ಸಿದ್ದರಾಮಯ್ಯ ದಲಿತ ವಿರೋಧಿ; ನಮ್ಮ ದುಡ್ಡಿಗೆ ಕೈ ಹಾಕದಿರಲಿ: ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 04: ದಲಿತರನ್ನು ಮತಬ್ಯಾಂಕಾಗಿ ಪರಿಗಣಿಸಿದ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುತ್ತಿದೆ. ಇದು ದುಷ್ಟ ದೃಷ್ಟಿಯ ಸರಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದರು.
ದಲಿತರ ಕಲ್ಯಾಣಕ್ಕಾಗಿ ನೀಡಿದ ಅನುದಾನದಲ್ಲಿ 11 ಸಾವಿರ ಕೋಟಿಯನ್ನು ಕಿತ್ತು ಕಾಂಗ್ರೆಸ್ ಸರಕಾರವು ಅವರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದನ್ನು ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇಂದು ಬಿಜೆಪಿಯ ರಾಜ್ಯ ಮತ್ತು ಬೆಂಗಳೂರು ಮಹಾನಗರ ಎಸ್‍ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದ ಅವರು, ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವ ಸಿದ್ದರಾಮಯ್ಯನವರು ದಲಿತ ವಿರೋಧಿ, ಮೋಸ ಮಾಡುವವರು. ಸಿದ್ದರಾಮಯ್ಯನವರು ನಾಟಕಗಳನ್ನು ಬಿಡಲಿ. ನಮ್ಮ ದುಡ್ಡಿಗೆ ಕೈ ಹಾಕದಿರಲಿ ಎಂದು ಎಚ್ಚರಿಸಿದರು.

ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರಕಾರವು ದಲಿತರ ಕಲ್ಯಾಣದ ವಿಚಾರದಲ್ಲಿ ಕಣ್ಣುಮುಚ್ಚಾಲೆ ಮಾಡುತ್ತಿದೆ. ಇದು ಆಕ್ರೋಶದ ದಿನ. ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಕೊಟ್ಟಾಗ ಎಸ್.ಸಿ.ಎಸ್.ಪಿ.ಟಿ.ಎಸ್.ಪಿ.ಯ ಹಣವನ್ನು ಗ್ಯಾರಂಟಿಗಾಗಿ ಬಳಸುವುದಾಗಿ ತಿಳಿಸಬೇಕಿತ್ತು. ಆದರೆ, ಅದನ್ನು ಮಾಡದೆ ಮೋಸ ಮಾಡುತ್ತಿದ್ದಾರೆ. 52 ಸಾವಿರ ಕೋಟಿ ಕೊಟ್ಟು ಗ್ಯಾರಂಟಿ ಅನುಷ್ಠಾನಕ್ಕೆ ಹಣ ಹೊಂದಿಸಲಾಗುತ್ತಿಲ್ಲ.
ರಾಜ್ಯವನ್ನು ದಿವಾಳಿಯ ಅಂಚಿಗೆ ಒಯ್ಯಲಾಗುತ್ತಿದೆ. ನಮ್ಮದು ಮಿಗತೆ ಬಜೆಟ್. ನಿಮ್ಮದು 12 ಸಾವಿರ ಕೋಟಿ ಕೊರತೆ ಬಜೆಟ್. ಗ್ಯಾರಂಟಿಗೆ ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ ಹಣ ನೀಡಲಾಗುತ್ತಿದೆ. 11 ಸಾವಿರ ಕೋಟಿ ಹಣವನ್ನು ತಳವರ್ಗದ ದಲಿತರಿಗೆ ಮೀಸಲು ಹಣವನ್ನು ಕೊಡುವುದು ಘೋರ ಅನ್ಯಾಯ ಎಂದು ಆಕ್ಷೇಪಿಸಿದರು.
34 ಸಾವಿರ ಕೋಟಿಯಲ್ಲಿ 11 ಸಾವಿರ ತೆಗೆದರೆ 23 ಸಾವಿರ ಕೋಟಿ ಮಾತ್ರ ವಿನಿಯೋಗ ಆಗಲಿದೆ. ಗೃಹಿಣಿಯರಿಗೆ 2 ಸಾವಿರ ರೂಪಾಯಿ ವಿಚಾರಕ್ಕೆ 5,500 ಕೋಟಿಯನ್ನು ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯಿಂದ ನೀಡಿದ್ದಾರೆ. 11 ಸಾವಿರ ಕೋಟಿಯಿಂದ ದಲಿತರ ಅಭಿವೃದ್ಧಿ ಸಾಧ್ಯವಿತ್ತು. ದಲಿತರಿಗೆ ಮನೆ, ಹಾಸ್ಟೆಲ್, ವಿದ್ಯಾರ್ಥಿಗಳಿಗೆ ಶಿಕ್ಷಣ, ಜಾಗ ಖರೀದಿಗೆ ಅದನ್ನು ಬಳಸಬಹುದಿತ್ತು ಎಂದು ಹೇಳಿದರು.

ಹಿಂದಿನ ಕಾಂಗ್ರೆಸ್ ಸರಕಾರವೂ ಈ ವಿಷಯದಲ್ಲಿ ಮೋಸ ಮಾಡಿತ್ತು. 7 ಡಿ ಮೂಲಕ ಬೇರೆ ಉದ್ದೇಶಕ್ಕೆ ಹಣ ಬಳಸಲಾಗಿತ್ತು ಎಂದು ಅವರು ಟೀಕಿಸಿದರು. ನಾವು 5 ಮೆಗಾ ಹಾಸ್ಟೆಲ್ ನಿರ್ಮಿಸಿದ್ದೇವೆ. ಬಾಬು ಜಗಜೀವನ್‍ರಾಂ ಹೆಸರಿನ ನಮ್ಮ ಯೋಜನೆಗಳನ್ನು ಗಾಳಿಗೆ ತೂರಿದ್ದೀರಿ. ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಕೊಡುವ ಯೋಜನೆ ಜಾರಿ ವಿಚಾರದಲ್ಲೂ ಅನ್ಯಾಯ ಆಗಿದೆ ಎಂದು ತಿಳಿಸಿದರು. ನಿಮಗೆ ಬದ್ಧತೆ ಇದ್ದರೆ 7 ಡಿ ಕ್ಲಾಸ್ ತೆಗೆಯಬೇಕಿತ್ತು ಎಂದು ತಿಳಿಸಿದರು.












Click it and Unblock the Notifications