಯವರಿಗೆ ಭಯ : ಸಿದ್ದರಾಮಯ್ಯ
ಬೆಂಗಳೂರು,ಜುಲೈ 20: ಬಿಜೆಪಿ ಅವಧಿಯಲ್ಲಿ ನಡೆದ ಬಿಟ್ ಕಾಯಿನ್ ,ಕೋವಿಡ್ ಹಗರಣ ಹಾಗೂ ಪಿಎಸ್ಐ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ಶುರು ಮಾಡುತ್ತೇವೆ. ಈಗಾಗಲೇ ಬಿಜೆಪಿಯವರಿಗೆ ಭಯ ಶುರುವಾಗಿ ಬಿಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಗುರುವಾರ ಬಜೆಟ್ ಮೇಲಿನ ಉತ್ತರದ ವೇಳೆ ಮಾತನಾಡಿದ ಅವರು, ರಾಜ್ಯವನ್ನು ಬಿಜೆಪಿಯವರು ಹಾಳು ಮಾಡಿ ಇಟ್ಟಿದ್ದಾರೆ. ಎಲ್ಲ ತನಿಖೆ ಶುರು ಮಾಡಿದ್ದೇವೆ. ಬಸವರಾಜ ಬೊಮ್ಮಾಯಿ ಹೇಳ್ತಾರೆ 2013ರಿಂದ ತನಿಖೆ ಮಾಡಲಿ ಅಂತಾ. ಯಾವುದಾದರೂ ಹಗರಣ ಇದ್ದರೆ ಅದು ಬಿಜೆಪಿ ಯವರ ಕಾಲದಲ್ಲಿ ಮಾತ್ರ. ಅದಕ್ಕಾಗಿ ನಮಗೆ ಈ ಬಾರಿ ಹೆಚ್ಚು ಸೀಟನ್ನ ಜನತೆ ಕೊಟ್ಟಿದ್ದಾರೆ.

ನಮ್ಮ ಬಜೆಟ್ ವಿರೋಧ ಮಾಡೋಕೆ ನಿಮಗೆ ನಾಚಿಕೆ ಆಗಲ್ವಾ.? ಇವರ ಕಾಲದಲ್ಲಿ ಏನು ಕೆಲಸಗಳು ಆಗಿವೆ..? ಎಸ್ ಸಿ ಹಾಗೂ ಎಸ್ ಟಿ ಗೆ ಕಾನೂನು ತಂದಿದ್ದು ನಾವು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರದ ಖರ್ಚಿನ ವಿವರಣೆ ನೀಡಿ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.
ಬಡವರ ಅನ್ನಕ್ಕೆ ಬಿಜೆಪಿಯವರು ಕಲ್ಲು ಹಾಕಿದ್ದಾರೆ
ಇನ್ನೂ ಅನ್ನಭಾಗ್ಯಕ್ಕೆ ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದುಡ್ಡು ಕೊಡ್ತೀನಿ ಅಂದ್ರು ಅಕ್ಕಿ ಯನ್ನು ಕೇಂದ್ರದವರು ಕೊಟ್ಟಿಲ್ಲ. ಮಾತು ಕೊಟ್ಟಿದ್ದೇವೆ ಅಂತಾ ಅಕ್ಕಿ ಬದಲು ಹಣ ಕೊಡಲು ನಿರ್ಧಾರ ಮಾಡಿದ್ದೇವೆ. ಇವರು ಬಡವರ ಪರವಾಗಿ ಮಾತನಾಡುತ್ತಾರೆ. ಇವರು ಬೇಕು ಅಂತಾನೇ ಅಕ್ಕಿ ಕೊಡುವುದನ್ನ ತಪ್ಲಿಸಿದ್ದಾರೆ. ಬಡವರ ಅನ್ನಕ್ಕೆ ಬಿಜೆಪಿ ಯವರು ಕಲ್ಲು ಹಾಕಿದ್ದಾರೆ.
ಕೇಂದ್ರ ಸರ್ಕಾರ ಅಕ್ಕಿ ಇಟ್ಟುಕೊಂಡು ಕೊಡಲಿಲ್ಲ. ಆದರೆ, ನಾವು ಎದೆಗುಂದಲಿಲ್ಲ ಅಕ್ಕಿ ಬದಲು ಹಣ ಕೊಡ್ತಿದ್ದೇವೆ. ಗೃಹ ಲಕ್ಷ್ಮಿ ಯೋಜನೆಯಲ್ಲೂ ರಾಜಕೀಯ ಮಾಡಿದರು. ಅತ್ತೆಗೆ ಕೊಡ್ತೀರಾ ಸೊಸೆಗೆ ಕೊಡ್ತೀರಾ ಅಂತಾ ಬೆಂಕಿ ಹಚ್ಚುವ ಕೆಲಸ ಅಂತೆಲ್ಲ ಹೇಳಿದರು. ಪುಣ್ಯಕ್ಕೆ ಇವರ ನಾದಿನಿಗೆ ಕೊಡಲ್ವಾ ಎಂದು ಕೇಳಿಲ್ಲ ಎಂದು ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು.

ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನದಲ್ಲಿ ಗೆಲುವು
ಮುಂದಿನ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುತ್ತೇವೆ. ಜನರು ಬಹಳ ಸಂತೋಷದಿಂದ ಇದ್ದಾರೆ, ನಮ್ಮ ಗ್ಯಾರಂಟಿಗಳಿಂದ ಖುಷಿಯಾಗಿದ್ದಾರೆ ವಿರೋಧ ಪಕ್ಷಗಳು ಮೀಟಿಂಗ್ ಮಾಡಿದ್ದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಇಂಡಿಯಾ ಹೆಸರಲ್ಲಿ ನಾವು ಒಂದಾಗಿದ್ದು ಸಹಿಸಲು ಆಗುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
2015 ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ನಡೆದಿತ್ತು. ಅವತ್ತು ಅನಂತ್ ಕುಮಾರ್ ಮನವಿ ಮಾಡಿದ್ರು ಹೀಗಾಗಿ, ಬಿಜೆಪಿ ನಾಯಕರನ್ನು ರಾಜ್ಯ ಗೆಸ್ಟ್ ಆಗಿ ಮಾಡಿ ಕೊಟ್ಟಿದ್ದೆ. ನಿರ್ಮಾಲಾ ಸೀತಾರಾಮನ್ ಮತ್ತು ಗೆಹ್ಲೋಟ್ ಗೆ ಮಾಡಿ ಕೊಟ್ಟಿದ್ದೆ. ಅವರೇನು ದೇಶದ ವಿಚಾರ ಚರ್ಚೆ ಮಾಡಲು ಬಂದಿದ್ರಾ? ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಅವತ್ತು ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ನೀಡಿದ್ರು. ಇವರೆ ಐಎಎಸ್ ಅಧಿಕಾರಿಗಳ ನೇಮಕ ಕುಮಾರಸ್ವಾಮಿ ಮಾಡಿದ್ರು ಎಂದು ಬಿಜೆಪಿ ಹಾಗೂ ಜೆಡಿಎಸ್ ಶಿಷ್ಟಾಚಾರ ಉಲ್ಲಂಘನೆ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಾವು ಹಿಂದೆಯೂ ನುಡಿದಂತೆ ನಡೆದಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ.ಕರ್ನಾಟಕ ರಾಜ್ಯ ನನ್ನ ಕಾಲದಲ್ಲಿ 1ಲಕ್ಷದ 16 ಸಾವಿರ ಕೋಟಿ ರೂ.ಗಳ ಸಾಲವಾಗಿದೆ. 2018 ಮಾರ್ಚ್ ಅಂತ್ಯಕ್ಕೆ 2,45,000 ಕೋಟಿ ಸಾಲ ಇತ್ತು. 2023 ಕ್ಕೆ ಇದು 5,20,೦00 ಕೋಟಿ ರೂ.ಸಾಲವಿದೆ. ನಾವು ಬಡವರ ಪರವಾಗಿದ್ದೇವೆ.












Click it and Unblock the Notifications