ಅಜ್ಞಾತ ಸ್ಥಳದಲ್ಲಿ ಸಿದ್ದರಾಮಯ್ಯ- ಪರಮೇಶ್ವರ್ ಸಭೆ; ಏನಿದು ರಹಸ್ಯ ಮಾತುಕತೆ?
ಬೆಂಗಳೂರು ಜುಲೈ 31: ರಾಜ್ಯ ವಿಧಾನಸಭಾ ಚುನಾವಣೆಯಲಿ 135 ಸ್ಥಾನಗಳ ಮೂಲಕ ಐತಿಹಾಸಿಕ ಗೆಲುವ ಸಾಧಿಸಿವ ಕಾಂಗ್ರೆಸ್ ಪಾಳಯದಲ್ಲಿ ದಿನದಿಂದ ದಿನಕ್ಕೆ ಅಸಮಾಧಾನಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ವಿರುದ್ದ ಸ್ವಪಕ್ಷದ ನಾಯಕರ ಹೇಳಿಕೆಯೇ ದೊಡ್ಡ ಮುಜುಗರಕ್ಕೆ ಕಾರಣವಾಗಿದೆ.
ಈಗಾಗಲೇ ಸಚಿವ ಸ್ಥಾನದಿಂದ ವಂಚಿತರಾದ ಹಿರಿಯ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಹಿರಂಗವಾಗಿ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಇನ್ನೂ ಕಾಂಗ್ರೆಸ್ ಸರ್ಕಾರ ಬಂದು ಎರಡು ತಿಂಗಳು ಕಳೆದಿದೆಯಷ್ಟೇ,ಈಗಾಗಲೇ ಪಕ್ಷದಲ್ಲಿ ಹಾಗೂ ಸಚಿವರು ಹಾಗೂ ಶಾಸಕರ ನಡುವೆ ಹಲವು ಆಂತರಿಕ ಅಸಮಾಧಾನಗಳು ಬುಗಿಲೆದ್ದಿದ್ದು, ಶಾಸಕಾಂಗ ಸಭೆಯಲ್ಲೂ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಶಾಸಕಾಂಗ ಸಭೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನ 25 ನಾಯಕರಿಗೆ ಆಗಸ್ಟ್ 2 ರಂದು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದು, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಜ್ಞಾತ ಸ್ಥಳದಲ್ಲಿ ರಹಸ್ಯ ಸಭೆ ನಡೆಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹೌದು, ರಾಜ್ಯ ಗೃಹ ಇಲಾಖೆಯಲ್ಲಿ ವರ್ಗಾವಣೆ ಬಾಕಿಯಿರುವ ಹಿನ್ನೆಲೆಯಲ್ಲಿ ಹಾಗೂ ವರ್ಗಾವಣೆ ಪ್ರಕ್ರಿಯೆ ಕುರಿತು ಪಕ್ಷದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾನುವಾರ ಅಜ್ಞಾತ ಸ್ಥಳದಲ್ಲಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನೂ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲು ಸುಮಾರು 30 ಕ್ಕೂ ಹೆಚ್ಚು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಪೊಲೀಸರು ಹಾಗೂ ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಳಂಬದ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿಧಾನಸಭಾ ಚುನಾವಣೆಯಲ್ಲಿ ಕಿರುಕುಳ ನೀಡಿದ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಮಾಡಿದರೂ ಮಾಡಿಲ್ಲ. ಅವರೊಂದಿಗೆ ಹೇಗೆ ಕೆಲಸ ಮಾಡಬೇಕು ಎಂದು ಕೆಲ ನಾಯಕರು ಬೇಸರ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರ ಪ್ರತ್ಯೇಕ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಇನ್ನೂ ಸಿದ್ದರಾಮಯ್ಯ ಅವರನ್ನ ಡಾ ಜಿ ಪರಮೇಶ್ವರ್ ಅಜ್ಞಾತ ಸ್ಥಳದಲ್ಲಿ ಭೇಟಿಯಾಗುವ ಮುನ್ನ ಭಾನುವಾರ ಬೆಳಗ್ಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಡಾ.ಜಿ.ಪರಮೇಶ್ವರ್,ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೇರಿ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಚರ್ಚೆ ನಡೆಸಿದರು. ನಂತರ ಸಿದ್ದರಾಮಯ್ಯ ಅವರ ಜೊತೆಗೆ ಪೊಲೀಸ್ ವರ್ಗಾವಣೆ ಪಟ್ಟಿ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಒಟ್ನಲಿ, ಕಾಂಗ್ರೆಸ್ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದಿದೆಯಷ್ಟೇ, ಆದರೆ, ಸರ್ಕಾರ ಹಾಗೂ ಪಕ್ಷವನ್ನ ಸಮನ್ವಯವಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸಾಕಷ್ಟು ಅಂತರಗಳು ಸೃಷ್ಟಿಯಾಗಿದ್ದು, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ ಎನ್ನಲಾಗಿದೆ.












Click it and Unblock the Notifications